ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವಂತೆ ಹಾಲಿ ಅಧ್ಯಕ್ಷ ಬಿ.ಎಲ್.ದೇವರಾಜು ಮನವಿ ಮಾಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಧ್ಯಕ್ಷನಾಗಿ ಸಹಕಾರ ಸಂಸ್ಥೆಯನ್ನು ಲಾಭದಾಯಕಗೊಳಿಸಿದ್ದು ಪ್ರಸ್ತುತ 16 ಲಕ್ಷಕ್ಕೂ ಅಧಿಕ ಲಾಭದಲ್ಲಿದೆ. ಪೆಟ್ರೋಲ್ ಬಂಕ್ ಸ್ಥಾಪನೆ, ಎಂ.ಕೆ.ಬೊಮ್ಮೇಗೌಡರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣ, ಹತ್ತು ವಾಣಿಜ್ಯ ಮಳಿಗೆಗಳ ನಿರ್ಮಾಣ, ಇ-ಸ್ಟಾಂಪಿಂಗ್ ವಿಭಾಗ ಆರಂಭ, 50 ಲಕ್ಷ ರು. ವೆಚ್ಚದಲ್ಲಿ ಎರಡು ಉಗ್ರಣ ಸ್ಥಾಪನೆ, ಎ.ಪಿ.ಎಂ.ಸಿ ಆವರಣದಲ್ಲಿ ಸಂಘಕ್ಕೆ ಒಂದು ನಿವೇಶನ, ವಿವಿಧ ಬ್ಯಾಂಕ್‌ಗಳಲ್ಲಿ 4.82 ಕೋಟಿ ಹಣ ಠೇವಣಿ, ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ 75 ಲಕ್ಷ ರು.ಗಳ ಆಪದ್ಧನ, ಹೊಸ ಶುದ್ಧ ಕುಡಿಯುವ ನೀರಿನ ಘಟನೆ ಸ್ಥಾಪನೆ ಸೇರಿದಂತೆ ಸಂಘವನ್ನು ಉತ್ತಮ ಕಟ್ಟಿ ಬೆಳೆಸಿದ್ದೇನೆ ಎಂದರು.
ಸಂಸ್ಥೆ ಮತ್ತಷ್ಟು ಬೆಳವಣಿಗೆಯಾಗಬೇಕಾದರೆ ನಾನು ಸೇರಿದಂತೆ 8 ಅಭ್ಯರ್ಥಿಗಳನ್ನು ಷೇರುದಾರ ಮತದಾರರು ಚುನಾಯಿಸಬೇಕು ಎಂದು ಕೋರಿದರು.ಇಂದು ಮತದಾನ:
ಸೆ.28ರಂದು ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೋಲ್ ಆವರಣದಲ್ಲಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ಮುಗಿದ ನಂತರ ಮತ ಎಣಿಕೆ ಆರಂಭಗೊಳ್ಳಲಿದೆ. ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಚುನಾವಣಾ ಅಧಿಕಾರಿಯಾಗಿದ್ದಾರೆ. ಸುಗಮ ಮತದಾನಕ್ಕಾಗಿ 40 ಜನರನ್ನು ಚುನಾವನಾ ಕರ್ತವ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಬಿ.ವರ್ಗದ ಮತದಾನಕ್ಕಾಗಿ 12 ಮತ್ತು ಸಹಕಾರ ಸಂಘಗಳ ಪ್ರತಿನಿಧಿಗಳಿಂದ ಆಯ್ಕೆಯಾಗಬೇಕಾದ ಎ ವರ್ಗದ ಮತದಾರರಿಗಾಗಿ 1ಮತಗಟ್ಟೆ ಸೇರಿ ಒಟ್ಟು 13 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ಕಾಂಗ್ರೆಸ್ ಬೆಂಬಲಿತರನ್ನು ಗೆಲ್ಲಿಸಲು ಶ್ರಮಿಸಿ: ಮರಿತಿಬ್ಬೇಗೌಡ
ಮಳವಳ್ಳಿ:ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ತಿಳಿಸಿದರು.
ಪಟ್ಟಣದ ರೈತ ಸಮುದಾಯ ಭವನದ ಆವರಣದಲ್ಲಿ ಟಿಎಪಿಸಿಎಂಎಸ್ ಚುನಾವಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘದ ಚುನಾವಣೆಗಳು ಸಾರ್ವತ್ರಿಕ ಚುನಾವಣೆಗಿಂತಲೂ ಕ್ಲಿಷ್ಟವಾಗಿರುತ್ತವೆ. ವೈಯಕ್ತಿಕ ವರ್ಚಸ್ಸಿನ ಜೊತೆಗೆ ಖುದ್ದು ಮತದಾರರನ್ನು ಭೇಟಿ ಮಾಡಿ ಮನವೊಲಿಸಬೇಕಾಗಿದೆ ಎಂದರು.ಸಹಕಾರ ಸಂಘಗಳು ರೈತರ ಜೀವನಾಡಿಗಳಾಗಿವೆ. ಟಿಎಪಿಸಿಎಂಎಸ್ ಸಂಘವು ರೈತರ ಸಂಸ್ಥೆಯಾಗಿದೆ. ತನ್ನದೇ ಆದ ಇತಿಹಾಸ ಹೊಂದಿದೆ. ಸಂಘವನ್ನು ಗಟ್ಟಿಯಾಗಿ ಕಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಪ್ರಸ್ತುತ ಚುನಾವಣೆಯಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದೇನೆ. ಪೈಪೋಟಿ ಹೆಚ್ಚಾಗುತ್ತಿದೆ. ಪಕ್ಷದೊಳಗೆ ಯಾವುದೇ ಗೊಂದಲ ಇದ್ದರೂ ಕೂಡ ಬಗೆಹರಿಸಿಕೊಂಡು ಎ ತರಗತಿ ಹಾಗೂ ಬಿ.ತರಗತಿ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಬೇಕೆಂದು ಹೇಳಿದರು.ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿರಾಜು, ದೊಡ್ಡಯ್ಯ, ಮುಖಂಡರಾದ ರಾಮಚಂದ್ರಯ್ಯ, ಪ್ರಕಾಶ್, ಆರ್.ಎನ್ ವಿಶ್ವಾಸ್, ಚೌಡಪ್ಪ ಸೇರಿದಂತೆ ಇತರರು ಇದ್ದರು.