ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಹಿನ್ನೆಲೆ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ಹಾವೇರಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಹಿನ್ನೆಲೆ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಪ್ರಸಕ್ತ ವರ್ಷ ಮುಂಗಾರು ಪೂರ್ವದಲ್ಲಿ ಹೇಳಿಕೊಳ್ಳುವಂತಹ ಮಳೆಯಾಗದಿದ್ದರೂ ಈ ವರ್ಷವಾದರೂ ಉತ್ತಮ ಮಳೆ, ಬೆಳೆಯಾಗಲಿ ಎಂದು ರೈತರು ದೇವರಲ್ಲಿ ಪ್ರಾರ್ಥಿಸಿ ಭೂಮಿ ಹದಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ ರೈತರು ಜಮೀನುಗಳತ್ತ ಮುಖ ಮಾಡುತ್ತಿದ್ದಾರೆ. 3.28 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ:ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 3.28ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಇತ್ತೀಚೆಗೆ ಮೆಕ್ಕೆಜೋಳದ ಕಣಜ ಎಂದು ಗುರುತಿಸಿಕೊಳ್ಳುತ್ತಿರುವ ಹಾವೇರಿ ಜಿಲ್ಲೆಯಲ್ಲಿ ಈ ಬಾರಿಯೂ ಮೆಕ್ಕೆಜೋಳವನ್ನು ಹೆಚ್ಚು ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. 31,710 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 25,5113 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿದೆ. 12,000 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 8000 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 12,500 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್, 8076 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, 400 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 500 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತುವ ಗುರಿ ಹೊಂದಲಾಗಿದೆ. 2,87,208 ಹೆಕ್ಟೇರ್ ಏಕದಳ, 1137 ಹೆಕ್ಟೇರ್ ದ್ವಿದಳ, 20,535 ಹೆಕ್ಟೇರ್ ಎಣ್ಣೆಕಾಳು ಹಾಗೂ 20,076 ಹೆಕ್ಟೇರ್ ವಾಣಿಜ್ಯ ಬೆಳೆಗಳ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ. ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಬೇಕು, ರಸಗೊಬ್ಬರದ ಜೊತೆಗೆ ಲಘು ಪೋಷಕಾಂಶಕಗಳನ್ನು ಲಿಂಕ್ ಮಾಡದೆ ಮಾರಾಟ ಮಾಡಲು ಸೂಚಿಸಲಾಗಿದೆ. ಕಡ್ಡಾಯವಾಗಿ ರೈತರಿಗೆ ರಶೀದಿ ನೀಡಬೇಕು, ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಅವಧಿ ಮುಗಿದ ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು ಹಾಗೂ ಅನಧಿಕೃತವಾಗಿ ಬೀಜ ಮತ್ತು ರಸಗೊಬ್ಬರಗಳನ್ನು ಪರಿಕರಗಳನ್ನು ದಾಸ್ತಾನು ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 49 ಸಾವಿರ ಮೆ.ಟನ್ ಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾವಿನಲ್ಲಿ 3.28 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಬರುವ ಮುಂಗಾರು ಹಂಗಾಮಿಗೆ ಜಿಲ್ಲೆಗೆ ಯೂರಿಯಾ 65 ಸಾವಿರ ಟನ್, ಡಿಎಪಿ 23 ಸಾವಿರ ಟನ್, ಕಾಂಪ್ಲೆಕ್ಸ್ 48 ಸಾವಿರ ಟನ್ ಸೇರಿ 1.41 ಲಕ್ಷ ಟನ್ ಗೊಬ್ಬರ ಅವಶ್ಯವಿದ್ದು, ಮಾರ್ಚ್ ಅಂತ್ಯಕ್ಕೆ 17 ಸಾವಿರ ಟನ್ ಯೂರಿಯಾ, 10 ಸಾವಿರ ಟನ್ ಡಿಎಪಿ ಸೇರಿ 54 ಸಾವಿರ ಟನ್ ಗೊಬ್ಬರ ದಾಸ್ತಾನಿತ್ತು. ಬಳಿಕ 8187 ಟನ್ ಯೂರಿಯಾ, 3095 ಟನ್ ಡಿಎಪಿ, 9535 ಟನ್ ಕಾಂಪ್ಲೆಕ್ಸ್ ಗೊಬ್ಬರ ಸರಬರಾಜು ಆಗಿದೆ. ಈಗಾಗಲೇ ರೈತರು 10160 ಟನ್ ಯೂರಿಯಾ, 5543 ಟನ್ ಡಿಎಪಿ, 9741 ಟನ್ ಕಾಂಪ್ಲೆಕ್ಸ್ ಗೊಬ್ಬರ ಖರೀದಿ ಮಾಡಿದ್ದು, ಜಿಲ್ಲೆಯಲ್ಲಿ 15874 ಟನ್ ಯೂರಿಯಾ, 7755 ಟನ್ ಡಿಎಪಿ, 23 ಸಾವಿರ ಟನ್ ಕಾಂಪ್ಲೆಕ್ಸ್ ಸೇರಿ ಇನ್ನೂ 49670 ಮೆ.ಟನ್ ಗೊಬ್ಬರ ದಾಸ್ತಾನಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.28 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಪ್ರಮುಖವಾಗಿ ಗೋವಿನಜೋಳ, ಸೋಯಾಬಿನ್, ಶೇಂಗಾ ಮತ್ತು ಇತರೆ ಬೆಳೆಗಳ ಬೀಜ ವಿತರಣೆಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ಮಳೆ ಆರಂಭವಾಗಿದ್ದು, ರೈತರು ಭೂಮಿ ಸಜ್ಜುಗೊಳಿಸುತ್ತಿದ್ದಾರೆ. ಬಿತ್ತನೆ ಬೀಜ, ಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಅವಧಿ ಮುಗಿದ ಕೃಷಿ ಪರಿಕರಗಳನ್ನು ಮಾರಾಟ ಹಾಗೂ ಅನಧಿಕೃತವಾಗಿ ಬೀಜ ಮತ್ತು ರಸಗೊಬ್ಬರಗಳನ್ನು ಪರಿಕರಗಳನ್ನು ದಾಸ್ತಾನು ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕೆ. ಮಲ್ಲಿಕಾರ್ಜುನ ಹೇಳಿದರು.