ಕೊಪ್ಪಳ ಜಿಲ್ಲೆಯಲ್ಲೂ ನೂರಾರು ವ್ಯಾಪಾರಸ್ಥರಿಗೆ ತೆರಿಗೆ ಇಲಾಖೆ ನೋಟಿಸ್‌

| Published : Jul 23 2025, 12:30 AM IST

ಕೊಪ್ಪಳ ಜಿಲ್ಲೆಯಲ್ಲೂ ನೂರಾರು ವ್ಯಾಪಾರಸ್ಥರಿಗೆ ತೆರಿಗೆ ಇಲಾಖೆ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ವಾಣಿಜ್ಯ ತೆರಿಗೆ ಇಲಾಖೆಯು ಕೇವಲ ಕೊಪ್ಪಳ, ಕುಕನೂರು, ಯಲುಬುರ್ಗಾ ಮತ್ತು ಕುಷ್ಟಗಿ ವ್ಯಾಪ್ತಿ ಹೊಂದಿದೆ. ಉಳಿದಂತೆ ಗಂಗಾವತಿ ಇಲಾಖೆ ವ್ಯಾಪ್ತಿಗೆ ಬರುವ ಗಂಗಾವತಿ, ಕಾರಟಗಿ, ಕನಕಗಿರಿಯ ವ್ಯಾಪ್ತಿಯೂ ಸೇರಿದರೆ 100ಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಕೊಪ್ಪಳ:

ಪೋನ್ ಫೇ ಸೇರಿದಂತೆ ವಿವಿಧ ಯುಪಿಐ ಮೂಲಕ ಹಣ ಸ್ವೀಕರಿಸಿ ಜಿಎಸ್‌ಟಿ ಮಿತಿ ದಾಟಿದವರಿಗೆ ಕೊಪ್ಪಳದಲ್ಲಿಯೂ ನೋಟಿಸ್ ಜಾರಿ ಮಾಡಲಾಗಿದೆ. ಲಭ್ಯ ಮಾಹಿತಿಯ ಪ್ರಕಾರ ಸುಮಾರು 100ಕ್ಕೂ ಹೆಚ್ಚು ಜನರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು ಕೊಪ್ಪಳದ ವಾಣಿಜ್ಯ ತೆರಿಗೆ ಇಲಾಖೆಯಿಂದ 28 ನೋಟಿಸ್ ಜಾರಿ ಮಾಡಿರುವ ಮಾಹಿತಿ ಲಭಿಸಿದೆ.

ಕೊಪ್ಪಳ ವಾಣಿಜ್ಯ ತೆರಿಗೆ ಇಲಾಖೆಯು ಕೇವಲ ಕೊಪ್ಪಳ, ಕುಕನೂರು, ಯಲುಬುರ್ಗಾ ಮತ್ತು ಕುಷ್ಟಗಿ ವ್ಯಾಪ್ತಿ ಹೊಂದಿದೆ. ಉಳಿದಂತೆ ಗಂಗಾವತಿ ಇಲಾಖೆ ವ್ಯಾಪ್ತಿಗೆ ಬರುವ ಗಂಗಾವತಿ, ಕಾರಟಗಿ, ಕನಕಗಿರಿಯ ವ್ಯಾಪ್ತಿಯೂ ಸೇರಿದರೆ 100ಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಯುಪಿಐ ಮೂಲಕ ₹ 40 ಲಕ್ಷಕ್ಕೂ ಅಧಿಕ ಹಣ ಸ್ವೀಕರಿಸಿದ ಆಧಾರದ ಮೇಲೆ ನೋಟಿಸ್ ಜಾರಿಗೊಳಿಸಿದ್ದು ಜಿಎಸ್‌ಟಿ ಪಾವತಿಸುವಂತೆ ಸೂಚಿಸಲಾಗಿದೆ. ಕೊಪ್ಪಳ ಜಿಲ್ಲಾದ್ಯಂತ ಲಿಕ್ಕರ್ ವ್ಯಾಪಾರಸ್ಥರಿಗೆ ಅಧಿಕ ನೋಟಿಸ್ ಜಾರಿಯಾಗಿದ್ದು, ಉಳಿದಂತೆ ಕೆಲವೇ ಕೆಲವು ಜನರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಆತಂಕಗೊಂಡ ವ್ಯಾಪಾರಸ್ಥರು:

ನೋಟಿಸ್ ಜಾರಿಯಿಂದ ವ್ಯಾಪಾರಸ್ಥರು ಆತಂಕಗೊಂಡಿದ್ದಾರೆ. ತಕ್ಷಣ ಅವರು ಚಾರ್ಟೆಡ್ ಅಕೌಂಟೆಂಟ್ ಬಳಿಗೆ ಹೋಗಿ ಏನು ಮಾಡಬೇಕು ಎಂದು ಕೇಳುತ್ತಿದ್ದಾರೆ. ಸೇವಾ ವಲಯದಲ್ಲಿರುವವರು ₹ 20 ಲಕ್ಷ ದಾಟಿದರೆ ಮತ್ತು ಗೂಡ್ಸ್ ವ್ಯಾಪಾರ ಮಾಡುವವರು ₹ 40 ಲಕ್ಷ ದಾಟಿದರೆ ಜಿಎಸ್‌ಟಿ ವ್ಯಾಪ್ತಿಗೆ ಬರುತ್ತಾರೆ. ಹೀಗಾಗಿ, ಬಂದಿರುವ ನೋಟಿಸ್ ಅನ್ವಯ ತಮ್ಮ ವಿವರಣೆ ನೀಡಬೇಕು ಮತ್ತು ಅದು ನಿಯಮಾನುಸಾರ ಆಗದಿದ್ದರೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ₹ 40 ಲಕ್ಷ ಗಡಿ ದಾಟಿದವರು ₹ 1 ಲಕ್ಷಕ್ಕೂ ಅಧಿಕ ಜಿಎಸ್‌ಟಿ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.ಅಧಿಕ ವಹಿವಾಟು ನಡೆಸಿದವರಿಗೆ ನೋಟಿಸ್ ನೀಡಲಾಗಿದೆ. 200ಕ್ಕೂ ಹೆಚ್ಚು ನೋಟಿಸ್‌ಗಳು ಕೊಪ್ಪಳ ಜಿಲ್ಲೆಯಲ್ಲಿ ಬಂದಿವೆ. ಆದರೆ, ಇದರಲ್ಲಿ ವಿವಿಧೆಡೆ ವ್ಯಾಪಾರ ಮಾಡುತ್ತಿರುವುದರಿಂದ ಬೇರೆ ಜಿಲ್ಲೆಯಿಂದಲೂ ನೋಟಿಸ್ ಜಾರಿಯಾಗಿದೆ.

ಚಂದ್ರಕಾಂತ ತಾಲೇಡಾ, ಚಾರ್ಟೆಡ್ ಅಕೌಂಟೆಂಟ್ ನೋಟಿಸ್ ಬಂದಾಕ್ಷಣ ಗಾಬರಿಯಾಗುವ ಅಗತ್ಯವಿಲ್ಲ. ನಿಯಮಾನುಸಾರ ವಿವರಣೆ ನೀಡಿದರೆ ಖಂಡಿತವಾಗಿಯೂ ಅವರಿಗೆ ಸೂಕ್ತ ಮಾಹಿತಿ ನೀಡಲಾಗುತ್ತದೆ. ನಮ್ಮ ಇಲಾಖಾ ವ್ಯಾಪ್ತಿಯಲ್ಲಿ ಈ ವರೆಗೂ 28 ಜನರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಸುರೇಶ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಕೊಪ್ಪಳ