ರಾಜ್ಯದಲ್ಲಿ 11 ಕೋಟಿ ಸಸಿ ನೆಡುವ ಗುರಿ: ಸಚಿವ ಈಶ್ವರ ಖಂಡ್ರೆ

| Published : Jul 29 2025, 01:00 AM IST

ಸಾರಾಂಶ

ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11.50 ಕೋಟಿ ಸಸಿ ನೆಟ್ಟು ಅವುಗಳನ್ನು ಪೋಷಿಸಿ, ಬೆಳೆಸುವ ಗುರಿ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಹೊಂದಿದೆ ಎಂದು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11.50 ಕೋಟಿ ಸಸಿ ನೆಟ್ಟು ಅವುಗಳನ್ನು ಪೋಷಿಸಿ, ಬೆಳೆಸುವ ಗುರಿ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಹೊಂದಿದೆ ಎಂದು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದ ಸಚಿವರು, ಈ ವರ್ಷ ಮೂರು ಕೋಟಿ ಸಸಿ ನೆಡಲಾಗುವುದು. ಅದರಲ್ಲಿ ಯಾದಗಿರಿ ಜಿಲ್ಲೆಯಲ್ಲಿ 4 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಇದರಲ್ಲಿ ಒಂದು ಲಕ್ಷ ಎತ್ತರದ ಸಸಿಗಳನ್ನು ಹಚ್ಚಲಾಗುವುದು. ಇದು ಕೀಳಲು ಆಗುವುದಿಲ್ಲ ಮತ್ತು ಬಹುಕಾಲ ಬದುಕುತ್ತವೆ. ನೆಟ್ಟ ಸಸಿಗಳನ್ನು ಪೋಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕೆಲಸ ಮಾಡುತ್ತದೆ. ಪ್ರಕೃತಿ ಮತ್ತು ಪರಿಸರ ಉಳಿದರೆ ಮಾತ್ರ ನಾವೆಲ್ಲರೂ ಉತ್ತಮವಾಗಿ ಬದುಕಿಳಿಯಲು ಸಾಧ್ಯವೆಂದು ಹೇಳಿದರು.

ಹವಾಮಾನದಲ್ಲಿ ಸಾಕಷ್ಟು ವ್ಯತ್ಯಾಸ ಆಗುತ್ತಿರುವುದರಿಂದ ಪ್ರಕೃತಿ ವಿಕೋಪ, ಗುಡ್ಡಗಳ ಕುಸಿತ, ಪ್ರವಾಹ, ತಾಪಮಾನ ಹೆಚ್ಚಾಗುವುದು ನಾವೆಲ್ಲರೂ ಕಾಣುತ್ತಿದ್ದೇವೆ. ಇದರಿಂದ ಅಪಾರ ಜನರು ಜೀವ‌ ಕಳೆದುಕೊಳ್ಳುತ್ತಿದ್ದಾರೆಂದು ವಿಷಾದಿಸಿದರು.

ಇಂದು ಆಹಾರ, ಹಾಲು, ತರಕಾರಿ ಹಣ್ಣು ಹಂಪಲು ಸೇರಿದಂತೆಯೇ ಎಲ್ಲದರಲ್ಲೂ ಮಾಲಿನ್ಯ ಇದೆ. ಕಲುಷಿತವಾಗಿದ್ದನ್ನೇ ನಾವು ಸೇವಿಸುತ್ತಿದ್ದೆವೆ. ಅದನ್ನೇ ಬಳಕೆ ಮಾಡುವ ಅನಿರ್ವಾಯತೆಗೆ ಬಂದಿದ್ದೆವೆ. ಇದು ಸಂಪೂರ್ಣ ಹೋಗಬೇಕೆಂದರು.

ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ್, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಎಸ್ಪಿ ಪ್ರಥ್ವಿಕ್ ಶಂಕರ್, ಹೆಚ್ಚುವರಿ ಡಿಸಿ ರಮೇಶ ಕೋಲಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಚೇತನ್ ಗಸ್ತಿ, ಸುಮೀತ್ ಕುಮಾರ್ ಪಾಟೀಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹ್ಮದ್ ಅಸದ್ ಇತರರು ಇದ್ದರು.

ಕಲಬುರಗಿಯ ಆರ್‌.ಜೆ. ಮಂಜು ನಿರೂಪಿಸಿದರು.‌ ಹಿರಿಯ ಕಲಾವಿದ ಚಂದ್ರಶೇಖರ ಗೋಗಿ ತಂಡದಿಂದ ನಾಡಗೀತೆ ಪ್ರಸ್ತುತ ಪಡಿಸಲಾಯಿತು.