ತೆರಿಗೆ ಬಾಕಿ ದಂಡ, ಬಡ್ಡಿ ಮನ್ನಾಗೆ ತಿದ್ದುಪಡಿ ವಿಧೇಯಕ: ಸಂಪುಟ ಒಪ್ಪಿಗೆ

| Published : Feb 16 2024, 01:46 AM IST

ತೆರಿಗೆ ಬಾಕಿ ದಂಡ, ಬಡ್ಡಿ ಮನ್ನಾಗೆ ತಿದ್ದುಪಡಿ ವಿಧೇಯಕ: ಸಂಪುಟ ಒಪ್ಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಬಿಎಂಪಿಯ ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆಯಲ್ಲಿ ಸುಳ್ಳು ಮಾಹಿತಿ ಕೊಟ್ಟವರಿಗೆ ದಂಡ, ಬಡ್ಡಿ ಮನ್ನಾ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ದಾರರು ತಪ್ಪು ಮಾಹಿತಿ ನೀಡಿದವರಿಗೆ ಹಾಗೂ ತೆರಿಗೆ ಬಾಕಿ ಉಳಿಸಿಕೊಂಡಿರುವರಿಗೆ ವಿಧಿಸುವ ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ 2024ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಬಿಬಿಎಂಪಿ ಕಾಯ್ದೆಯನ್ನು ಜಾರಿಗೆ ತಂದಾಗ ತೆರಿಗೆ ಬಗ್ಗೆ ತಪ್ಪು ಮಾಹಿತಿ ನೀಡಿದವರಿಗೆ ಹಾಗೂ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ದಂಡ ವಿಧಿಸಲು ಮತ್ತು ಆ ದಂಡ ಮೊತ್ತಕ್ಕೆ ಬಡ್ಡಿ ಹಾಕಲು ಮಾತ್ರ ಅವಕಾಶ ಮಾಡಲಾಗಿತ್ತು. ಆದರೆ, ಈ ದಂಡ ಮತ್ತು ಬಡ್ಡಿ ಮನ್ನಾ ಮಾಡಬಹುದಾದ ಅಂಶಗಳನ್ನು ಕಾಯ್ದೆಯಲ್ಲಿ ಸೇರಿಸಿರಲಿಲ್ಲ. ಆದರೆ, ಈಗ ಸರ್ಕಾರ ಅಂತಹ ತಪ್ಪು ಮಾಹಿತಿ ನೀಡಿದ ಹಾಗೂ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಒಂದೇ ಬಾರಿಗೆ ಬಾಕಿ ಮೊತ್ತವನ್ನೆಲ್ಲಾ ಪಾವತಿಸಿದರೆ ಅವರಿಗೆ ದಂಡ ಮತ್ತು ಬಡ್ಡಿ ಮನ್ನಾ ಮಾಡಲು ಮುಂದಾಗಿದೆ. ಹಾಗಾಗಿ ಕಾಯ್ದೆಗೆ ತಿದ್ದುಪಡಿ ತರುವುದು ಅನಿವಾರ್ಯವಾಗಿದ್ದು ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ.

ಮುಂದೆ ಈ ವಿಧೇಯಕವನ್ನು ಹಾಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನದಲ್ಲಿ ಮಂಡಿಸಿ ಸದನದಲ್ಲಿ ಒಪ್ಪಿಗೆ ಪಡೆದರೆ ಆಸ್ತಿ ತೆರಿಗೆ ಬಾಕಿ ದಾರರಿಗೆ ವಿಧಿಸಿರುವ ದಂಡ ಮತ್ತು ಬಡ್ಡಿ ಮನ್ನಾ ಮಾಡಲು ದಾರಿಯಾಗಲಿದೆ.

₹20 ಲಕ್ಷಗೂ ಹೆಚ್ಚಿನ ದಂಡ, ಬಡ್ಡಿ:

ಮಾಹಿತಿ ಪ್ರಕಾರ ಬಿಬಿಎಂಪಿ ಕಂದಾಯ ವಿಭಾಗವು ತನ್ನ ಎಲ್ಲ ಕಂದಾಯ ಅಧಿಕಾರಿಗಳ ಮೂಲಕ ನಗರದಲ್ಲಿನ ಆಸ್ತಿಗಳ ಪರಿಶೀಲನೆ ನಡೆಸುತ್ತಿದೆ. ಈ ವೇಳೆ ಎಸ್‌ಎಎಸ್‌ ಅಡಿಯಲ್ಲಿ ಆಸ್ತಿಯ ವಿವಿರ ನೀಡುವಾಗ ತಪ್ಪು ಮಾಹಿತಿ ನೀಡಿದವರನ್ನು ಪತ್ತೆ ಮಾಡಿ ದಂಡ ಮತ್ತು ಬಡ್ಡಿ ಪಾವತಿಸುವಂತೆ ನೋಟಿಸ್‌ ನೀಡಲಾಗುತ್ತಿದೆ. ಅಲ್ಲದೆ ವಸತಿ ಕಟ್ಟಡಕ್ಕೆ ಬೆಸ್ಕಾಂನಿಂದ ವಾಣಿಜ್ಯ ವಿದ್ಯುತ್‌ ಸಂಪರ್ಕ ಪಡೆದಿದ್ದರೆ ಅಂತಹ ಕಟ್ಟಡಗಳನ್ನು ಮುಖ್ಯವಾಗಿ ಗುರಿಯಾಗಿಸಿ ನೋಟಿಸ್‌ ನೀಡಲಾಗುತ್ತಿದೆ. ಹೀಗೆ ನೋಟಿಸ್‌ ನೀಡುವಾಗ ಪ್ರಸಕ್ತ ವರ್ಷದಷ್ಟೇ ಅಲ್ಲದೆ, ಕಟ್ಟಡ ನಿರ್ಮಾಣಗೊಂಡ ವರ್ಷದಿಂದ ಈ ವರ್ಷದವರೆಗೆ ತೆರಿಗೆ ಬಾಕಿ ಹಾಗೂ ಅದಕ್ಕೆ ದಂಡ ಮತ್ತು ಬಡ್ಡಿಯನ್ನು ಸೇರಿಸಿ ಡಿಮ್ಯಾಂಡ್‌ ನೋಟಿಸ್‌ ನೀಡಲಾಗುತ್ತಿದೆ. ಬಿಬಿಎಂಪಿ ಕಂದಾಯ ವಿಭಾಗದ ಲೆಕ್ಕಾಚಾರದಂತೆ ಕೆಲ ಆಸ್ತಿಗಳಿಗೆ 20 ಲಕ್ಷ, 30 ಲಕ್ಷ ರು.ವರೆಗೆ ದಂಡ ಮತ್ತು ಬಡ್ಡಿ ವಿಧಿಸಿ ನೋಟಿಸ್‌ ನೀಡಲಾಗಿದೆ. ಇದು ಆಸ್ತಿ ಮಾಲೀಕರನ್ನು ಕಂಗಾಲಾಗಿಸಿದೆ.₹471.93 ಕೋಟಿ ಡಿಮ್ಯಾಂಡ್‌ ನೋಟಿಸ್‌

ಬಿಬಿಎಂಪಿ ಕಂದಾಯ ವಿಭಾಗ ಎಸ್‌ಎಎಸ್‌ ಪದ್ಧತಿ ಅಡಿಯಲ್ಲಿ ತಪ್ಪು ಮಾಹಿತಿ ನೀಡಿದ 14,724 ಆಸ್ತಿಗಳಿಗೆ ನೋಟಿಸ್‌ ನೀಡಿದೆ. ಆ ಆಸ್ತಿಗಳು ಹೆಚ್ಚುವರಿ ತೆರಿಗೆ, ದಂಡ ಮತ್ತು ಬಡ್ಡಿ ರೂಪದಲ್ಲಿ ₹471.93 ಕೋಟಿ ಪಾವತಿಸಬೇಕು ಎಂದು ಡಿಮ್ಯಾಂಡ್‌ ನೋಟಿಸ್‌ ನೀಡಲಾಗಿದೆ. ಅದರ ಜತೆಗೆ ತೆರಿಗೆ ಬಾಕಿ ಉಳಿಸಿಕೊಂಡ 47,664 ಆಸ್ತಿಗಳಿಗೆ ತೆರಿಗೆ ಬಾಕಿ ಪಾವತಿಸುವಂತೆಯೂ ಸೂಚಿಸಲಾಗಿದೆ. ಆ ಆಸ್ತಿಗಳಿಗೆ ನೋಟಿಸ್‌ ನೀಡಿ, ಭಾರೀ ಪ್ರಮಾಣದ ತೆರಿಗೆ ಬಾಕಿ ಉಳಿಸಿಕೊಂಡವರು ಕೂಡಲೆ ತೆರಿಗೆ ಪಾವತಿಸುವಂತೆ ಸೂಚಿಸಲಾಗುತ್ತಿದೆ. ಒಂದು ವೇಳೆ ತೆರಿಗೆ ಪಾವತಿಸದಿದ್ದರೆ ಆಸ್ತಿಗಳಿಗೆ ಬೀಗಮುದ್ರೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗುತ್ತಿದೆ.10,533 ಆಸ್ತಿಗಳಿಗೆ ಬೀಗಮುದ್ರೆ

ಆಸ್ತಿ ವಿವರ ತಪ್ಪು ಮಾಹಿತಿ ನೀಡುವುದು ಹಾಗೂ ತೆರಿಗೆ ಬಾಕಿ ಉಳಿಸಿಕೊಂಡವರ ಪೈಕಿ ಈಗಾಗಲೇ 10,533 ಆಸ್ತಿಗಳಿಗೆ ಬೀಗಮುದ್ರೆ ಹಾಕಲಾಗಿದೆ. ಅದರಲ್ಲಿ ಪ್ರಮುಖವಾಗಿ ವಸತಿ ಕಟ್ಟಡದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಆಸ್ತಿಗಳನ್ನು ಸೀಲ್‌ ಮಾಡಲಾಗಿದೆ.