ಬೋಧಕರಿಲ್ಲದೇ ತಾರಾನಾಥ ಆಯುರ್ವೇದ ಕಾಲೇಜು ತೊಳಲಾಟ!

| Published : Jan 05 2024, 01:45 AM IST

ಬೋಧಕರಿಲ್ಲದೇ ತಾರಾನಾಥ ಆಯುರ್ವೇದ ಕಾಲೇಜು ತೊಳಲಾಟ!
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಹೆಚ್ಚುತ್ತಿರುವ ಬೋಧಕರ ಕೊರತೆ, ಕಲಿಕೆಯ ಗುಣಮಟ್ಟವನ್ನು ಕುಸಿಯುವಂತೆ ಮಾಡಿದ್ದು, 48 ಬೋಧಕರ ಪೈಕಿ ಬರೀ 29 ಬೋಧಕರು ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಕಲ್ಯಾಣ ಕರ್ನಾಟಕದ ಏಕೈಕ ಆಯುರ್ವೇದ ಕಾಲೇಜು ಎಂದೇ ಹೆಗ್ಗಳಿಕೆ ಹೊಂದಿರುವ ನಗರದ ತಾರಾನಾಥ ಸರ್ಕಾರಿ ಆಯುರ್ವೇದ (ಬಿಎಎಂಎಸ್) ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಬೋಧಕ ಸಿಬ್ಬಂದಿ ಕೊರತೆಯ ತೊಳಲಾಟ ಎದುರಿಸುತ್ತಿದೆ!

ಭೌತಿಕವಾಗಿ ಕಾಲೇಜು ಪ್ರಗತಿಯತ್ತ ಸುಧಾರಣೆ ಕಂಡು ಗಮನ ಸೆಳೆಯುತ್ತಿದೆಯಾದರೂ ಖಾಲಿ ಇರುವ ಬೋಧಕ ಹುದ್ದೆಗಳು ಭರ್ತಿಯಾಗದೆ, ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಿದೆ. ಏತನ್ಮಧ್ಯೆ ಕಾಲೇಜಿನ ಸಿಬ್ಬಂದಿಯನ್ನು ಬೇರೆಡೆ ನಿಯೋಜನೆಗೊಳಿಸಿರುವುದು ಕಲಿಕಾರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಎಲ್ಲ ಬೆಳವಣಿಗೆ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಮತ್ತಷ್ಟು ಗುಣಮಟ್ಟ ಹಾಗೂ ಸುಧಾರಣೆಯ ಉದ್ದೇಶಕ್ಕೆ ಪೆಟ್ಟು ಬಿದ್ದಂತಾಗಿದೆ.

ವಿದ್ಯಾರ್ಥಿಗಳ ಕಲಿಕೆ: ಇಲ್ಲಿ ಪ್ರತಿವರ್ಷ ಸ್ನಾತಕೋತ್ತರದ ಐದು ವಿಭಾಗಗಳಲ್ಲಿ 60 ವಿದ್ಯಾರ್ಥಿಗಳು ಹಾಗೂ ಅದೇ ರೀತಿ ಸ್ನಾತಕ ವಿಭಾಗದಲ್ಲಿ ಐದು ವಿಭಾಗಗಳಲ್ಲಿ 31 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಕಾಲೇಜಿನಲ್ಲಿ ಒಟ್ಟು 14 ವಿಭಾಗದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸ್ನಾತಕೋತ್ತರ ವಿಭಾಗದಲ್ಲಿ ಕಾಯಚಿಕಿತ್ಸ, ಶಲ್ಯತಂತ್ರ, ಪಂಚಕರ್ಮ, ರಸಶಾಸ್ತ್ರ ಮತ್ತು ಭೈಸಜ್ಯಕಲ್ಪನಾ, ದ್ರವ್ಯಗುಣ ವಿಜ್ಞಾನ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಇಲ್ಲಿ ಅವಕಾಶವಿದ್ದು, ಸ್ನಾತಕ ವಿಭಾಗದಲ್ಲಿ ಕ್ರಿಯಾಶರೀರ್, ರೋಗ್ ನಿಧಾನವಂ ವಿಕ್ರಿತಿ ವಿಜ್ಞಾನ, ಅಗದ್ ತಂತ್ರ ಆಯುಮ್ ವಿಧಿ ವೈದಿಕ, ಸ್ವಸ್ಥ್ಯವೃತ್ತ ಮತ್ತು ಯೋಗ ಹಾಗೂ ಕೌಮರ್ ಭೃತ್ಯ- ಬಲರೋಗ ವಿಭಾಗಗಳಲ್ಲಿ ಆಯುರ್ವೇದ ಚಿಕಿತ್ಸಾ ವಿಧಾನವನ್ನು ಕಲಿಯುತ್ತಿದ್ದಾರೆ. ಆದರೆ, ವಿವಿಧ ವಿಭಾಗಗಳಲ್ಲಿರುವ ಬೋಧಕ ಸಿಬ್ಬಂದಿಯ ಕೊರತೆ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯನ್ನಾಗಿಸಿದೆ.

ಪ್ರವೇಶಾತಿ ಮಿತಿ ಇಳಿಕೆ!: ಇಲ್ಲಿನ ಹೆಚ್ಚುತ್ತಿರುವ ಬೋಧಕರ ಕೊರತೆ, ಕಲಿಕೆಯ ಗುಣಮಟ್ಟವನ್ನು ಕುಸಿಯುವಂತೆ ಮಾಡಿದ್ದು, 48 ಬೋಧಕರ ಪೈಕಿ ಬರೀ 29 ಬೋಧಕರು ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾಲೇಜಿನ ಆಸ್ಪತ್ರೆಗೆ 9 ವೈದ್ಯಾಧಿಕಾರಿಗಳು ಮಂಜೂರಾಗಿದ್ದರೂ ಕಳೆದ ಎರಡು ದಶಕಗಳಿಂದ ಭರ್ತಿಯಾಗಿಲ್ಲ. ಪ್ರಸ್ತುತ 3 ಜನ ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಲ್ಯಾಬ್ ಟೆಕ್ನಿಷನ್, ನರ್ಸ್ ಗಳು, ಗ್ರೂಪ್‌ ಡಿ ನೌಕರರ ಹುದ್ದೆಗಳು ಸಹ ಭರ್ತಿಯಾಗದೆ ಖಾಲಿ ಉಳಿದಿವೆ.

ಬೋಧಕರ ಕೊರತೆಯನ್ನು ಪರಿಶೀಲಿಸಿದ ಭಾರತೀಯ ವೈದ್ಯಪದ್ಧತಿಗಳ ಕೇಂದ್ರೀಯ ಆಯೋಗವು ಈ ಮಹಾವಿದ್ಯಾಲಯದ ಪ್ರವೇಶಾತಿ ಮಿತಿಯನ್ನು 60ರಿಂದ 48ಕ್ಕೆ ಇಳಿಸಿದೆ. ಬೋಧಕರ ಕೊರತೆಯನ್ನು ನೀಗಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾಲೇಜು ಅಸ್ತಿತ್ವಕ್ಕೆ ಧಕ್ಕೆ ಬರುವ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂಬ ಆತಂಕ ಎದುರಾಗಿದೆ.ಔಷಧಕ್ಕೆ ₹1 ಕೋಟಿ ಅನುದಾನ ಬೇಕು

170 ಹಾಸಿಗೆಯ ಈ ಕಾಲೇಜು ಆಸ್ಪತ್ರೆಯಲ್ಲಿ 120ರಿಂದ 130 ರೋಗಿಗಳು ಚಿಕಿತ್ಸೆ ಪಡೆಯುತ್ತಲೇ ಇರುತ್ತಾರೆ. ಪಂಚಕರ್ಮ ಚಿಕಿತ್ಸೆಗೆ ಹೆಸರುವಾಸಿಯಾಗಿರುವುದರಿಂದ ಜಿಲ್ಲೆ ಸೇರಿದಂತೆ ಆಂಧ್ರಪ್ರದೇಶದಿಂದಲೂ ನೂರಾರು ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಔಷಧಕ್ಕೆ ವಾರ್ಷಿಕ ₹1 ಕೋಟಿ ಅನುದಾನ ಬೇಕು. ಆದರೆ, ಬರೀ ₹40ರಿಂದ ₹50 ಲಕ್ಷ ನೀಡಲಾಗುತ್ತಿದ್ದು, ವಾರ್ಷಿಕ ಕೊನೆಯಲ್ಲಿ ಮೆಡಿಸಿನ್‌ಗಾಗಿ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕೊರತೆ ನಡುವೆ ನಿಯೋಜನೆ ಎಷ್ಟು ಸರಿ?

ಬೋಧಕ ಸಿಬ್ಬಂದಿ ಕೊರತೆ ಈ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಕಾಂತ ಸಜ್ಜನ್ ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರನ್ನಾಗಿ ನೇಮಿಸಿ, ವರ್ಗಾಯಿಸಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿರುವ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಡಾ. ಶ್ರೀಕಾಂತ ಸಜ್ಜನ್ ಅವರನ್ನು ಮರಳಿ ಬಳ್ಳಾರಿಗೆ ವರ್ಗಾಯಿಸುವಂತೆ ಕೋರಿ ಪತ್ರ ಬರೆದಿದ್ದಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ.