ಸಾರಾಂಶ
ಖೋ ಖೋ ಪಂದ್ಯಾವಳಿಗೆ ಬಂದಿದ್ದ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ವಾಹನ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಇರುವ ಬೈಪಾಸ್ ರಸ್ತೆಯಲ್ಲಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, 17ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆರ್‌ಟಿಒ ವಿರುದ್ಧ ಹರಿಹಾಯ್ದ ಸಾರ್ವಜನಿಕರು
ಕೊಪ್ಪಳ ಬೈಪಾಸ್‌ನಲ್ಲಿ ಘಟನೆಆಸ್ಪತ್ರೆಗೆ ಶಾಸಕ ಹಿಟ್ನಾಳ ಭೇಟಿ
ಕನ್ನಡಪ್ರಭ ವಾರ್ತೆ ಕೊಪ್ಪಳಖೋ ಖೋ ಪಂದ್ಯಾವಳಿಗೆ ಬಂದಿದ್ದ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ವಾಹನ ಕೊಪ್ಪಳ ನಗರಕ್ಕೆ ಹೊಂದಿಕೊಂಡು ಇರುವ ಬೈಪಾಸ್ ರಸ್ತೆಯಲ್ಲಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, 17ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯಾರ್ಥಿಗಳಾದ ಶಿವಕುಮಾರ ಗುಳದಳ್ಳಿ, ಮಮತಾ ವಾಲೀಕಾರ, ಉಮಾ ಬೆಣ್ಣಿ ತೀವ್ರವಾಗಿ ಗಾಯಗೊಂಡಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಕ್ಷಕರು ಸೇರಿ ವಾಹನದಲ್ಲಿ ಒಟ್ಟು 31 ಮಂದಿ ಪ್ರಯಾಣ ಮಾಡುತ್ತಿದ್ದರು.ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಗಮಿಸಿದ್ದ ಗುಳದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಕ್ರೀಡಾಕೂಟ ಮುಗಿಸಿಕೊಂಡು ತೆರಳುತ್ತಿರುವಾಗ ಈ ಘಟನೆ ನಡೆದಿದೆ.
ಆರ್‌ಟಿಒ ಸೀನಿಯರ್ ಇನ್‌ಸ್ಪೆಕ್ಟರ್ ಯಡವಟ್ಟು:ಟಾಟಾ ಏಸ್ ವಾಹನ ತೆರಳುವ ವೇಳೆಯಲ್ಲಿ ತಪಾಸಣೆಗೆಂದು ಆರ್‌ಟಿಒ ಹಿರಿಯ ಮೋಟಾರ ವಾಹನ ನಿರೀಕ್ಷಕ ಸುಲ್ತಾನ ಕಾಟೇನವರ್ ಕೈ ಮಾಡಿದ್ದಾರೆ. ವಾಹನ ವೇಗವಾಗಿ ಚಲಿಸುತ್ತಿದ್ದರಿಂದ ಏಕಾಏಕಿ ನಿಲ್ಲಿಸಲು ಸಾಧ್ಯವಾಗಿಲ್ಲ. ಆಗ, ನಿರೀಕ್ಷಕರ ಜೊತೆಗಿದ್ದ ಸಿಬ್ಬಂದಿ ವಾಹನ ನಿಲ್ಲಿಸಲು ಅಡ್ಡ ಓಡಿದ್ದರಿಂದ ಟಾಟಾ ಏಸ್ ಚಾಲಕ ದಿಢೀರ್ ಪಕ್ಕಕ್ಕೆ ತೆಗೆದುಕೊಂಡಿದ್ದರಿಂದ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.ಅದೃಷ್ಟವಶಾತ್ ಹೆದ್ದಾರಿಯಲ್ಲಿ ಹಿಂದೆ ಯಾವುದೇ ವಾಹನ ಬಾರದೆ ಇರುವುದರಿಂದ ದೊಡ್ಡ ದುರಂತವೊಂದು ತಪ್ಪಿದೆ.ಶಾಸಕರ ಭೇಟಿ:
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ, ಗಾಯಗೊಂಡ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಘಟನೆಯ ಕುರಿತು ಮಾಹಿತಿ ಪಡೆದರು.ಜಿಲ್ಲಾಸ್ಪತ್ರೆಗೆ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಸಹ ಭೇಟಿ ನೀಡಿ, ಮಕ್ಕಳಿಗೆ ಸಾಂತ್ವನ ಹೇಳಿದರು.