ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಗುರಿ ನಿಗದಿ : ಸಿವಿಸಿ

| Published : Nov 12 2025, 02:30 AM IST

ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಗುರಿ ನಿಗದಿ : ಸಿವಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಎರಡೂ ಪಕ್ಷಗಳ ಮೈತ್ರಿ ಮುಂದಿನ ವಿಧಾನಸಭಾ ಚುನಾವಣೆ ತನಕವೂ ಇರಲಿದೆ ಎಂದು ಎರಡು ಪಕ್ಷಗಳ ಹೈಕಮಾಂಡ್ ಸ್ಪಷ್ಟಪಡಿಸಿದೆ.

ಕೊಪ್ಪಳ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಅತಿ ಹೆಚ್ಚಿನ ಸ್ಥಾನ ಕೊಪ್ಪಳ ಜಿಲ್ಲೆಯಲ್ಲಿ ಗಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಜೆಡಿಎಸ್‌ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.

ಮಂಗಳವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕೋರ್ ಕಮಿಟಿಗೆ ಪುನರ್ ನೇಮಕವಾದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎರಡೂ ಪಕ್ಷಗಳ ಮೈತ್ರಿ ಮುಂದಿನ ವಿಧಾನಸಭಾ ಚುನಾವಣೆ ತನಕವೂ ಇರಲಿದೆ ಎಂದು ಎರಡು ಪಕ್ಷಗಳ ಹೈಕಮಾಂಡ್ ಸ್ಪಷ್ಟಪಡಿಸಿದೆ. ಕೊಪ್ಪಳದಲ್ಲಿ ಮೈತ್ರಿ ಪಕ್ಷಗಳ ಬಾಂಧವ್ಯ ಕುರಿತು ಉಭಯ ಪಕ್ಷಗಳ ರಾಜ್ಯ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಮೈತ್ರಿ ಪಕ್ಷಗಳ ಗೆಲುವಿಗೆ ಜಿಲ್ಲೆಯಲ್ಲಿ ಪೂರಕ ವಾತಾವರಣ ಇದೆ. ಹೀಗಾಗಿ ಕೊಪ್ಪಳದಿಂದ ಅತಿ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಲಾಗಿದೆ ಎಂದರು.

ಶಾಸಕರ ನಿಷ್ಕ್ರಿಯತೆ, ಸಂಸದರ ಸ್ವಜನ ಪಕ್ಷಪಾತ ಹಾಗೂ ದುರಾಡಳಿತದ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ರೋಸಿ ಹೋಗಿದ್ದಾರೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಹಿಟ್ನಾಳ್ ಕುಟುಂಬದ ವಿರುದ್ಧ ಸಮರ ಸಾರಿದ್ದಾರೆ. ಆಡಳಿತ ವಿರೋಧ ಅಲೆ ಸ್ಪಷ್ಟವಾಗಿ ಕಾಣುತ್ತಿದೆ.ಇದನ್ನು ಉಪಯೋಗಿಸಿಕೊಂಡು ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿಯೊಂದು ಮನೆಗೆ ತೆರಳಿ ಪಕ್ಷಕ್ಕೆ ಬೆಂಬಲ ಗಿಟ್ಟಿಸಿಕೊಳ್ಳಬೇಕು ಎಂದರು.

ಪಕ್ಷ ಜನ್ಮತಾಳಿ ಇಪ್ಪತ್ತೈದು ವರ್ಷ ಆದ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಪಕ್ಷದ ಎಲ್ಲ ಮುಖಂಡರು ಕೊಪ್ಪಳ ಜಿಲ್ಲೆಯಾದ್ಯಂತ ಶೀಘ್ರದಲ್ಲಿ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ ಎಂದು ಹೇಳಿದರು.