ನೀರು, ರಸ್ತೆ, ಸ್ವಚ್ಛತೆ, ಸಾರಿಗೆ ಇತ್ಯಾದಿ ಮೂಲಭೂತ ಸಮಸ್ಯೆ ಪರಿಹಾರಕ್ಕಾಗಿ ಪ್ರತಿಭಟನೆ ಸಂಘಟಿಸಿ ಸಮಸ್ಯೆ ಪರಿಹಾರಕ್ಕೆ ಆಡಳಿತದ ಮೇಲೆ ಒತ್ತಡ ಹೇರಬೇಕಿದೆ
ಕೊಪ್ಪಳ: ಜೆಡಿಎಸ್ ಪಕ್ಷಕ್ಕೆ ಕೊಪ್ಪಳ ನಗರದಲ್ಲಿಯೇ ಸುಮಾರು 20,000 ನೂತನ ಸದಸ್ಯರನ್ನು ಹೊಂದುವ ಗುರಿ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಹೇಳಿದರು.
ಪಕ್ಷದ ನಗರ ಘಟಕ ಬಲಪಡಿಸುವ ನಿಟ್ಟಿನಲ್ಲಿ ಮಂಗಳವಾರ ಕರೆಯಲಾಗಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.ಪಕ್ಷ ನಗರದಲ್ಲಿ ಸದೃಢವಾಗಿದೆ.ಅದು ಇನ್ನಷ್ಟು ಸಂವರ್ಧನಗೊಳ್ಳಬೇಕಿದೆ. ನೀರು, ರಸ್ತೆ, ಸ್ವಚ್ಛತೆ, ಸಾರಿಗೆ ಇತ್ಯಾದಿ ಮೂಲಭೂತ ಸಮಸ್ಯೆ ಪರಿಹಾರಕ್ಕಾಗಿ ಪ್ರತಿಭಟನೆ ಸಂಘಟಿಸಿ ಸಮಸ್ಯೆ ಪರಿಹಾರಕ್ಕೆ ಆಡಳಿತದ ಮೇಲೆ ಒತ್ತಡ ಹೇರಬೇಕಿದೆ. ಸಕ್ರಿಯ ಸದಸ್ಯರಿಂದ ಇದು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲ ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಸದಸ್ಯತ್ವ ನೋಂದಣಿ ಮಾಡಿಸುವ ಅಭಿಯಾನ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ಸುಮಾರು 20,000 ನೂತನ ಸದಸ್ಯರನ್ನು ಹೊಂದುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಮಾತನಾಡಿ, ಯುವಕರು, ಮಹಿಳೆಯರು ಹಾಗೂ ಹೊಸ ಮುಖಗಳನ್ನು ಪಕ್ಷಕ್ಕೆ ಆಮಂತ್ರಿಸಬೇಕಿದೆ. ಡಿಜಿಟಲ್ ಸದಸ್ಯತ್ವ ನೋಂದಣಿ ಹೆಚ್ಚಿಸುವುದು ಮತ್ತು ಪ್ರತಿ ಪ್ರದೇಶಕ್ಕೆ ಸದಸ್ಯತ್ವ ಪ್ರಭಾರಿ ನೇಮಿಸುವುದು ಆದ್ಯತೆಯಾಗಿದೆ. ಜನಸಂಪರ್ಕದಲ್ಲಿ ಇರುವವರಿಗೆ ಮಾತ್ರ ನಗರಸಭೆಗೆ ನಡೆಯುವ ಚುನಾವಣೆಗಳಲ್ಲಿ ಕಣಕ್ಕಿಳಿಯಲು ಅವಕಾಶ ನೀಡಲಾಗುವುದು ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ಮಾತನಾಡಿ, ಪ್ರತಿ ಬೂತ್‌ಗೆ ಅಧ್ಯಕ್ಷ, ಕಾರ್ಯದರ್ಶಿ ಮತ್ತು 20 ಕಾರ್ಯಕರ್ತರ ತಂಡ ರಚಿಸಲಾಗುವುದು. ಅವರು ಮತದಾರರ ವಿವರ, ಸಮಸ್ಯೆ, ಸ್ಥಳೀಯ ಅಗತ್ಯಗಳ ವರದಿ ಸಂಗ್ರಹ ಮಾಡಬೇಕು. ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರ ಬಳಗ ಪುನರ್ ಸಂಘಟಿಸುವುದು ಕಡ್ಡಾಯ ಎಂದು ಹೇಳಿದರು.
ಜಿಲ್ಲಾ ವಕ್ತಾರ ಮಲ್ಲನಗೌಡ ಕೋಣನಗೌಡ್ರು ಮಾತನಾಡಿ, ಮುಂಬರುವ ಎಲ್ಲ ಚುನಾವಣಾ ಸಿದ್ಧತೆಗಾಗಿ ಬೂತ್ ವಾರ್ ಮತ್ತು ವಾಟ್ಸಪ್ ಗುಂಪು ರಚನೆಯಾಗಲಿದೆ. ಪಕ್ಷದ ತತ್ವ, ನಾಯಕತ್ವ, ಗುರಿ ಹಾಗೂ ಉದ್ದೇಶ ಜನರಿಗೆ ತಲುಪಿಸುವ ಜವಾಬ್ದಾರಿ ಮುಖಂಡರು ಮತ್ತು ಕಾರ್ಯಕರ್ತರ ಮೇಲಿದೆ ಎಂದರು.ಒಬಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ ಮಾತನಾಡಿ, ಪಕ್ಷದ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿ ಪಕ್ಷದ ಶಕ್ತಿ ಹೆಚ್ಚಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.
ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ ಮಾತನಾಡಿ, ನಗರದಲ್ಲಿ ಸ್ಪರ್ಧೆ ಮಾಡುವ ವ್ಯಕ್ತಿಗಳು ಪಕ್ಷದ ಸಂಘಟನೆಯಲ್ಲಿ ಭಾಗಿಯಾಗಿಯಾಗಬೇಕು.ಪಕ್ಷಕ್ಕೆ ಹೆಚ್ಚಿನ ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದರು.ಈ ಸಂದರ್ಭದಲ್ಲಿ ವಿವಿಧ ವಾರ್ಡ್ ಗಳಿಂದ 30ಕ್ಕೂ ಹೆಚ್ಚು ಮುಖಂಡರು ಪಕ್ಷ ಸೇರ್ಪಡೆಗೊಂಡರು.
ಮಹಿಳಾ ಘಟಕದ ನಗರ ಅಧ್ಯಕ್ಷೆ ನಿರ್ಮಲಾ ಮೇದಾರ್, ಉಪಾಧ್ಯಕ್ಷೆ ರತ್ನಮ್ಮ ಹಿರೇಮಠ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಏಣಿಗಿ, ಪ್ರವೀಣ್ ಕುಮಾರ್ ಇಟಗಿ, ನಗರ ಘಟಕದ ಪದಾಧಿಕಾರಿ ಶ್ರೀನಿವಾಸ್ ಗೊಂದಳಿ, ಗಂಗಾಧರ್ ವಸ್ತ್ರದ, ಶಿವರಾಜ್ ಮಠಪತಿ, ರಂಗಪ್ಪ ಭೋವಿ, ಬಸವ ಶ್ರೀ, ಶಂಭು ಕೂಕನಪಳ್ಳಿ, ಜಿಲ್ಲಾ ಸಹ ವಕ್ತಾರ ಯಮನೂರಪ್ಪ ಕಟಿಗಿ, ಮಾರುತಿ, ವೀರೇಶ ಅಂಗಡಿ ಹಾಗೂ ಮೌನೇಶ್ ಕಿನ್ನಾಳ ಉಪಸ್ಥಿತರಿದ್ದರು.