ಸರ್ಕಾರದ ಕಿವಿ ಹಿಂಡುವ ಶಕ್ತಿ ತರಳಬಾಳು ಶ್ರೀಗೆ ಇದೆ: ಶಾಸಕ ಡಾ.ಎಂ.ಚಂದ್ರಪ್ಪ

| Published : Mar 02 2024, 01:53 AM IST

ಸರ್ಕಾರದ ಕಿವಿ ಹಿಂಡುವ ಶಕ್ತಿ ತರಳಬಾಳು ಶ್ರೀಗೆ ಇದೆ: ಶಾಸಕ ಡಾ.ಎಂ.ಚಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಿರಿಗೆರೆ ಬಳಿಯ ಬಸ್ತಿಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಕೊಠಡಿಗಳ ಉದ್ಘಾಟನೆ ಹಾಗೂ ಶತಮಾನೋತ್ಸವ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸಿರಿಗೆರೆರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ. ಯಾರೇ ಮುಖ್ಯಮಂತ್ರಿಯಾಗಿರಲಿ ಕಿವಿ ಹಿಂಡಿ ಕೆಲಸ ಮಾಡಿಸುವ ಶಕ್ತಿ ಸಿರಿಗೆರೆಯ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳಿಗಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಸಮೀಪದ ಭರಮಸಾಗರ ಹೋಬಳಿಯ ಹುಲ್ಲೇಹಾಳ್ ಬಸ್ತಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಶಾಲೆಯ 2023-24 ನೇ ಸಾಲಿನ ಡಿ.ಎಂ.ಎಫ್. ಅನುದಾನದಲ್ಲಿ ನಿರ್ಮಾಣ ಮಾಡಲಾದ ಶಾಲಾ ಕೊಠಡಿಗಳ ಉದ್ಘಾಟನೆ ಹಾಗೂ ಶತಮಾನೋತ್ಸವ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಏಳಿಗೆಗಾಗಿ ಹಗಲು ರಾತ್ರಿ ಶ್ರಮಿಸುತ್ತಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಜಗಳೂರು, ಭರಮಸಾಗರ, ಆನಗೋಡು, ಅಣಜಿ, ಚನ್ನಗಿರಿ, ಬೇಲೂರು, ಹಳೆಬೀಡು ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರದಿಂದ ಕೋಟ್ಯಾಂತರ ರೂ.ಗಳನ್ನು ಮಂಜೂರು ಮಾಡಿಸಿದ್ದಾರೆ. ಶೈಕ್ಷಣಿಕ ವರ್ಷ ಮುಗಿಯುವುದ ರೊಳಗೆ ಈ ಶಾಲೆಗೆ ಮತ್ತೊಂದು ಹೊಸ ಬಸ್ ಕೊಡುತ್ತೇನೆ. ವಿದ್ಯಾರ್ಥಿಗಳ ಹಾಜರಾತಿ ನೋಡಿಕೊಂಡು ಇನ್ನು ಕೊಠಡಿಗಳನ್ನು ಕಟ್ಟಿಸಿಕೊಡುತ್ತೇನೆಂದು ಭರವಸೆ ಕೊಟ್ಟರು.

ಒಂದೆ ಸೂರಿನಡಿ ಎಂಟು ಶಾಲೆಗಳನ್ನು ಏಕ ಕಾಲದಲ್ಲಿ ಕಟ್ಟಿರುವುದು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಗಡಿ ಭಾಗದ ಹಳ್ಳಿಗಳಲ್ಲಿ ಶಾಲೆಗಳನ್ನು ಕಟ್ಟಿಸಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕರು ಸರ್ಕಾರಿ ಶಾಲೆಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ನನ್ನ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಗುರುತಿಸಿ ಸ್ವಂತ ಖರ್ಚಿನಿಂದ ಬಸ್ ಸಂಚಾರ ಆರಂಭಿ ಸಿದ್ದೇನೆ. ಡ್ರೈವರ್ ಮತ್ತು ಕಂಡಕ್ಟರ್‌ಗೆ ಸಂಬಳ ಹಾಗೂ ಡೀಸೆಲ್ ಕೂಡ ಹಾಕಿಸುತ್ತೇನೆ. ಡಾ.ಶಿವಮೂರ್ತಿ ಶಿವಾಚಾರ್ಯಸ್ವಾಮಿಗಳು 300 ಶಾಲೆಗಳನ್ನು ಕಟ್ಟಿಸಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುವಂತೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ ಎಂಟತ್ತು ಕೊಠಡಿಗಳನ್ನು ನಿರ್ಮಿಸಲಾಗಿದೆ. ಒಂದೇ ಶಾಲೆಗೆ 48 ಕೊಠಡಿಗಳನ್ನು ಕಟ್ಟಿಸಿದ್ದೇನೆ. ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿರುವ ಸ್ವಾಮೀಜಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದಾರೆ, ಇದನ್ನು ಇತಿಹಾಸದಲ್ಲಿಯೇ ಯಾರೂ ಮಾಡಿಲ್ಲ ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಿರಿಗೆರೆಯ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳು ಶ್ರದ್ಧೆಯಿಂದ ಶಿಕ್ಷಣ ಕಲಿತರೆ ವಿಜ್ಞಾನಿ, ಐ.ಎ.ಎಸ್. ಅಧಿಕಾರಿಯಾಗಬಹುದು. ಕೃಷಿಕರು ಆಗಲಿ ಒಳ್ಳೆಯದು. ಕೃಷಿ ಎಂದರೆ ಕೀಳಲ್ಲ. ಗೌರವಯುತವಾದುದು. ಮಕ್ಕಳ ತಲೆಯಲ್ಲಿ ಒಳ್ಳೆಯ ವಿಚಾರಗಳನ್ನು ತುಂಬ ಬೇಕು. ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆಯಿದೆ. ಗುರುತಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ. ಮಕ್ಕಳನ್ನು ಅಂಕ ಪಡೆಯುವುದಕ್ಕಷ್ಟೇ ಸೀಮಿತ ಗೊಳಿಸಬಾರದು. ಪೋಷಕರು ಮಕ್ಕಳನ್ನು ಹಂಗಿಸುವುದು ಸರಿಯಲ್ಲ. ಕೇವಲ ಬುದ್ಧಿವಂತರಾದರೆ ಸಾಲದು ನೈತಿಕ ಶಕ್ತಿ ಬೆಳೆಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು.

ಮಕ್ಕಳ ಬುದ್ದಿ ವಿಕಸನವಾಗಬೇಕು. ಚಂದ್ರಯಾನ-3 ಉಡಾವಣೆಯಲ್ಲಿ ನಮ್ಮ ಮಠದ ಮೂವರು ವಿಜ್ಞಾನಿಗಳಿರುವುದು ನಿಜಕ್ಕೂ ಸಂತೋಷದ ಸಂಗತಿ. ಥಾಮಸ್ ಆಲ್ವಾ ಎಡಿಸನ್ ದೊಡ್ಡ ವಿಜ್ಞಾನಿಯಾಗಿ ಬಲ್ಬ್ ಕಂಡು ಹಿಡಿದಿದ್ದನ್ನು ಈ ಸಂದರ್ಭದಲ್ಲಿ ಸ್ವಾಮೀಜಿ ನೆನಪಿಸಿಕೊಂಡರು.ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ನಾಗರಾಜ್, ಉಪಾಧ್ಯಕ್ಷೆ ಶ್ರೀಮತಿ ನಿರ್ಮಲಾ ತಿಪ್ಪೇಸ್ವಾಮಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಜೆ.ಸಿ.ಸತೀಶ್‍ಗೌಡ್ರು, ಉಪಾಧ್ಯಕ್ಷೆ ಶ್ರೀಮತಿ ನಾಗವೇಣಿ, ಚಿತ್ರದುರ್ಗ ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‍ಕುಮಾರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಟಿ.ಹನುಮಂತಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಎಸ್.ಡಿ.ಎಂ.ಸಿ. ಸದಸ್ಯರುಗಳು, ಶಿಕ್ಷಕರು ಹುಲ್ಲೇಹಾಳ್ ಬಸ್ತಿಹಳ್ಳಿ ಗ್ರಾಮದವರು ಉಪಸ್ಥಿತರಿದ್ದರು.