ಒಳ ಮೀಸಲಿಗೆ ಆಗ್ರಹಿಸಿ ಸೆ.12 ರಂದು ತಮಟೆ ಚಳವಳಿ

| Published : Aug 31 2024, 01:39 AM IST

ಸಾರಾಂಶ

ಚಿತ್ರದುರ್ಗ ಕ್ರೀಡಾಭವನದಲ್ಲಿ ನಡೆದ ದಸಂಸ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಸಂಚಾಲಕ ಗುರುಮೂರ್ತಿ ಮಾತನಾಡಿದರು.

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪಿನನ್ವಯ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಕೂಡಲೆ ಜಾರಿಗೊಳಿಸುವಂತೆ ಆಗ್ರಹಿಸಿ ಸೆ.12 ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ತಮಟೆ ಚಳುವಳಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಮೂರ್ತಿ ತಿಳಿಸಿದರು.

ನಗರದ ಕ್ರೀಡಾ ಭವನದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1995ರಲ್ಲಿ ಪ್ರೊ.ಬಿ.ಕೃಷ್ಣಪ್ಪ ಒಳ ಮೀಸಲಾತಿಗಾಗಿ ಮೊಟ್ಟ ಮೊದಲು ಧ್ವನಿ ಎತ್ತಿದರು. ಅಂದಿನಿಂದ ಇಂದಿನವರೆಗೆ ಹೋರಾಟ ನಡೆಯುತ್ತಲೆ ಇದೆ. ಪರಿಶಿಷ್ಟ ಜಾತಿಯಲ್ಲಿ ಉಪ ಜಾತಿಗಳಿಗೆ ಒಳ ಮೀಸಲಾತಿಯನ್ನು ಅನುಷ್ಟಾನಗೊಳಿಸಬೇಕೆಂದು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಿ ಮಂತ್ರಿ ಮತ್ತು ಶಾಸಕರಿಗೆ ಮನವರಿಕೆ ಮಾಡಿಕೊಡಬೇಕಿದೆ. ಮನೆ ಮನೆಗೆ ಕರಪತ್ರಗಳನ್ನು ವಿತರಿಸಿ ಒಳ ಮೀಸಲಾತಿ ಕುರಿತು ದಲಿತರನ್ನು ಜಾಗೃತಿಗೊಳಿಸೋಣ ಎಂದರು.

ಆಂಧ್ರದಲ್ಲಿ ಚಿನ್ನಯ್ಯ 2005 ರಲ್ಲಿ ಒಳ ಮೀಸಲಾತಿಗಾಗಿ ಹೋರಾಟ ಆರಂಭಿಸಿ ನ್ಯಾಯಾಲಯಕ್ಕೆ ಮೊರೆ ಹೋದಾಗ ಅಂದಿನ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿದ್ದ ಸಂತೋಷ್ ಹೆಗ್ಡೆ ಸಂವಿಧಾನ ಬದ್ಧವಾಗಿ ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳಿಗೆ ಮೀಸಲಾತಿ ನೀಡಲು ಅಧಿಕಾರ ವಿಲ್ಲದ ಕಾರಣ ರಾಜ್ಯ ಸರ್ಕಾರಕ್ಕೂ ಈ ಸಂಬಂಧ ಅಧಿಕಾರ ಇರುವುದಿಲ್ಲ ಎಂದು ತೀರ್ಪು ನೀಡಿದರು. ಅಂದಿನಿಂದ ತಮಿಳುನಾಡು, ಪಂಜಾಬ್, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಒಳ ಮೀಸಲಾತಿಗಾಗಿ ಹೋರಾಟ ಶುರುವಾಯಿತು ಎಂದು ಹೇಳಿದರು.

ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕೊಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎನ್ನುವ ಸಂವಿಧಾನಾತ್ಮಕ ತೀರ್ಪು ನೀಡಿರುವುದರಿಂದ ಮುಂದಿನ ತಿಂಗಳು ರಾಜ್ಯಾದ್ಯಂತ ತಮಟೆ ಚಳುವಳಿ ನಡೆಸಿ ಮೈಮರೆತು ಮಲಗಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸಲಾಗುವುದು. ಹೋರಾಟಕ್ಕೆ ದಲಿತರು ಸಿದ್ಧರಿರಬೇಕೆಂದು ಗುರುಮೂರ್ತಿ ಕರೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ ಮಾತನಾಡಿ, ಕಳೆದ 30 ವರ್ಷಗಳಿಂದಲೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಳ ಮೀಸಲಾತಿ ಜಾರಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಶತಶತಮಾನಗಳಿಂದಲೂ ಶೋಷಣೆ, ಹಿಂಸೆ, ದೌರ್ಜನ್ಯ, ಬಹಿಷ್ಕಾರ ಅನುಭವಿಸಿಕೊಂಡು ಬರುತ್ತಿರುವ ದಲಿತರು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿರುವುದರಿಂದ ರಾಜ್ಯ ಸರ್ಕಾರ ವಿಳಂಭ ಮಾಡದೆ ಒಳ ಮೀಸಲಾತಿ ಜಾರಿಗೆ ತರಬೇಕು. ಇಲ್ಲದಿದ್ದರೆ ಜನಪ್ರತಿನಿಧಿಗಳನ್ನು ತಡೆದು ಘೇರಾವ್ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ದಲಿತ ಸಂಘರ್ಷ ಸಮಿತಿ ವಿಜಯ ನಗರ ಸಂಚಾಲಕ ಎಸ್.ದುರುಗೇಶ್ ಮಾತನಾಡಿ, ಸರ್ಕಾರ ಸದಾಶಿವ ಆಯೋಗದ ವರದಿ, ಮಾಧುಸ್ವಾಮಿ ಆಯೋಗದ ವರದಿ ಇವೆರಡರಲ್ಲಿ ಯಾವುದನ್ನು ಜಾರಿ ಮಾಡುತ್ತದೋ ಎನ್ನುವ ಗೊಂದಲವಿದೆ. ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿ ಮಾಧುಸ್ವಾಮಿ ಆಯೋಗದ ವರದಿಯನ್ನು ಕೇಂದ್ರಕ್ಕೆ ಕಳಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಪಡೆದು ಅಂತಿಮ ತೀರ್ಪಿನ ಬಗ್ಗೆ ಶಿಬಿರ ಏರ್ಪಡಿಸಿ ಕಾನೂನು ತಜ್ಞರ ಜೊತೆ ಚರ್ಚಿಸಬೇಕು ಎಂದು ಸಭೆಯಲ್ಲಿ ಸಲಹೆ ನೀಡಿದರು.

ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕರಾದ ಹನುಮಂತಪ್ಪ ಕಾಕರ್‍ಗಲ್, ಗಂಗಾಧರ ಚಿಕ್ಕಬಳ್ಳಾಪುರ, ರಮೇಶ್ ಮಾದರ್ ಬೆಳಗಾವಿ, ಬಸವರಾಜ್, ದಾವಣಗೆರೆ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್, ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ.ಏಳುಕೋಟಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹೇಮ, ಲಾವಣ್ಯ ಇದ್ದರು.