ಸಾರಾಂಶ
ಆದಾಯ ನಿರೀಕ್ಷೆ ... । ಬರ ನಿರ್ವಹಣೆಗೆ ₹೨೦ ಲಕ್ಷ ಆಯವ್ಯಯದಲ್ಲಿ ಮೀಸಲಿಟ್ಟಿದೆ
ಕನ್ನಡಪ್ರಭ ವಾರ್ತೆ, ತರೀಕೆರೆಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಆಯ-ವ್ಯಯದಲ್ಲಿ ₹4.37 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.2025-26ನೇ ಸಾಲಿನ ಆಯವ್ಯಯ ಮಂಡಿಸಿ ಮಾತನಾಡಿದ ಅಧ್ಯಕ್ಷ ವಸಂತಕುಮಾರ್, ಮೂಲ ಸೌಲಭ್ಯಗಳಿಂದ ವಂಚಿತ ವಾದ ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ ನಿರ್ಮಾಣ ಮತ್ತು ಕಟ್ಟಡ ದುರಸ್ಥಿಗೆ ₹೧೫ ಲಕ್ಷ ಮೀಸಲಿರಿಸಲಾಗಿದೆ. ಪಟ್ಟಣದಲ್ಲಿರುವ ಮೇಲ್ಮಟ್ಟದ ಜಲಸಂಗ್ರಹಗಾರಗಳನ್ನು ವೈಜ್ಞಾನಿಕವಾಗಿ ಸ್ವಚ್ಛಗೊಳಿಸಲು ₹೧೧ ಲಕ್ಷ ಕಾಯ್ದಿರಿಸಿರುವುದು ಮಾತ್ರವಲ್ಲ, ಬರ ನಿರ್ವಹಣೆಗೆ ₹೨೦ ಲಕ್ಷ ಆಯವ್ಯಯದಲ್ಲಿ ಮೀಸಲಿಟ್ಟಿದೆ ಎಂದು ಮಾಹಿತಿ ನೀಡಿದರು.
ಪುರಸಭಾ ನಿಧಿಯಿಂದ ಕ್ರೀಡಾ ಚಟುವಟಿಕೆಗಳಿಗೆ ₹೨ ಲಕ್ಷ , ನೀರು ಸರಬರಾಜು, ವಿದ್ಯುತ್ ದೀಪಗಳ ನಿರ್ವಹಣೆ, ಹೊರ ಗುತ್ತಿಗೆ ನೌಕರರ ವೇತನ ಪಾವತಿ ಮತ್ತು ಭತ್ಯೆ, ಪೌರ ಕಾರ್ಮಿಕರಿಗೆ ಸುರಕ್ಷಾ ಧಿರಿಸು, ಸಲಕರಣೆ ಹಾಗೂ ಇತರೆ ಆಡಳಿತಾ ತ್ಮಕ ವೆಚ್ಚಗಳಿಗೆ ಒಟ್ಟು ₹೨.೬೬ ಕೋಟಿ ಬಜೆಟ್‌ನಲ್ಲಿ ಇರಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಅಗತ್ಯ ಇರುವ ಕಡೆ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ ಎಂದು ಹೇಳಿದರು.ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ನಿಯಂತ್ರಣಕ್ಕಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ ₹೧೫ ಲಕ್ಷ ತೆಗೆದಿಡಲಾಗಿದೆ. ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡ ಲಾಗಿದ್ದು, ಹೊಸದಾಗಿ ಕಸ ವಿಲೇವಾರಿ ವಾಹನ, ಯಂತ್ರೋಪಕರಣ ಖರೀದಿಗೆ ₹೪೦ ಲಕ್ಷ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.ತ್ಯಾಜ್ಯ ನಿರ್ವಹಣೆ ಮತ್ತು ಸಂಸ್ಕರಣೆಗಾಗಿ ₹೩ ಕೋಟಿ ವೆಚ್ಚದಲ್ಲಿ ಎಂಆರ್‌ಎಫ್ ಘಟಕ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ₹೯೦ ಲಕ್ಷ ವಿಸ್ತ್ರತ ಯೋಜನಾ ವರದಿ ತಯಾರಿಸಲಾಗಿದೆ. ಸರ್ಕಾರದ ಅನುದಾನ ನಿರೀಕ್ಷಿಸಿ ಕಾರ್ಯ ನಿರ್ವಹಿಸಲಾಗುವುದು. ಅದಲ್ಲದೇ ಪ್ರತಿ ವಾರ್ಡಿನ ಮನೆ ಮನೆಗೆ ವಿತರಿಸಲು₹೨೨ ಲಕ್ಷ ವೆಚ್ಚದಲ್ಲಿ ೧೮,೨೨೬ ಡಸ್ಟ್‌ಬಿನ್ ಖರೀದಿಸಲಾಗಿದೆ ಎಂದರು. ಸದಸ್ಯ ಟಿ.ದಾದಾಪೀರ್ ಮಾತನಾಡಿ, ಮಹಿಳೆಯರು ಇತ್ತೀಚೆಗೆ ದೈನಂದಿನ ಕೆಲಸ ಕಾರ್ಯಗಳಿಗಾಗಿ ಪುರಸಭೆ ಕಾರ್ಯಾ ಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಶೌಚಾಲಯದ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಹೊರ ಆವರಣದಲ್ಲಿ ತುರ್ತು ಶೌಚಗೃಹ ನಿರ್ಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.ಕೆಲ ವಾರ್ಡುಗಳಲ್ಲಿ ಕಿರು ನೀರು ಘಟಕದ ಮೋಟಾರ್‌ಗಳು ಪದೇ ಪದೆ ಕೆಡುತ್ತಿದ್ದು, ಕೆಳ ಹಂತದ ನೌಕರರು ಇದರ ಕಡೆ ಗಮನ ಹರಿಸುವುದಿರಲಿ, ಅಧಿಕಾರಿಗಳಿಗೆ ಮಾಹಿತಿ ನೀಡಲು ಸಹ ಮುಂದಾಗುತ್ತಿಲ್ಲ. ಎಲ್ಲವನ್ನು ಪುರಸಭೆ ಸದಸ್ಯರೇ ನಿಭಾಯಿಸುವಂತಾಗಿದ್ದು, ಅಧಿಕಾರಿಗಳು ನೌಕರರ ಮೇಲೆ ಹಿಡಿತ ಸಾಧಿಸಿ ಅವರಿಂದ ಕೆಲಸ ತೆಗೆಯಬೇಕು ಎಂದು ಆಗ್ರಹಿಸಿದರು.17ನೇ ವಾರ್ಡಿನಲ್ಲಿ ನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ರಸ್ತೆಯಲ್ಲೇ ಎರಡ್ಮೂರು ಟ್ರಾಕ್ಟರ್‌ಗಳಷ್ಟು ಕಲ್ಲು ಮಣ್ಣು ಸುರಿದು ಜನರ ಸಂಚಾರಕ್ಕೆ ತೊಂದರೆ ಮಾಡಲಾಗಿದೆ ಎಂದು ದೂರಿದರು. ಸದಸ್ಯ ಟಿ.ಜಿ.ಅಶೋಕ್ ಕುಮಾರ್ ಮಾತನಾಡಿ ಮನೆ , ನೀರಿನ ಕಂದಾಯ ಸಮರ್ಪಕವಾಗಿ ವಸೂಲು ಮಾಡುತ್ತಿಲ್ಲ. ಸ್ವಚ್ಛ ಭಾರತ್ ಅಭಿಯಾನದಲ್ಲಿ ಪಟ್ಟಣದ ಪ್ರತಿ ಮನಗೆ 2 ಡಸ್ಟ್ ಬಿನ್ ಕೊಡುವ ಯೋಜನೆ ಇದ್ದು ಇಲ್ಲಿಯ ತನಕ ಈ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ ಎಂದು ಹೇಳಿದರು. ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ, ಪುರಸಭೆ ವ್ಯಾಪ್ತಿ ಮಾಚೇನಹಳ್ಳಿಯಲ್ಲಿ ವಸತಿ ವಲಯಕ್ಕಾಗಿ ಭೂ ಪರಿವರ್ತನೆ ಮಾಡುವ ಮನವಿ ಬಂದಿದೆ. ಈ ಪ್ರದೇಶದಲ್ಲಿ ವಸತಿ ವಲಯ ಮಾಡುವುದರಿಂದ ಸಾರ್ವಜನಿಕರಿಗೆ ಮಾತ್ರವಲ್ಲ, ಸುತ್ತ ಮುತ್ತಲ ಕೃಷಿಕರಿಗೆ ಸಮಸ್ಯೆ ಆಗಲಿದೆ. ಹಾಗಾಗಿ ಭೂ ಪರಿವರ್ತನೆ ಮನವಿ ತಿರಸ್ಕರಿಸಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು.ಪುರಸಭೆ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು ವಿವಿಧ ಚರ್ಚೆಯಲ್ಲಿ ಭಾಗವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್, ಪುರಸಭೆ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು, ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು. 2ಕೆಟಿಆರ್.ಕೆ.1ಃಪುರಸಭೆ ಅಧ್ಯಕ್ಷ ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಆಯ-ವ್ಯಯ ಮಂಡಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಇದ್ದರು.