ಉಳ್ಳಾಲದ 5 ಗ್ರಾಮ, 12 ವಾರ್ಡ್‌ಗಳಿಗೆ ಟ್ಯಾಂಕರ್‌ ನೀರು

| Published : Mar 28 2024, 12:54 AM IST

ಸಾರಾಂಶ

ಅಗತ್ಯ ಇರುವ ಕಡೆಗಳಲ್ಲಿ ನೀರು ಸರಬರಾಜು ಮಾಡಲು ಐದು ಖಾಸಗಿ ಬೋರ್‌ವೆಲ್‌ಗಳನ್ನು ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಡಿಸಿ ಮುಲ್ಲೈ ಮುಗಿಲನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಉಳ್ಳಾಲ ತಾಲೂಕಿನ ಐದು ಗ್ರಾಮ ಪಂಚಾಯಿತಿಗಳಲ್ಲಿ 9 ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಜತೆಗೆ ಉಳ್ಳಾಲ, ಕೋಟೆಕಾರು ಮತ್ತು ಸೋಮೇಶ್ವರ ನಗರ ಸ್ಥಳೀಯ ಸಂಸ್ಥೆಗಳ 12 ವಾರ್ಡ್‌ಗಳಿಗೆ 10 ಟ್ಯಾಂಕರ್ ಮೂಲಕ ನೀರು ವಿತರಿಸಲಾಗುತ್ತಿದೆ. ಉಳಿದಂತೆ ಸದ್ಯಕ್ಕೆ ಜಿಲ್ಲೆಯಲ್ಲಿ ನೀರಿನ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ಇರುವ ಕಡೆಗಳಲ್ಲಿ ನೀರು ಸರಬರಾಜು ಮಾಡಲು ಐದು ಖಾಸಗಿ ಬೋರ್‌ವೆಲ್‌ಗಳನ್ನು ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಹೇಳಿದರು.ಜಿಲ್ಲೆಯ ಎಲ್ಲ ಅಣೆಕಟ್ಟುಗಳಲ್ಲಿನ ನೀರಿನ ಮಟ್ಟವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಮಂಗಳೂರು ನಗರ, ಉಳ್ಳಾಲ, ಮೂಲ್ಕಿ ಮತ್ತು ಇತರ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಂ ನೀರಿನ ಮಟ್ಟ ಬುಧವಾರ 5.48 ಮೀ. ಇದೆ. ತುಂಬೆ ಅಣೆಕಟ್ಟಿನ ಮೇಲ್ಭಾಗದಲ್ಲಿರುವ ಎಎಂಆರ್ ಅಣೆಕಟ್ಟಿನ ನೀರಿನ ಮಟ್ಟ 17.63 ಮೀಟರ್ (ಗರಿಷ್ಠ 18.9 ಮೀ.), ಹರೇಕಳ ಅಣೆಕಟ್ಟಿನಲ್ಲಿ 1.95 ಮೀಟರ್ (ಗರಿಷ್ಠ 2 ಮೀ.) ಮತ್ತು ಎಎಂಆರ್ ಅಣೆಕಟ್ಟಿನ ಮೇಲ್ಭಾಗದಲ್ಲಿರುವ ಬಿಳಿಯೂರು ವೆಂಟೆಡ್ ಡ್ಯಾಂನಲ್ಲಿ ನಾಲ್ಕು ಮೀಟರ್ ನೀರಿದೆ. ಆದ್ದರಿಂದ ನೀರಿನ ರೇಶನಿಂಗ್‌ ಮಾಡುವ ಪ್ರಮೇಯ ಈ ಬಾರಿ ಬರಲಿಕ್ಕಿಲ್ಲ. ಆದರೆ ಬೇಸಗೆ ಧಗೆ ಜೋರಾಗಿರುವುದರಿಂದ ಕಾದು ನೋಡಬೇಕು. ಅದಕ್ಕಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.ಕೃಷಿಗೆ ನೀರು ಇಲ್ಲವೇ ಇಲ್ಲ: ಕೈಗಾರಿಕೆಗಳಿಗೆ ಎಎಂಆರ್ ಅಣೆಕಟ್ಟಿನಿಂದ ಕೇವಲ ಶೇ.50 ನೀರನ್ನು ಮಾತ್ರ ತೆಗೆದುಕೊಳ್ಳಲು ಅನುಮತಿಸಲಾಗಿದೆ. ಆದರೆ, ಕೃಷಿ ಉದ್ದೇಶಕ್ಕೆ ಅಣೆಕಟ್ಟಿನಿಂದ ನೀರು ತೆಗೆಯುವಂತಿಲ್ಲ. ಅಣೆಕಟ್ಟಿನಿಂದ ಕೃಷಿಗೆ ಅಕ್ರಮವಾಗಿ ನೀರು ಹರಿಸುತ್ತಿರುವುದನ್ನು ಪರಿಶೀಲಿಸಲು ಎಂಸಿಸಿ, ಗ್ರಾಮೀಣ ನೀರು ಸರಬರಾಜು, ಎಂಎಸ್‌ಇಝಡ್, ಮೆಸ್ಕಾಂ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಐದು ಮೀ. ತಲುಪಿದರೆ ಎಎಂಆರ್ ಅಣೆಕಟ್ಟಿನಿಂದ ನೀರು ಬಿಡಲಾಗುವುದು. ಎಎಂಆರ್ ಅಣೆಕಟ್ಟಿನ ಮಟ್ಟ 16 ಮೀಟರ್‌ಗೆ ಇಳಿದರೆ ಬಿಳಿಯೂರು ಡ್ಯಾಮ್‌ನಿಂದ ಬಿಡಲಾಗುತ್ತದೆ ಎಂದರು.ಜನತೆ ನೀರಿನ ಬಗ್ಗೆ ಕಾಳಜಿ ವಹಿಸಬೇಕು. ವಾಹನಗಳ ಸ್ವಚ್ಛತೆ ಇತ್ಯಾದಿಗಳಿಗೆ ನೀರು ಪೋಲು ಮಾಡದೆ, ನೀರನ್ನು ವಿವೇಚನೆಯಿಂದ ಬಳಸಬೇಕು ಎಂದು ಮುಲ್ಲೈ ಮುಗಿಲನ್‌ ಕರೆ ನೀಡಿದ್ದಾರೆ.