ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಕಳೆದ ೩೧ ವರ್ಷಗಳ ಹಿಂದಿನ ರಾಮಜನ್ಮ ಭೂಮಿ ಹೋರಾಟದ ಪ್ರಕರಣದಲ್ಲಿ ಹೋರಾಟಗಾರರಾಗಿದ್ದ ಶ್ರೀಕಾಂತ ಪೂಜಾರಿಯನ್ನು ಈ ಸಂದರ್ಭದಲ್ಲಿ ಬಂಧಿಸಿರುವುದನ್ನು ಖಂಡಿಸಿ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಧರಣಿ ನಡೆಸಿ, ಬಿಡುಗಡೆಗೆ ಆಗ್ರಹಿಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಧರಣಿ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಧರಣಿ ನಡೆಸಿದರು. ನಂತರ ಭುವನೇಶ್ವರಿ ವೃತ್ತದವರೆಗೆ ಯುವ ಕಾರ್ಯಕರ್ತರು ಅರೆಬೆತ್ತಲೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದರು, ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಅಕ್ರೋಶ ವ್ಯಕ್ತಪಡಿಸಿದರುಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ೩೧ ವರ್ಷಗಳ ಹಿಂದಿನ ರಾಮಜನ್ಮ ಭೂಮಿ ಹೋರಾಟದ ಪ್ರಕರಣವನ್ನು ಕೆದುಕುವ ಅನಿವಾರ್ಯತೆ ಏನಿತ್ತು. ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಇದು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಹುನ್ನಾರ ಎಂದು ಆರೋಪಿಸಿದರು.ಸಿದ್ದರಾಮಯ್ಯ ಹಿಂದೆ ೫ ವರ್ಷ ಮುಖ್ಯಮಂತ್ರಿಯಾಗಿದ್ದರಲ್ಲ ಆಗ ಇದು ನೆನಪಿಗೆ ಬರಲಿಲ್ಲವೋ? ಎಲ್ಲಾ ಕೇಸುಗಳು ಮುಗಿದು ಭವ್ಯ ರಾಮಮಂದಿರ ನಿರ್ಮಾಣವಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಉದ್ಘಾಟನೆ ಸಮಯದಲ್ಲಿ ಇದು ಬೇಕಿತ್ತಾ? ಇದು ಕಾಂಗ್ರೆಸ್ ನಾಯಕರ ಹತಾಶೆಯ ಭಾವನೆ ಎಂದರು.
ಗೃಹ ಸಚಿವ ಪರಮೇಶ್ವರ್, ಮುಖಂಡ ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ನಾಯಕರು ಅವವೇಳನ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಅವರ ಹತಾಶೆ ಭಾವನೆಯನ್ನು ತೋರುತ್ತದೆ ಎಂದರು.ಮುಖಂಡ ಬಿ.ಕೆ ಹರಿಪ್ರಸಾದ್ ರಾಜ್ಯದಲ್ಲೂ ಗೋಧ್ರಾ ರೀತಿ ಹತ್ಯಾಕಾಂಡ ನಡೆಯುವ ಹುನ್ನಾರ ಇದೆ ಎಂದು ಹೇಳಿರುವುದು ಖಂಡನೀಯ, ಗೃಹ ಇಲಾಖೆ, ಗುಪ್ತಚರ ಇಲಾಖೆಗೆ ಗೊತ್ತಿಲ್ಲದೆ ಇರುವ ಮಾಹಿತಿ ಇವರಿಗೆ ಹೇಗೆ ಗೊತ್ತಾಯಿತು? ಮೊದಲು ಇವರನ್ನು ಬಂಧಿಸಬೇಕು, ಇದು ರಾಮಮಂದಿರ ಉದ್ಘಾಟನೆಯನ್ನು ಸಹಿಸಿಕೊಳ್ಳದೇ ಕಾಂಗ್ರೆಸ್ ನಾಯಕರ ಹತಾಶೆ ಹೇಳಿಕೆಗಳು, ಇದನ್ನು ದೇಶದ ಜನರು ನೋಡುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ತಕ್ಷಣ ಶ್ರೀಕಾಂತ ಪೂಜಾರಿಯವರನ್ನು ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಬಿಜೆಪಿಯಿಂದ ನಿರಂತರ ಹೋರಾಟ ನಡೆಯುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಎಸ್. ಬಾಲರಾಜು, ಸಿ.ಎಸ್. ನಿರಂಜನಕುಮಾರ್. ಮತ್ತು ಕೇಂದ್ರ ಪರಹಾರ ಸಮಿತಿ ಮಾಜಿ ಆಧ್ಯಕ್ಷ ಎಂ. ರಾಮಚಂದ್ರ, ಮುಖಂಡರಾದ ನೂರೊಂದುಶೆಟ್ಟಿ, ನಿಜಗುಣರಾಜು ಎಸ್. ಮಹದೇವಯ್ಯ, ಸುದರ್ಶನಗೌಡ, ವೃಷಬೇಂದ್ರಪ್ಪ, ಬಸವಣ್ಣ, ಅಯ್ಯನಪುರ ಶಿವಕುಮಾರ್, ಕುಲಗಾಣ ಶಾಂತಮೂರ್ತಿ, ಜಯಚಂದ್ರ, ದೊರೆಸ್ವಾಮಿ, ಮಹೇಶ್ವರಿ, ದ್ರಾಕ್ಷಾಯಿಣಿ, ಶಿವಣ್ಣ, ವಿಜಯೇಂದ್ರ, ರಾಜು, ಬಸವಣ್ಣ, ರಂಗಸ್ವಾಮಿ, ಶಿವರಾಜ್, ವಿರಾಟ್ ಶಿವು, ನಟರಾಜು, ಮೂಡ್ನಾಕೂಡು ಪ್ರಕಾಶ್, ವೇಣುಗೋಪಾಲ್, ಪ್ರಸನ್ನ, ಶಿವಣ್ಣ, ಸೂರ್ಯ, ಮಹದೇವಸ್ವಾಮಿ, ಮಂಜುನಾಥ್, ಮಂಜು, ಇದ್ದರು.