ಸಾರಾಂಶ
ಅರುಣ
ಕನ್ನಡಪ್ರಭ ವಾರ್ತೆ ಸಿರಿಗೆರೆಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿ ನೆಲೆ ಕಂಡುಕೊಂಡಿರುವ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ 900 ವರ್ಷಗಳ ದೀರ್ಘ ಇತಿಹಾಸವಿದೆ. ಅಂಚಿನ ಸಮುದಾಯದ ಮೇರು ಪುರುಷರಾದ ವಿಶ್ವಬಂಧು ಮರುಳಸಿದ್ದರಿಂದ ಬಳಿವಿಡಿದು ಸಾಗಿಬಂದ ಪೀಠ ಇದು.
ವಿಶ್ವಬಂಧು ಮರುಳಸಿದ್ಧರು 12ನೇ ಶತಮಾನದ ಬಸವಣ್ಣನವರ ಹಿರಿಯ ಸಮಕಾಲೀನರು. ಮೂಢನಂಬಿಕೆ, ಅಂಧಶ್ರದ್ಧೆಗಳು, ಅವೈಚಾರಿಕತೆ ಜನರಲ್ಲಿ ಮನೆಮಾಡಿಕೊಂಡಿದ್ದ ಆ ಕಾಲಘಟ್ಟದಲ್ಲಿಯೇ ಅವುಗಳ ನಿರ್ಮೂಲನಕ್ಕೆ ಹೋರಾಡಿದರು. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಲೋಕಸಂಚಾರ ಕೈಗೊಂಡರು.ತಮ್ಮ ನಂತರವೂ ಈ ವಿಚಾರಗಳನ್ನು ಮುಂದಿಟ್ಟುಕೊಂಡು ಜನಜಾಗೃತಿ ಮೂಡಿಸುವ ಸಲುವಾಗಿ ವಿಶ್ವಬಂಧು ಮರುಳಸಿದ್ಧರು ಸದ್ಧರ್ಮ ಪೀಠವನ್ನು ಸ್ಥಾಪಿಸಿದರು. ಅದಕ್ಕಾಗಿ ಅಗತ್ಯವಿದ್ದ ಭೂಮಿಯನ್ನು ತಮ್ಮ ಸಾಕು ತಂದೆ ಬಾಚಣ್ಣಗೌಡರಿಂದ ಪಡೆದರು. ತಮ್ಮ ಕಾರುಣ್ಯಶಿಶು ತೆಲುಗುಬಾಳು ಸಿದ್ಧಯ್ಯನ್ನು ಮಾಘ ಶುದ್ಧ ಪೂರ್ಣಿಮೆಯ ದಿನ ಈ ಪೀಠದಲ್ಲಿ ಹರಸಿ ಆಶೀರ್ವದಿಸಿದರು. ಅದುವೇ, ʻತರಳಾ, ಬಾಳುʼ. ಇದೊಂದು ದಿವ್ಯಾಕ್ಷರಿ ಮಂತ್ರ. ಲೋಕದ ಜನರೆಲ್ಲರೂ ಸುಖ-ಶಾಂತಿ-ನೆಮ್ಮದಿಯಿಂದ ಬದುಕುವ ಆಶಯದ ಆಶೀರ್ವಾದ ಮಂತ್ರವೇ, ತರಳಾ,ಬಾಳು.
ಈ ಆಶಯವನ್ನು ಹೊತ್ತು ಮುನ್ನಡೆದದ್ದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ. ಪೀಠದ 20ನೇ ಜಗದ್ಗುರುಗಳಾಗಿ 4 ದಶಕಗಳ ಕಾಲ ಭಕ್ತರ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಮಠಕ್ಕೊಂದು ಘನತೆ ತಂದುಕೊಟ್ಟವರು. ಪ್ರಜಾಪ್ರಭುತ್ವದ ನಿಲುವು, ವೈಚಾರಿಕ ಪ್ರಜ್ಞೆ, ಬಸವಾದಿ ಶಿವಶರಣರ ಆಶಯಗಳನ್ನು ತಲೆಮಾರುಗಳಿಗೆ ಹೊತ್ತೊಯ್ಯುವ ಮಹಾ ಮಣಿಹದಲ್ಲಿ ಅವರದು ಸಿಂಹಪಾಲು.ಬಸವಾದಿ ಶರಣರ ಸಾಹಿತ್ಯದ ಅಪ್ರತಿಮ ಪ್ರತಿಪಾದಕರು ಅವರು. ಆ ತತ್ವದ ಸದಾಶಯಗಳನ್ನು ಪ್ರಚುರಪಡಿಸಲು ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಒಂದು ಸಾಧನವಾಗಿ ಬಳಸಿದ ಪರಿಣಾಮವಾಗಿ ಮಠದಲ್ಲಿಯೇ ನಡೆಯುತ್ತಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವು 1950 ರಲ್ಲಿ ಮೊಟ್ಟಮೊದಲ ಬಾರಿಗೆ ಚಿತ್ರದುರ್ಗ-ದಾವಣಗೆರೆ ಅಖಂಡ ಜಿಲ್ಲೆಗಳ ತಾಲೂಕು ಕೇಂದ್ರವಾಗಿದ್ದ ಜಗಳೂರಿನಲ್ಲಿ ನಡೆಯಿತು. ಅಲ್ಲಿಂದ ಮುಂದೆ ನಿರಂತರವಾಗಿ ರಾಜ್ಯದ ಹಲವು ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿಯೂ ಈ ಮಹೋತ್ಸವ ನಡೆಯುತ್ತಾ ಬಂದಿದೆ. 1975ರಲ್ಲಿ ರಾಜ್ಯದ ಗಡಿ ದಾಟಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿಯೂ ನಡೆದಿದೆ.
ತರಳಬಾಳು ಹುಣ್ಣಿಮೆಯ ಸ್ವರೂಪ, ಅದು ಜನರ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಗಮನಿಸಿದ ನಾಡಿನ ಹಿರಿಯರು ಇದನ್ನು ಚಲಿಸುವ ವಿಶ್ವವಿದ್ಯಾನಿಲಯವೆಂದೂ, ಮತ್ತೆ ಕೆಲವರು ನಾಡಹಬ್ಬದ ಸ್ವರೂಪವೇ ಹುಣ್ಣಿಮೆ ಮಹೋತ್ಸವ ಎಂದೂ ಕರೆದಿದ್ದಾರೆ.2001ರಲ್ಲಿ ಅರಸೀಕೆರೆ ಹುಣ್ಣಿಮೆ ಸಂದರ್ಭದಲ್ಲಿ ಗುಜರಾತ್‌ನಲ್ಲಿ ತೀವ್ರ ಭೂಕಂಪ ಸಂಭವಿಸಿದ ಹಿನ್ನೆಲೆ ನೊಂದ ಜೀವಗಳಿಗೆ ಪರಿಹಾರ ನೀಡಲು ಹುಣ್ಣಿಮೆ ಮಹೋತ್ಸವದ ಮೆರವಣಿ ರದ್ದುಪಡಿಸಿ ಪಾದಯಾತ್ರೆಯಲ್ಲಿ ನಿಧಿ ಸಂಗ್ರಹಿಸಿ ನೀಡಿದ್ದಾರೆ. 2004ರ ಬರಗಾಲದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆ ಆನಗೋಡು ಸುತ್ತಲಿನ 9 ಹಳ್ಳಿಗಳಲ್ಲಿ ಕೊಳವೆ ಬಾವಿ ಕೊರೆಸಿ ಕುಡಿಯುವ ನೀರು ಒದಗಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.
ಹೀಗಾಗಿ ತರಳಬಾಳು ಹುಣ್ಣಿಮೆ ಕೇವಲ ಸಂಭ್ರಮ ಮತ್ತು ಸಡಗರದ ಹುಣ್ಣಿಮೆ ಆಗದೆ ನೊಂದವರ ಬದುಕಿಗೆ ಒಂದಿಷ್ಟು ಸಾಂತ್ವನ ನೀಡುವ ವೇದಿಕೆಯೂ ಆಗಿ ಕೆಲಸ ಮಾಡಿದೆ ಎಂಬುದು ಗಮನಾರ್ಹ.ಇದೀಗ ಭರಮಸಾಗರ ಸುತ್ತಲಿನ 43 ಕೆರೆಗಳು ತುಂಬಿ ತುಳುಕಾಡುತ್ತಿವೆ. ಜಗಳೂರು ತಾಲ್ಲೂಕಿನ 56 ಕೆರೆಗಳಿಗೆ ನೀರು ಹರಿದು ಬಂದಿದೆ. ಇದೆಲ್ಲವೂ ಶ್ರೀಗಳ ದೂರದೃಷ್ಟಿಯಿಂದ ಜಾರಿಗೊಂಡ ಯೋಜನೆಗಳು. ಕೆರೆಗಳಲ್ಲಿ ನೀರು ತುಂಬಿ ಅಂತರ್ಜಲಮಟ್ಟ ಸುಧಾರಿಸಿದ ವೇಳೆ ಭರಮಸಾಗರದಲ್ಲಿ 9 ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವವು ಆ ಭಾಗದ ಜನರೆಲ್ಲರ ಒಗ್ಗೂಡುವಿಕೆಯಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಹೊಸ ರೂಪ ನೀಡಿದ ಮಹಾಸ್ವಾಮೀಜಿ: 1979ರಲ್ಲಿ ತರಳಬಾಳು ಮಠದ ಪೀಠವನ್ನು ಅಲಂಕರಿಸಿದ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತರಳಬಾಳು ಹುಣ್ಣಿಮೆ ಮಹೋತ್ಸವ ವೇದಿಕೆಗೆ ಒಂದು ಹೊಸ ರೂಪ ಕೊಟ್ಟಿದ್ದಾರೆ. ಧರ್ಮ, ಸಾಹಿತ್ಯ ಪ್ರಸಾರಕ್ಕೆ ಬಹುತೇಕ ಸೀಮಿತಗೊಂಡಿದ್ದ ಆಚರಣೆಯು ನಾಡಿನ ಜನರೆಲ್ಲರನ್ನೂ ಒಂದುಗೂಡಿಸಿ ಸಂಭ್ರಮಿಸುವ ಆಚರಣೆಯನ್ನಾಗಿ ಮಾಡಿದ್ದಾರೆ. ನಾಡಿನಲ್ಲಿ ಪ್ರಕೃತಿ ವಿಕೋಪಗಳು ಉಂಟಾದ ಸಮಯದಲ್ಲಿ ಹುಣ್ಣಿಮೆ ಮಹೋತ್ಸವವನ್ನು ರದ್ದುಗೊಳಿಸಿ, ನೊಂದ ಜನರಿಗೆ ಮರುಗುವ ವೇದಿಕೆಯನ್ನಾಗಿಯೂ ಅವರು ರೂಪಿಸಿದ್ದಾರೆ. 1986 ರಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದಾಗ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಂಚರಿಸಿ ಜಾನುವಾರುಗಳಿಗೆ ಮೇವು ಸಂಗ್ರಹಿಸಿ ಅಗತ್ಯ ಇರುವವರಿಗೆ ಅದನ್ನು ವಿತರಿಸುವ ಕೆಲಸ ಮಾಡಿದ್ದಾರೆ.