ಸಾರಾಂಶ
ಕೆ.ಆರ್ಮ್ ಸ್ಟ್ರಾಂಗ್ ಅವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಮನವಿ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬಳ್ಳಾರಿ
ತಮಿಳುನಾಡಿನ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ರಾಜ್ಯಾಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಅವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಪಕ್ಷದ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಕಳಿಸಿಕೊಡಲಾಯಿತು.ಕಳೆದ ಜುಲೈ 5ರಂದು ಸಂಜೆ 7 ಗಂಟೆ ವೇಳೆ ತಮಿಳುನಾಡಿನ ರಾಜಧಾನಿ ಚೆನ್ನೈನ ಪೆರಂಬೂರಿನ ಜನನಿಬಿಡ ವಸತಿ ಪ್ರದೇಶದಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಹತ್ಯೆಯ ಹಿಂದೆ ಬಲವಾದ ರಾಜಕೀಯ ಕೈವಾಡ ಹಾಗೂ ಷಡ್ಯಂತ್ರವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಹತ್ಯೆ ಮುನ್ನ ಹಂತಕರು ಬಿಎಸ್ಪಿ ರಾಜ್ಯಾಧ್ಯಕ್ಷರ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಇದು ತಮಿಳುನಾಡಿನ ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು.
ಆರ್ಮ್ ಸ್ಟ್ರಾಂಗ್ ಅವರು ಚೆನ್ನೈ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾಗಿದ್ದು, ಲಕ್ಷಾಂತರ ಅಭಿಮಾನಿ ಬಳಗ ಹೊಂದಿದ್ದ ಜನನಾಯಕರಾಗಿದ್ದರು. ತಮಿಳುನಾಡಿನಲ್ಲಿ ಎಸ್ಸಿ-ಎಸ್ಟಿ ಹಾಗೂ ಒಬಿಸಿ ಸಮುದಾಯಗಳ ಹಿತ ಕಾಯುವ ಯೋಧನಂತೆ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳನ್ನು ಗಟ್ಟಿಗೊಳಿಸಲು ಬಿಎಸ್ಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದರು. ಅವರ ರಾಜಕೀಯ, ಸಾಮಾಜಿಕವಾಗಿ ಬೆಳವಣಿಗೆ ಸಹಿಸದ ದುಷ್ಕರ್ಮಿಗಳು ಹಾಗೂ ದಲಿತ ವಿರೋಧಿ ದುಷ್ಟಶಕ್ತಿಗಳು ಸಂಚು ರೂಪಿಸಿ ಆರ್ಮ್ ಸ್ಟ್ರಾಂಗ್ ಅವರನ್ನು ಕೊಲೆಗೈಯಲಾಗಿದೆ ಎಂಬ ಗುಮಾನಿಗಳಿದ್ದು, ಪ್ರಕರಣದ ಹಿಂದೆ ಇರುವವರು ಯಾರು ಎಂಬುದು ಬಯಲಾಗಬೇಕು. ಹಂತಕರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಎಸ್ಪಿ ಜಿಲ್ಲಾಧ್ಯಕ್ಷ ಎಚ್. ಮುನಿಸ್ವಾಮಿ ಮಾತನಾಡಿ, ಆರ್ಮ್ ಸ್ಟ್ರಾಂಗ್ ಅವರ ಕೊಲೆಯ ಹಿಂದಿನ ರಹಸ್ಯ ಬಯಲಾಗಬೇಕು. ದುಷ್ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ನೀಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಪ್ರಮುಖರಾದ ವಿ.ಗೋವಿಂದಪ್ಪ, ಎಂ. ರಮೇಶ್, ಉಮಾಪತಿ, ಸಾಮ್ರಾಟ್, ವಿ. ಕೃಷ್ಣಪ್ಪ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಮನವಿಪತ್ರ ಸ್ವೀಕರಿಸಿದರು.