ಸಾರಾಂಶ
ಅನಾಮಧೇಯ ವ್ಯಕ್ತಿಯೊಬ್ಬ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ, ಉತ್ಖನನ ಕಾರ್ಯ ನಡೆಸುತ್ತಿದೆ. ಇದರ ಬೆನ್ನಲ್ಲೇ, ಇದೊಂದು ಕಮ್ಯುನಿಸ್ಟರು ರೂಪಿಸಿರುವ ‘ಟಾರ್ಗೆಟ್ ಧರ್ಮಸ್ಥಳ’ ಟೂಲ್ ಕಿಟ್ ಸಂಚು ಆಗಿದೆ ಎಂದು ಹಿಂದೂಪರ ಸಂಘಟನೆಗಳು ಕಿಡಿಕಾರಿದ್ದು, ಅಭಿಯಾನ ಆರಂಭಿಸಿವೆ.
ಬೆಳ್ತಂಗಡಿ/ಬೆಂಗಳೂರು : ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಅಸಹಜವಾಗಿ ಸಾವನ್ನಪ್ಪಿದ ನೂರಾರು ಶವಗಳನ್ನು ತಾನೇ ಹೂತುಹಾಕಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ, ಉತ್ಖನನ ಕಾರ್ಯ ನಡೆಸುತ್ತಿದೆ. ಇದರ ಬೆನ್ನಲ್ಲೇ, ಇದೊಂದು ಕಮ್ಯುನಿಸ್ಟರು ರೂಪಿಸಿರುವ ‘ಟಾರ್ಗೆಟ್ ಧರ್ಮಸ್ಥಳ’ ಟೂಲ್ ಕಿಟ್ ಸಂಚು ಆಗಿದೆ ಎಂದು ಹಿಂದೂಪರ ಸಂಘಟನೆಗಳು ಕಿಡಿಕಾರಿದ್ದು, ಅಭಿಯಾನ ಆರಂಭಿಸಿವೆ.
‘ಶಬರಿಮಲೈ, ಶನಿಶಿಂಗನಾಪುರ, ಈಶ,... ಬಳಿಕ ಈಗ ಧರ್ಮಸ್ಥಳ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಷಡ್ಯಂತ್ರವಾಗಿದ್ದು, ಹೀಗೆಯೇ ಮುಂದುವರಿದರೆ ಸುಮ್ಮನೆ ಕೂರಲು ಆಗೋಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಎಂಎಲ್‌ಸಿ ಸಿ.ಟಿ.ರವಿ, ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಇದೇ ವೇಳೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳ ಭಕ್ತವೃಂದದಿಂದ ಮಡಿಕೇರಿ, ಮಂಗಳೂರು, ಉಡುಪಿಗಳಲ್ಲಿ ಶುಕ್ರವಾರ ಪ್ರತಿಭಟನೆಗಳು ನಡೆದಿವೆ.ಬಿ.ಎಲ್.ಸಂತೋಷ್ ಪೋಸ್ಟ್:
ಧರ್ಮಸ್ಥಳ ಗ್ರಾಮ ಕೇಸ್‌ಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ‘ಎಚ್ಚೆತ್ತುಕೊಳ್ಳೋಣ, ಶಬರಿಮಲೈ, ಶನಿಶಿಂಗನಾಪುರ, ಈಶ ಈಗ ಧರ್ಮಸ್ಥಳ’ ಎಂದು ಪೋಸ್ಟ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಧರ್ಮಸ್ಥಳ ಗ್ರಾಮದಲ್ಲಿನ ಇತ್ತೀಚೆಗಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಖಂಡನೆ ವ್ಯಕ್ತಪಡಿಸಿದೆ. 2012ರಲ್ಲಿ ನಡೆದ ಕುಮಾರಿ ಸೌಜನ್ಯ ಹತ್ಯೆಯ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ನಡೆದ ಎಲ್ಲಾ ಪ್ರತಿಭಟನೆಗಳಲ್ಲಿ ವಿಶ್ವ ಹಿಂದೂ ಪರಿಷತ್ ಭಾಗವಹಿಸಿದೆ. ಆದರೆ, ಇದೀಗ ಆಗಂತುಕನೊಬ್ಬನ ಹೇಳಿಕೆ ಆಧರಿಸಿ ಕ್ಷೇತ್ರದ ಘನತೆಗೆ ಚ್ಯುತಿ ತರುವ ಸಂಚು ನಡೆಸಲಾಗುತ್ತಿದೆ. ಹಿಂದೂ ಧರ್ಮಕ್ಕೆ ಸೇರದ ಮತ್ತು ಅನ್ಯಮತೀಯರು ಧರ್ಮಸ್ಥಳವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳ ವಿರುದ್ಧ ಪಿತೂರಿ ಮುಂದುವರಿದಲ್ಲಿ ಹೋರಾಟ ಮಾಡುವುದಾಗಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.ಬಿಜೆಪಿ ನಾಯಕರ ಕಿಡಿ:
ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, 13 ಅಲ್ಲ, 20 ಪಾಯಿಂಟ್ ಹುಡುಕಲಿ, ನಮ್ಮ ಅಭ್ಯಂತರವಿಲ್ಲ. ಅಲ್ಲಿ ಏನು ಸಿಕ್ಕಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆ ಭಾಗದಲ್ಲಿ ಧಾರ್ಮಿಕ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿರೋದು ಕಂಡು ಬರುತ್ತಿದೆ. ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಅಪಪ್ರಚಾರ ಮಾಡಿದರೆ ಇದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಪರಿಷತ್ ಸದಸ್ಯ ಸಿ.ಟಿ.ರವಿ, ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ದೊಡ್ಡ ಷಡ್ಯಂತ್ರ ನಡೆದಿದೆ. ತನಿಖೆಗೂ ಮೊದಲೇ ಧರ್ಮಸ್ಥಳ- ಧರ್ಮಾಧಿಕಾರಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ದೊಡ್ಡ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗಿದ್ದು, ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ. ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಈ ಪ್ರಯತ್ನ ಆರಂಭಿಸಿದೆ. ಒಂದೇ ಒಂದು ಸಾಕ್ಷಿ ಇಲ್ಲದೆ ಯಾಕೆ ವೀರೇಂದ್ರ ಹೆಗ್ಗಡೆಯವರನ್ನು ಆರೋಪಿ ಸ್ಥಾನಕ್ಕೆ ತರಲಾಗಿದೆ? ಆರೋಪಿಯನ್ನು ಮೊದಲೇ ನಿರ್ಧರಿಸಿ ಅದಕ್ಕೆ ಬೇಕಾದ ಸಾಕ್ಷಿ ಹುಡುಕುತ್ತಿರುವ ಮೊದಲ ಪ್ರಕರಣ ಇದು ಎಂದು ಆರೋಪಿಸಿದ್ದಾರೆ.
ಭಕ್ತವೃಂದದಿಂದ ಪ್ರತಿಭಟನೆ:
ಈ ಮಧ್ಯೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಎದುರು ಧರ್ಮಸ್ಥಳ ಭಕ್ತವೃಂದದಿಂದ ಶುಕ್ರವಾರ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಯಿತು. ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಧರ್ಮಸ್ಥಳ ಭಕ್ತವೃಂದದಿಂದ ಮಡಿಕೇರಿಯಲ್ಲಿ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ, ಮಂಗಳೂರಿನಲ್ಲಿಯೂ ಪ್ರತಿಭಟನೆಗಳು ನಡೆದಿವೆ.
13ನೇ ಸ್ಥಳ ಬದಲು 15ನೇಜಾಗದಲ್ಲಿ ಶೋಧ ಕಾರ್ಯ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಾಮಿಕ ಸಾಕ್ಷಿ ದೂರುದಾರ ನೀಡಿರುವ ದೂರಿಗೆ ಸಂಬಂಧಿಸಿ ಶುಕ್ರವಾರವೂ ಶೋಧ ಕಾರ್ಯಾಚರಣೆ ಮುಂದುವರಿಯಿತು. ದೂರುದಾರನ ಹೇಳಿಕೆಯಂತೆ, ನಿಗದಿತ 13ನೇ ಪಾಯಿಂಟ್ ಬದಲು ಹೊಸ ಸ್ಥಳ 15ರಲ್ಲಿ ಎಸ್‌ಐಟಿ ಶೋಧ ಕಾರ್ಯ ನಡೆಸಿತು. ಆದರೆ, ಈ ಸ್ಥಳದಲ್ಲಿ ಯಾವುದೇ ಕುರುಹುಗಳು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.