ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ವರ್ಷಗಳಿಂದ ಬಾಕಿ ಉಳಿದಿರುವ ಬಗರ್‌ಹುಕುಂ ಹಾಗೂ ಅಕ್ರಮ-ಸಕ್ರಮ ಅರ್ಜಿಗಳ ವಿಲೇವಾರಿಗೆ ವೇಗ ನೀಡಲು ನಿರ್ಧರಿಸಲಾಗಿದ್ದು, ಮುಂದಿನ 4ರಿಂದ 5 ತಿಂಗಳಲ್ಲಿ ಅರ್ಹ ಅರ್ಜಿಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ ಎಂದು ಬೈಂದೂರು ಕ್ಷೇತ್ರದ ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ತಿಳಿಸಿದರು.

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ವರ್ಷಗಳಿಂದ ಬಾಕಿ ಉಳಿದಿರುವ ಬಗರ್‌ಹುಕುಂ ಹಾಗೂ ಅಕ್ರಮ-ಸಕ್ರಮ ಅರ್ಜಿಗಳ ವಿಲೇವಾರಿಗೆ ವೇಗ ನೀಡಲು ನಿರ್ಧರಿಸಲಾಗಿದ್ದು, ಮುಂದಿನ 4ರಿಂದ 5 ತಿಂಗಳಲ್ಲಿ ಅರ್ಹ ಅರ್ಜಿಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ ಎಂದು ಬೈಂದೂರು ಕ್ಷೇತ್ರದ ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ತಿಳಿಸಿದರು.

ಕುಂದಾಪುರ ಮಿನಿ ವಿಧಾನಸೌಧದ ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ವಂಡ್ಸೆ ಹೋಬಳಿಯ ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ 7 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಬೈಂದೂರು ಭಾಗದಲ್ಲಿ ಬಗರ್‌ಹುಕುಂ ಅಡಿ ಸುಮಾರು 2,636 ಅರ್ಜಿಗಳು ಹಾಗೂ ವಂಡ್ಸೆ ಹೋಬಳಿಯಲ್ಲಿ 1,963 ಅರ್ಜಿಗಳು ಬಾಕಿ ಉಳಿದಿವೆ. ಒಟ್ಟಾರೆ ಕ್ಷೇತ್ರದಲ್ಲಿ 4 ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೇವಾರಿಗೆ ಕಾಯುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಶುಕ್ರವಾರ ಸಮಿತಿ ಸಭೆ ನಡೆಸಿ, ವಾರಕ್ಕೆ ಕನಿಷ್ಠ 25 ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.30ರಿಂದ 40 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಅರ್ಹ ರೈತರಿಗೆ ಹಕ್ಕುಪತ್ರ ಒದಗಿಸುವುದು ಪ್ರಮುಖ ಉದ್ದೇಶವಾಗಿದೆ. ಈ ವಿಚಾರದಲ್ಲಿ ಯಾವುದೇ ತಾಂತ್ರಿಕ ಅಥವಾ ಸ್ಥಳೀಯ ಸಮಸ್ಯೆಗಳಿದ್ದರೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗೋಪಾಲ ಪೂಜಾರಿ ಹೇಳಿದರು.ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಲಿದ್ದು, ಅಗತ್ಯವಿರುವ ಸಂದರ್ಭಗಳಲ್ಲಿ ಸಮಿತಿ ಸದಸ್ಯರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ವಿಶೇಷವಾಗಿ ಬಡ ವರ್ಗದವರು ಹೊಂದಿರುವ 5ರಿಂದ 10 ಸೆಂಟ್ಸ್ ಜಮೀನಿನ ಅರ್ಜಿಗಳಿಗೆ ಆದ್ಯತೆ ನೀಡುವಂತೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ 50 ಸಾವಿರ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರ ಭಾಗವಾಗಿ ಬೈಂದೂರು ಕ್ಷೇತ್ರದಲ್ಲೂ ಬಾಕಿ ಅರ್ಜಿಗಳ ವಿಲೇವಾರಿಗೆ ಚುರುಕು ನೀಡಲಾಗುವುದು ಎಂದರು.

ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿ ಅಧ್ಯಕ್ಷರ ನೇಮಕಾತಿಯನ್ನು ಸರ್ಕಾರ ಕಾನೂನುಬದ್ಧವಾಗಿಯೇ ಮಾಡಿದೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಇಂತಹ ಹೆಚ್ಚುವರಿ ಸಮಿತಿಗಳು ರಚನೆಯಾಗಿವೆ. ತಾವು ಶಾಸಕರಾಗಿದ್ದ ಅವಧಿಯಲ್ಲೂ ಹೆಚ್ಚುವರಿ ಸಮಿತಿ ಹಾಗೂ ಎಸಿ ಸಮಿತಿ ಕಾರ್ಯನಿರ್ವಹಿಸಿತ್ತು ಎಂದು ಗೋಪಾಲ ಪೂಜಾರಿ ಹೇಳಿದರು.ತಮ್ಮ ಅಧ್ಯಕ್ಷತೆಯ ಸಮಿತಿಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ವಿಚಾರವಾಗಿ ಹೈಕೋರ್ಟ್‌ನಲ್ಲಿ 29 ಬಾರಿ ವಿಚಾರಣೆ ನಡೆದಿದ್ದು, ಅಂತಿಮವಾಗಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದು ತಮ್ಮ ಪರವಾಗಿ ತೀರ್ಪು ಬಂದಿದೆ. ಈ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಅರ್ಜಿಗಳ ವಿಲೇವಾರಿಗೆ ಇದೀಗ ಅವಕಾಶ ದೊರೆತಿದೆ ಎಂದರು.

ಸಭೆಯಲ್ಲಿ ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಕಂದಾಯ ನಿರೀಕ್ಷಕ ರಾಘವೇಂದ್ರ ಹೊಸ್ಕಳಿ, ಸಮಿತಿ ಸದಸ್ಯರಾದ ಶ್ರೀನಿವಾಸ ಸೌಡ, ಹೇಮಾ ಆರ್. ಪೂಜಾರಿ, ದಿನೇಶ್ ನಾಯ್ಕ್ ಹಳ್ಳಿಹೊಳೆ ಉಪಸ್ಥಿತರಿದ್ದರು.