ಸಾರಾಂಶ
ಮುಂಡರಗಿ: ರೈತರಿಗೆ ಅವಶ್ಯವಿರುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ಡಂಬಳ ಹಾಗೂ ಮುಂಡರಗಿಯಲ್ಲಿ ದಾಸ್ತಾನು ಮಾಡಲಾಗಿದೆ. ಮುಂದಿನ ವಾರ ವಿತರಣೆ ಕಾರ್ಯ ಕೈಗೊಳ್ಳಲಾಗುವುದು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಪ್ರಕಟಣೆ ನೀಡಿರುವ ಅವರು, ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಪ್ರಸಕ್ತ ಮುಂಗಾರು ಹಂಗಾಮಿಗೆ 51,360 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.ರೈತರಿಗೆ ರಸಗೊಬ್ಬರ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಮುಂಗಾರು ಪೂರ್ವ ಸಿದ್ಧತಾ ಅಭಿಯಾನದ ಮೂಲಕ ರೈತರಿಗೆ ಮಣ್ಣಿನ ಪರೀಕ್ಷೆ, ಗುಣಮಟ್ಟದ ಬೀಜಗಳ ಆಯ್ಕೆ, ಬಿತ್ತನೆ ಪೂರ್ವ ಬೀಜೋಪಚಾರ ಹಾಗೂ ಸಂಯುಕ್ತ ಗೊಬ್ಬರಗಳ ಬಳಕೆ ಕುರಿತಾಗಿ ಗ್ರಾಮ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಿತ್ತನೆಗೂ ಮುಂಚಿತವಾಗಿ ಪ್ರಧಾನ ಹಾಗೂ ಲಘು ಪೋಷಕಾಂಶಗಳನ್ನು ಒದಗಿಸುವ ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ರಂಜಕಯುಕ್ತ ಸಾವಯವ ಗೊಬ್ಬರ, ಹಸಿರೆಲೆಗೊಬ್ಬರ ಇತ್ಯಾದಿಗಳನ್ನು ಮೊದಲ ಆಧ್ಯತೆ ಮೇಲೆ ಬಳಸುವುದು, ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಆಂಶ ಮಾತ್ರವಿರುತ್ತದೆ.ಬೆಳೆಗಳಿಗೆ ಬರ ಮತ್ತು ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶೇಣಿಯ (ಗ್ರೇಡ್) ಸಾರಜನಕ, ರಂಜಕ ಮತ್ತು ಪೋಟ್ಯಾಷಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು, ಶಿಫಾರಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ.
ರೈತರಲ್ಲಿ ಸಮತೋಲನಾತ್ಮಕ ರಸಗೊಬ್ಬರ ಬಳಕೆ ಉತ್ತೇಜಿಸಲು ಪೊಟ್ಯಾಷ ಯುಕ್ತ ಕಾಂಪ್ಲೆಕ್ಸ್ ರಸಗೊಬ್ಬರಗಳಾದ 15:15:15, 10:26:26, 22:22:11, 14:35:14, 17:17:17, 14:28:14, 19:19:19, 20:10:10, 9: 24:24, 8:21:21 ಮತ್ತು 24:24:0 ಬಳಕೆ ಅತಿ ಮುಖ್ಯ. ಖುಲ್ಲಾ ಬೀಜಗಳನ್ನು ಅಪರಿಚಿತರಿಂದ ಖರೀದಿಸಬಾರದು. ಬೀಜ ಖರೀದಿ ಕುರಿತು ಬಿಲ್ ಪಡೆಯಬೇಕು. ಬಿಲ್‌ನಲ್ಲಿ ರೈತರ ಹೆಸರು, ವಿಳಾಸ, ಬೆಳೆ, ಕಂಪನಿ, ತಳಿ, ಲಾಟ್ ನಂಬರ್‌ಗಳನ್ನು ಕಡ್ಡಾಯವಾಗಿ ಮತ್ತು ಸ್ಪಷ್ಟವಾಗಿ ನಮೂದಿಸಿರಬೇಕು. ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ಡ್ರೈಕೊಡರ್ಮಾ 4 ಗ್ರಾಂ ಪ್ರತಿ ಕೆಜಿ ಹಾಗೂ ಪಿಎಸ್‌ಬಿ (ರಂಜಕ ಕರಗಿಸುವ ಜೀವಾಣು), ರೈಜೋಬಿಯಂ 4 ಗ್ರಾಂ ಪ್ರತಿ ಕೆಜಿಗೆ ಬೀಜೋಪಚಾರ ಮಾಡಿ ಬಿತ್ತನೆ ಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.