ಪ್ರಜಾಭುತ್ವ ಗಟ್ಟಿಗೊಳಿಸಲು ಮತದಾನ ಮಾಡಿ

| Published : Mar 24 2024, 01:30 AM IST

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನವು ಮೇ ೭ರಂದು ನಡೆಯಲ್ಲಿದ್ದು, ಮತದಾನದಿಂದ ಯಾರು ದೂರ ಉಳಿಯಬಾರದು

ಗಜೇಂದ್ರಗಡ: ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಸರ್ಕಾರ ಅವಶ್ಯಕವಾಗಿದ್ದು, ಉತ್ತಮ ಪ್ರಜೆ ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಲು ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ತಾಪಂ ಇಒ,ಮಾ ದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಡಾ. ಡಿ ಮೋಹನ್ ಹೇಳಿದರು.

ಪಟ್ಟಣದಲ್ಲಿ ತಾಪಂ, ತಾಲೂಕು ಸ್ವೀಪ್ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಸಹಯೋಗದಲ್ಲಿ ಶನಿವಾರ ಲೋಕಸಭಾ ಚುನಾವಣೆ-೨೦೨೪ರ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನವು ಮೇ ೭ರಂದು ನಡೆಯಲ್ಲಿದ್ದು, ಮತದಾನದಿಂದ ಯಾರು ದೂರ ಉಳಿಯಬಾರದು. ಮತದಾನ ಎಂಬುದು ವ್ಯಕ್ತಿಯ ಹಕ್ಕು ಹಾಗೂ ಓರ್ವ ಮತದಾರನ ಅತ್ಯಂತ ಪವಿತ್ರ ಕೆಲಸವಾಗಿದೆ. ಚುನಾವಣೆಯಲ್ಲಿ ಶೇ.೧೦೦ ರಷ್ಟು ಮತದಾನದ ಗುರಿ ಹೊಂದಲಾಗಿದ್ದು ಮತದಾರರ ಪ್ರಭುಗಳಿಗೆ ಮತದಾನದ ಮಹತ್ವ ತಿಳಿಸಲು ಜಾಗೃತಿ ಜಾಥಾ ಸೇರಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಪ್ರತಿಯೊಬ್ಬರು ಮತದಾನದ ದಿನದಂದು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಆಶಯ ಯಶಸ್ವಿಗೊಳಿಸಿ ಎಂದರು.

ಚುನಾವಣೆಯನ್ನು ಹಬ್ಬದಂತೆ ಆಚರಿಸಬೇಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಉದ್ದೇಶದಿಂದ ವಿನೂತನವಾಗಿ ಜಾಗೃತಿ ಹಮ್ಮಿಕೊಂಡು ಮತದಾನ ಕುರಿತು ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ೧೮ ವರ್ಷ ತುಂಬಿದ ಯುವ ಮತದಾರರು ಸ್ವೀಪ್ ಆಪ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಮುಂದಾಗಬೇಕು ಎಂದರು.

ಅದ್ಧೂರಿ ಜಾಗೃತಿ ಜಾಥಾ: ಪಟ್ಟಣದ ತಹಸೀಲ್ದಾರ್ ಕಚೇರಿಯಿಂದ ಆರಂಭವಾದ ಜಾಗೃತಿ ಜಾಥಾವು ಕಾಲಕಾಲೇಶ್ವರ ವೃತ್ತ, ತರಕಾರಿ ಮಾರುಕಟ್ಟೆ, ದುರ್ಗಾ ಸರ್ಕಲ್, ಮೈಸೂರು ಮಠ ರಸ್ತೆ ಮಾರ್ಗವಾಗಿ ಕುಷ್ಟಗಿ ರಸ್ತೆ ಮೂಲಕ ಕೆಕೆ ಸರ್ಕಲ್‌ಗೆ ಬಂದು ತಲುಪಿದ ಬಳಿಕ ಮಾನವ ಸರಪಳಿ ನಿರ್ಮಿಸಿ ಚುನಾವಣಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ ವೇಳೆ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ವೀರುಪಾಕ್ಷಯ್ಯ ಹಿರೇಮಠ, ಮಂಜುಳಾ ಗುನಾರಿ, ರಾಧಿಕಾ, ತಾಪಂ ಸಿಬ್ಬಂದಿಗಳಾದ ಪ್ರಿಯಾಂಕಾ ಅಂಗಡಿ, ವಸಂತ ಅನ್ವರಿ, ಮಂಜುನಾಥ ಹಳ್ಳದ, ಚನ್ನು ಪಮ್ಮಾರ, ಗ್ರಾಮ ಕಾಯಕ ಮಿತ್ರರು, ಎನ್.ಆರ್.ಆಎಲ್.ಎಂ ಸಿಬ್ಬಂದಿಗಳು, ಪುರಸಭೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರು ಭಾಗವಹಿಸಿದ್ದರು.