ಚನ್ನಗಿರಿ ಅಡಕೆ ತೋಟಗಳ ಉಳಿಸಲು ಟ್ಯಾಂಕರ್ ನೀರೇ ಗತಿ!

| Published : Mar 24 2024, 01:30 AM IST

ಚನ್ನಗಿರಿ ಅಡಕೆ ತೋಟಗಳ ಉಳಿಸಲು ಟ್ಯಾಂಕರ್ ನೀರೇ ಗತಿ!
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ತಾಲೂಕಿನಲ್ಲಿ ಅತಿ ಹೆಚ್ಚು ಅಡಕೆ ಬೆಳೆಗಾರರಿದ್ದು, ಮಳೆಯ ಕೊರತೆಯಿಂದ ಅಡಕೆ ತೋಟಗಳು ಒಣಗಲು ಆರಂಭಿಸಿವೆ. ಪರಿಣಾಮ ರೈತರು ಟ್ಯಾಂಕರ್‌ಗಳ ಮೂಲಕ ನೀರನ್ನು ತರಿಸಿಕೊಂಡು ಅಡಕೆ ತೋಟಗಳಿಗೆ ಹರಿಸಿ, ಬೆಳೆಗಳ ಉಳಿಸಿಕೊಳ್ಳುವ ಭಗೀರಥ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಬಾ.ರಾ.ಮಹೇಶ್, ಚನ್ನಗಿರಿ

ಕನ್ನಡಪ್ರಭ ವಾರ್ತೆ, ಚನ್ನಗಿರಿ

ತಾಲೂಕಿನಲ್ಲಿ ಅತಿ ಹೆಚ್ಚು ಅಡಕೆ ಬೆಳೆಗಾರರಿದ್ದು, ಮಳೆಯ ಕೊರತೆಯಿಂದ ಅಡಕೆ ತೋಟಗಳು ಒಣಗಲು ಆರಂಭಿಸಿವೆ. ಪರಿಣಾಮ ರೈತರು ಟ್ಯಾಂಕರ್‌ಗಳ ಮೂಲಕ ನೀರನ್ನು ತರಿಸಿಕೊಂಡು ಅಡಕೆ ತೋಟಗಳಿಗೆ ಹರಿಸಿ, ಬೆಳೆಗಳ ಉಳಿಸಿಕೊಳ್ಳುವ ಭಗೀರಥ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಚನ್ನಗಿರಿ ತಾಲೂಕಿನಲ್ಲಿ ಅಂತರ್ಜಲಮಟ್ಟ 800 ಅಡಿಯಿಂದ 1000 ಅಡಿಗಳ ಮೀರಿ ಕುಸಿದಿದೆ. ಸಾವಿರ ಅಡಿಗಳವರೆಗೆ ಬೋರ್‌ ಕರೆಸಿದರೂ, ನೀರಿನ ಸುಳಿವು ಸಿಗುತ್ತಿಲ್ಲ. ಅಡಕೆ ಗಿಡ ತಾಯಿಬೇರು ಇಲ್ಲದೇ ಕವಲು ಬೇರುಗಳನ್ನು ಹೊಂದಿರುವ ಗಿಡವಾಗಿದೆ. ಕಾಲಕ್ಕೆ ತಕ್ಕಂತೆ ಭೂಮಿಯು ಹಸಿಯಾಗಿದ್ದರೆ ಉತ್ತಮವಾದ ಅಡಕೆ ಫಸಲು ಕಾಣಲು ಸಾಧ್ಯ. 10ರಿಂದ 15 ದಿನಗಳ ಕಾಲ ಅಡಕೆ ಗಿಡಗಳಿಗೆ ನೀರು ಸಿಗದಿದ್ದರೆ ಗಿಡಗಳು ಸೊರಗಿ, ಬತ್ತಿಹೋಗುತ್ತವೆ. ಇದರನ್ನು ಅರಿತಿರುವ ಅಡಕೆ ಬೆಳೆಗಾರರು ನೀರಿನ ಟ್ಯಾಂಕರ್‌ಗಳ ಮೂಲಕ ತೋಟಗಳಿಗೆ ನೀರನ್ನು ತರಿಸಿಕೊಂಡು ಹರಿಸುತ್ತಿದ್ದಾರೆ.

ರೈತರು ತೋಟಗಳಿಗೆ ನೀರು ಹರಿಸಲು ತರಿಸುತ್ತಿರುವ ಟ್ಯಾಂಕರ್‌ಗಳಲ್ಲಿ ನೀರು ಸಂಗ್ರಹಕ್ಕೆ ಅನುಗುಣವಾಗಿ ಟ್ಯಾಂಕರ್ ನೀರಿನ ಬೆಲೆ ನಿಗದಿಯಾಗಲಿದೆ. ₹4000, ₹6000, ₹8000ದಂತೆ ಹಣ ನೀಡಿ, ನೀರು ಖರೀದಿಸುತ್ತಿದ್ದಾರೆ. ಶ್ರೀಮಂತ ಬೆಳೆಗಾರರು ಈ ರೀತಿಯ ಭಗೀರಥ ಪ್ರಯತ್ನಕ್ಕೆ ಮುಂಗಾಗಿದ್ದಾರೆ. ಆದರೆ, ಸಣ್ಣ ಅಡಕೆ ಬೆಳೆಗಾರರು ತಮ್ಮ ಬೆಳೆ ಉಳಿಸುವುದು ಹೇಗೆ ಎಂಬ ಚಿಂತೆಗೆ ಬಿದ್ದು, ಮುಗಿಲತ್ತ ಮುಖ ಮಾಡಿದ್ದಾರೆ.

ಅಡಕೆ ಬೆಳೆಗಾರ ರೈತ ದಿಗ್ಗೇನಹಳ್ಳಿ ನಾಗರಾಜ್‌ ಹೇಳುವಂತೆ, ಚನ್ನಗಿರಿ ತಾಲೂಕಿನಲ್ಲಿ 200 ಟ್ರ್ಯಾಕ್ಟರ್‌ ಟ್ಯಾಂಕರ್‌ಗಳು, 75 ಲಾರಿ ಟ್ಯಾಂಕರ್‌ಗಳು ತೋಟಗಳಿಗೆ ನೀರು ಪೂರೈಕೆಯಲ್ಲಿ ತೊಡಗಿವೆ. ಟ್ಯಾಂಕರ್‌ಗಳನ್ನು ಹೊಂದಿರುವವರು ಭದ್ರಾನಾಲೆ, ಬೋರ್ ವೇಲ್ ಮತ್ತು ನೀರು ಇರುವ ಕೆರೆಗಳಿಂದ ನೀರನ್ನು ತುಂಬಿಕೊಂಡು ಬೇಡಿಕೆಗೆ ತಕ್ಕಂತೆ ತೋಟಗಳಿಗೆ ನೀರು ಪೂರೈಸುತ್ತಿದ್ದಾರೆ. ಆದರೆ, ಇದು ರೈತರಿಗೆ ಆರ್ಥಿಕವಾಗಿ ಹೊರೆಯಾಗಿದೆ ಎಂದು ಹೇಳುತ್ತಾರೆ.

ಹೊಸದಾಗಿ 1 ಎಕರೆ ಅಡಕೆ ತೋಟ ಮಾಡಲು ಕೊಳವೆಬಾವಿ, ವಿದ್ಯುತ್ ಸಂಪರ್ಕ, ತಡೆಬೇಲಿ, ವಿದ್ಯುತ್ ನ ಪರಿವರ್ತಕ, ಅಡಕೆ ಸಸಿಗಳು ಇಷ್ಟು ಸೇರಿ ₹6.50 ಲಕ್ಷ ಹಣ ವೆಚ್ಚವಾಗುತ್ತದೆ. ಅಡಕೆ ಸಸಿಗಳ ಕೂರಿಸಿದ ಮೇಲೆ ಕಾಲಕ್ಕೆ ತಕ್ಕಂತೆ ಗಿಡಗಳಿಗೆ ನೀರು ಹರಿಸುತ್ತ 6ರಿಂದ 7 ವರ್ಷಗಳ ಕಾಲ ಗಿಡಗಳನ್ನು ಕಾಪಾಡಬೇಕು. ಹೀಗಾದಲ್ಲಿ 7ನೇ ವರ್ಷದಿಂದ ಅಡಕೆ ಫಸಲನ್ನು ಆರಂಭವಾಗುತ್ತದೆ. ಫಸಲು ಕೊಡುವ ಆರು ವರ್ಷದ ಮಧ್ಯದಲ್ಲಿ ಮಳೆ ಬಾರದೇ, ಕೊಳವೆಬಾವಿಯಲ್ಲಿ ನೀರು ಖಾಲಿಯಾದರೆ ಸಾಕು, ರೈತರ ಶ್ರಮವೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ಕಲಸಿದಂತೆ ಆಗುತ್ತದೆ. ಈಗ ಹೇಳಿಕೇಳಿ ಬರಬಿದ್ದಿದೆ. ಅಡಕೆ ಬೆಳೆಗಾರರು ಮಳೆಗಾಗಿ ಕಾದು ಕೂರುವಂತಾಗಿದೆ ಎನ್ನುತ್ತಾರೆ ಮುದಿಗೆರೆ ಸತೀಶ್, ಎ.ಬಿ.ಮಹೇಂದ್ರ.

- - - ಬಾಕ್ಸ್‌ ಕಳೆದ ವರ್ಷವೂ ಮಳೆ ಕೊರತೆ ಕಳೆದ ವರ್ಷವೂ ಸಕಾಲಕ್ಕೆ ಮಳೆ ಬಾರದ ಕಾರಣ ಚನ್ನಗಿರಿ ತಾಲೂಕಿನಲ್ಲಿ ನೂರಾರು ಎಕರೆ ಅಡಕೆ ತೋಟಗಳು ಒಣಗಿಹೋಗಿದ್ದವು. ಅಂತಹ ಪರಿಸ್ಥಿತಿ ಬರುವುದು ಬೇಡ ಎಂಬುದೇ ರೈತರ ಪ್ರಾರ್ಥನೆ. ಎಲ್ಲದಕ್ಕೂ ವರುಣನೇ ಉತ್ತರ.

- - - -23ಕೆಸಿಎನ್‌ಜಿ3: ಚನ್ನಗಿರಿ ತಾಲೂಕಿನ ಅಡಕೆ ತೋಟದಲ್ಲಿ ಕೃಷಿ ಹೊಂಡಕ್ಕೆ ಟ್ಯಾಂಕರ್ ನೀರು ತುಂಬಿಸಿಕೊಳ್ಳುತ್ತಿರುವುದು.

-23ಕೆಸಿಎನ್‌ಜಿ4: ಖಾಸಗಿ ಬೋರ್‌ವೇಲ್‌ನಲ್ಲಿ ಟ್ಯಾಂಕರ್‌ಗೆ ನೀರು ತುಂಬಿಸಿಕೊಳ್ಳುತ್ತೀರುವುದು.

-23ಕೆಸಿಎನ್‌ಜಿ5: ನೀರಿಲ್ಲದೆ ಒಣಗುತ್ತಿರುವ ಅಡಿಕೆ ತೋಟ.