ಟಾರ್ಗೆಟ್‌ ಇಲ್ಯಾಸ್‌ ಕೊಲೆ ಆರೋಪಿ ಸಮೀರ್‌ ಹತ್ಯೆ

| Published : Aug 13 2024, 12:45 AM IST

ಸಾರಾಂಶ

ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯನ್ನು ಅಟ್ಟಾಡಿಸಿ ತಲವಾರಿನಿಂದ ಕಡಿದು ಕೊಂದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾ.ಹೆ.676ರ ಕಲ್ಲಾಪು ವಿ.ಕೆ.ಫರ್ನಿಚರ್ ಕಟ್ಟಡದ ಹಿಂಭಾಗ ಭಾನುವಾರ ತಡರಾತ್ರಿ ನಡೆದಿದೆ. ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (35) ಹತ್ಯೆಯಾದ ವ್ಯಕ್ತಿ.

ಕನ್ನಡಪ್ರಭ ವಾರ್ತೆ ಉಳ್ಳಾಲ

ಈತ ರಾತ್ರಿ 10ರ ಸುಮಾರಿಗೆ ತಾಯಿ ಜೊತೆಗೆ ಕಲ್ಲಾಪುವಿನ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆಂದು ಬಂದ ಸಂದರ್ಭ ಹಿಂಬದಿಯಿಂದ ಕಾರಿನಲ್ಲಿ ಹಿಂಬಾಲಿಸಿದ್ದ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದೆ. ಅಪಾಯ ಅರಿತ ಸಮೀರ್ ತಕ್ಷಣ ಸ್ಥಳದಿಂದ ಓಡಲು ಯತ್ನಿಸಿದ. ಈ ವೇಳೆ ಅಟ್ಟಾಡಿಸಿದ ಐದು ಮಂದಿಯ ತಂಡ ಕಲ್ಲಾಪು ಜಂಕ್ಷನ್‌ನಿಂದ 500 ಮೀ ದೂರದಲ್ಲಿರುವ ವಿ.ಕೆ.ಫರ್ನಿಚರ್ ಹಿಂಭಾಗದವರೆಗೂ ಅಟ್ಟಾಡಿಸಿ, ಅಲ್ಲಿ ತಲವಾರಿನಿಂದ ಕಡಿದು ಕೊಂದಿದೆ. 2018 ರಲ್ಲಿ ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್‌ನನ್ನು ಜೆಪ್ಪುವಿನ ಫ್ಲಾಟ್‍ವೊಂದರಲ್ಲಿ ದಾವುದ್, ಶಮೀರ್, ರಿಯಾಝ್, ಸಮೀರ್, ಅಬ್ದುಲ್ ಖಾದರ್, ಉಮ್ಮರ್ ನವಾಫ್, ಮೊಹಮ್ಮದ್ ನಝೀರ್, ನೌಷಾದ್, ಅಝ್ಗರ್ ಆಲಿ ಎಂಬವರು ಸೇರಿ ಹತ್ಯೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು.

ಪ್ರಕರಣದಲ್ಲಿ ಸಮೀರ್ ಎರಡನೇ ಆರೋಪಿಯಾಗಿದ್ದು, ದಾವುದ್ ಮತ್ತು ಶಮೀರ್ ಇಬ್ಬರು ನೇರವಾಗಿ ಫ್ಲ್ಯಾಟ್ ಪ್ರವೇಶಿಸಿ ಇಲ್ಯಾಸ್ ನನ್ನು ಹತ್ಯೆ ನಡೆಸಿರುವುದು ತನಿಖೆಯಲ್ಲಿ ಬಯಲಾಗಿತ್ತು. ಪ್ರಕರಣ ಸಂಬಂಧ ಜೈಲುಪಾಲಾದ ಸಮೀರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದಾರೆ.