ಕಿತ್ರೆ ದೇವಿಮನೆಯಲ್ಲಿ ತಾಪಹಾರಿಣಿ ಸಂಗೀತೋತ್ಸವ ಸಂಪನ್ನ

| Published : Jan 02 2025, 12:31 AM IST

ಸಾರಾಂಶ

ದೇವಿಮನೆಯಲ್ಲಿ ವರ್ಷಂಪ್ರತಿ ನಡೆಯುತ್ತಿರುವ ತಾಪಹಾರಿಣಿ ಸಂಗೀತೋತ್ಸವದಲ್ಲಿ ಊರಿನ ಎಲ್ಲ ಸಂಗೀತಗಾರರು ಪಾಲ್ಗೊಂಡು ಯಶಸ್ವಿ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಭಟ್ಕಳ

ಸಂಗೀತದಿಂದ ಎಲ್ಲರನ್ನೂ ಒಗ್ಗೂಡಿಸುವ, ಸಂಘಟಿಸಬಹುದಾದ ಬಹುದೊಡ್ಡ ಶಕ್ತಿಯಿದೆ ಎಂದು ದೇವಿಮನೆ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಬಾಲಚಂದ್ರ ಭಟ್ಟ ತಿಳಿಸಿದರು.

ತಾಲೂಕಿನ ಕಿತ್ರೆಯ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ 4ನೇ ವರ್ಷದ ತಾಪಹಾರಿಣಿ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ದೇವಿಮನೆಯಲ್ಲಿ ವರ್ಷಂಪ್ರತಿ ನಡೆಯುತ್ತಿರುವ ತಾಪಹಾರಿಣಿ ಸಂಗೀತೋತ್ಸವದಲ್ಲಿ ಊರಿನ ಎಲ್ಲ ಸಂಗೀತಗಾರರು ಪಾಲ್ಗೊಂಡು ಯಶಸ್ವಿ ಮಾಡುತ್ತಿದ್ದಾರೆ. ದೇವಿ ಕ್ಷೇತ್ರದಲ್ಲಿ ಸಂಗೀತ ಸೇವೆ ಹಮ್ಮಿಕೊಳ್ಳುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.

ಭವತಾರಿಣಿ ಸೀಮಾ ಪರಿಷತ್ ಅಧ್ಯಕ್ಷ ವಿನಾಯಕ ಭಟ್ ತೆಕ್ನಗದ್ದೆ ಮಾತನಾಡಿ, ವರ್ಷಂಪ್ರತಿ ದೇವಿಮನೆಯಲ್ಲಿ ಸಂಗೀತ ಸೇವೆ ಮಾಡುವುದರಿಂದ ಈ ಭಾಗದಲ್ಲಿ ಸಂಗೀತ ಅಭ್ಯಾಸ ಮಾಡುವವರಿಗೆ ಅನುಕೂಲವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ಮಾತನಾಡಿ, ಎಲ್ಲರ ಸಹಕಾರದಿಂದ ದೇವಿಮನೆಯಲ್ಲಿ ಪ್ರತಿವರ್ಷ ತಾಪಹಾರಿಣಿ ಸಂಗೀತೋತ್ಸವ ಕಾರ್ಯಕ್ರಮ ನಡೆಸಲಾಗುತ್ತದೆ. ಇಂತಹ ಕಾರ್ಯಕ್ರಮದಿಂದ ಸಂಗೀತದ ಪ್ರತಿಭೆಗಳನ್ನು ಅನಾವರಣಗೊಳಿಸುವುದರ ಸಂಗೀತ ಕಲಾವಿದರನ್ನು ಒಗ್ಗೂಡಿಸಿ ಸಂಘಟನೆ ಮಾಡಲು ಸಹ ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಸಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ಸನ್ಮಾನಿತರಾದ ಸುಬ್ರಹ್ಮಣ್ಯ ಹೆಗಡೆ ದೊಡ್ಡೋಡಿ ಮತ್ತು ಉಮಾಕಾಂತ ಹೆಬ್ಬಾರ ಹೂತ್ಕಳ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ರಕ್ಷಾ ಗಜಾನನ ಹೆಬ್ಬಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡ ಸಂಗೀತೋತ್ಸವ ರಾತ್ರಿ 11.30ರ ವರೆಗೂ ನಡೆಯಿತು. ತಾಪಹಾರಿಣಿ ಸಂಗೀತೋತ್ಸವಕ್ಕೆ ಸಂಗೀತ ಕಲಾವಿದರಾದ ಗಜಾನನ ಹೆಬ್ಬಾರ ಕಿತ್ರೆ, ದಿವಾಕರ ಹೆಬ್ಬಾರ, ಬಾಲಚಂದ್ರ ಹೆಬ್ಬಾರ, ನಾಗರಾಜ ಹೆಗಡೆ ಮುಂತಾದವರು ಸಹಕರಿಸಿದರು.

ಅಮರಶಿಲ್ಪಿ ಜಕಣಾಚಾರಿ ಜಯಂತಿ

ಕಾರವಾರ: ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ವಿಶ್ವಕರ್ಮ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರಾಘವೇಂದ್ರ ಆಚಾರ್ಯ ಮತ್ತಿತರರು ಇದ್ದರು.