ತಣ್ಣೀರುಪಂತ ಗ್ರಾ.ಪಂ. ತ್ಯಾಜ್ಯ ನಿರ್ವಹಣೆ ಲೋಪ: ಆರೋಪ

| Published : Aug 08 2024, 01:33 AM IST

ತಣ್ಣೀರುಪಂತ ಗ್ರಾ.ಪಂ. ತ್ಯಾಜ್ಯ ನಿರ್ವಹಣೆ ಲೋಪ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದಲ್ಲಿ ತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ ಪ್ರತಿ ಅಂಗಡಿ ಹಾಗೂ ಮನೆಗಳಿಂದ ಶುಲ್ಕವನ್ನು ಪಡೆಯುತ್ತಿದ್ದರೂ ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲು ಅಸಡ್ಡೆ ತೋರಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ತಣ್ರುಣೀ ಗ್ರಾಮ ಪಂಚಾಯಿತಿ, ತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ ಗ್ರಾಮಸ್ಥರಿಂದ ಶುಲ್ಕ ಪಡೆದು ಗ್ರಾಮಸ್ಥರಿಗೆ ರೋಗರುಜಿನಗಳನ್ನು ಉಡುಗೊರೆಯಾಗಿ ನೀಡುತ್ತಿದೆ ಎಂದು ತಣ್ಣೀರುಪಂತ ಗ್ರಾಮಸ್ಥರು ದೂರಿದ್ದಾರೆ.

ಸಂಗ್ರಹಿಸಲ್ಪಟ್ಟ ತ್ಯಾಜ್ಯಗಳನ್ನು ಗ್ರಾಮದ ಅಳಕೆ ಸಮೀಪದ ಪದೆಂಜಲಾಪು ಎಂಬಲ್ಲಿ ಕೆರೆಯೊಂದಕ್ಕೆ ಎಸೆದು ಗಬ್ಬು ನಾರುತ್ತಿದ್ದು, ಕಾಡು ಹಂದಿ, ನಾಯಿ, ಕಾಗೆ ತ್ಯಾಜ್ಯಗಳನ್ನು ಎಳೆದಾಡಿ ಪರಿಸರವಿಡೀ ದುರ್ನಾತಮಯವಾಗಿದೆ.ಪಂಚಾಯಿತಿಗೆ ಸೇರಿದ ೧೩ ಎಕ್ರೆ ಜಾಗ ಇಲ್ಲಿದೆ. ಮುರಕಲ್ಲಿನ ಗಣಿಗಾರಿಕೆ ಇಲ್ಲಿ ನಡೆಯುತ್ತಿತ್ತು. ಪ್ರಸಕ್ತ ಇದರಲ್ಲಿ ಕೆರೆಯಂತೆ ನೀರು ಸಂಗ್ರಹಗೊಳ್ಳುತ್ತಿದೆ. ಈ ಸ್ಥಳದಲ್ಲಿ ಊರಿನಿಂದ ಸಂಗ್ರಹವಾದ ತ್ಯಾಜ್ಯವನ್ನು ಎಸೆಯುತ್ತಿರುವ ಬಗ್ಗೆ ಸ್ಥಳೀಯರು ಆಕ್ಷೇಪವೆತ್ತಿದ್ದಾಗ ಎಸೆಯಲಾದ ತ್ಯಾಜ್ಯಕ್ಕೆ ಮಣ್ಣು ಹಾಸಿ ಕೃತ್ಯವನ್ನು ಮರೆ ಮಾಚಲಾಗಿದೆ. ಬಳಿಕ ಪಕ್ಕದ ಕೆರೆಗೂ ತ್ಯಾಜ್ಯವನ್ನು ಎಸೆಯಲಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಇದರಿಂದಾಗಿ ಈ ಪರಿಸರ ಸಾಂಕ್ರಮಿಕ ರೋಗಗಳನ್ನು ಪ್ರಸಹರಿಸುವ ಕೇಂದ್ರಗಳಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಯ ಎಂಬಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ವ್ಯವಸ್ಥಿತವಾದ ತ್ಯಾಜ್ಯ ಸಂಸ್ಕರಣೆ ಘಟಕವಿದ್ದರೂ ಯಾವುದೇ ಭೀತಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುತ್ತಿರುವುದು ವಿಪರ‍್ಯಾಸ. ಗ್ರಾಮದಲ್ಲಿ ತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ ಪ್ರತಿ ಅಂಗಡಿ ಹಾಗೂ ಮನೆಗಳಿಂದ ಶುಲ್ಕವನ್ನು ಪಡೆಯುತ್ತಿದ್ದರೂ ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲು ಅಸಡ್ಡೆ ತೋರಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ.ಸಮಸ್ಯೆಯ ಗಂಭೀರತೆ ಬಗ್ಗೆ ಈಗಾಗಲೇ ಸ್ಥಳೀಯ ಪಂಚಾಯಿತಿ ಗಮನಕ್ಕೆ ತಂದಿರುವೆ. ಪದೇಂಜಲಾಪು ಜಾಗ ಪಂಚಾಯಿತಿಗೆ ಸೇರಿದಾಗಿದ್ದು, ಈ ಹಿಂದೆ ಇಲ್ಲಿ ಕಲ್ಲಿನ ಕೋರೆಯಾಗಿತ್ತು. ಅದೀಗ ಕೆರೆಯಾಗಿದೆ. ಊರಿನ ಜನರ ಆರೋಗ್ಯದ ದೃಷ್ಟಿಯಿಂದಲಾದರೂ ಈ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕು.

। ಪ್ರಭಾಕರ ಪಿ., ಸ್ಥಳೀಯ ಗ್ರಾಮಸ್ಥ---------------

ತ್ಯಾಜ್ಯವನ್ನು ಅನಾರೋಗ್ಯಕರವಾಗಿ ಎಸೆಯಲಾಗುತ್ತಿದೆ ಎಂಬ ದೂರಿನ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಈ ಹಿಂದಿನ ತ್ಯಾಜ್ಯ ನಿರ್ವಹಣೆ ನಡೆಸುತ್ತಿದ್ದವರ ಬಗ್ಗೆ ಬಂದ ದೂರಿನ ಬಳಿಕ ಈಗ ತ್ಯಾಜ್ಯ ನಿರ್ವಹಣೆಯನ್ನು ಮಹಿಳೆಯರ ಸಂಜೀವಿನಿ ಒಕ್ಕೂಟಕ್ಕೆ ನೀಡಲಾಗಿದೆ. ತಪ್ಪೆಸಗಿದ್ದರೆ ತಿದ್ದುವುದಕ್ಕೆ ಸೂಚಿಸುತ್ತೇವೆ.

। ಶ್ರವಣ್, ಪಿಡಿಒ

----------------

ಪದೆಂಜಲಾವು ಪ್ರದೇಶದಲ್ಲಿ ತ್ಯಾಜ್ಯ ಎಸೆಯಲಾಗುತ್ತಿರುವ ಬಗ್ಗೆ ಈ ಮೊದಲು ಮಾಹಿತಿ ಇರಲಿಲ್ಲ. ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಣೆಯ ಘಟಕವೇ ಇರುವಾಗ ಬೇರೆಲ್ಲೂ ತ್ಯಾಜ್ಯ ಎಸೆಯುವುದು ಸರಿಯೂ ಅಲ್ಲ. ದೂರಿನ ಸತ್ಯಾಸತ್ಯತೆಯ ಬಗ್ಗೆ ಪಿಡಿಒ ಅವರಿಂದ ಪರಿಶೀಲನೆ ನಡೆಸಲಾಗುವುದು. ಲೋಪವಿದ್ದರೆ ಅಗತ್ಯ ಕ್ರಮ ಜರುಗಿಸಲಾಗುವುದು.

। ಜಯವಿಕ್ರಮ್ ಕಲ್ಲಾಪು, ಪಂಚಾಯಿತಿ ಮಾಜಿ ಅಧ್ಯಕ್ಷ