ಸಾರಾಂಶ
ತುಂಗಭದ್ರಾ ಜಲಾಶಯದ ಟ್ರಸ್ಟ್ ಗೇಟ್‌ಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಕೊಪ್ಪಳ ಜಿಲ್ಲಾ ಸಚಿವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬಳ್ಳಾರಿ
ತುಂಗಭದ್ರಾ ಜಲಾಶಯದ ಟ್ರಸ್ಟ್ ಗೇಟ್‌ಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಕೊಪ್ಪಳ ಜಿಲ್ಲಾ ಸಚಿವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ ಆರೋಪಿಸಿದ್ದಾರೆ.ಜೂ.27, 2025ರಂದು ಬೆಂಗಳೂರಿನಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಆದರೆ, ಈ ಸಭೆ ನಡೆಯುವ ಮೂರು ತಿಂಗಳು ಮುಂಚೆಯೇ ಕೇಂದ್ರ ಜಲಶಕ್ತಿ ಸಚಿವಾಲಯದ ತಾಂತ್ರಿಕ ತಜ್ಞರ ಸಮಿತಿಯು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಗೇಟುಗಳ ಶಿಥಿಲಾವಸ್ಥೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಿತ್ತು. "ಗೇಟುಗಳನ್ನು ತಕ್ಷಣವೇ ಬದಲಿಸಲೇಬೇಕು " ಎಂದು ಸ್ಪಷ್ಟ ಎಚ್ಚರಿಕೆಯನ್ನೂ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಈ ಗಂಭೀರ ಎಚ್ಚರಿಕೆಯನ್ನು ಸಾರಾಸಗಟಾಗಿ ನಿರ್ಲಕ್ಷಿಸಿ ಭಂಡ ಧೈರ್ಯದಿಂದ ಜಲಾಶಯದಲ್ಲಿ 80 ಟಿಎಂಸಿ ನೀರನ್ನು ಸಂಗ್ರಹಿಸಿದೆ. ಆದರೆ, ಗೇಟುಗಳು ಶಿಥಿಲಗೊಂಡಿರುವುದು ಹಾಗೂ ಏಳು ಗೇಟುಗಳು ಬೆಂಡಾಗಿರುವ ಹಿನ್ನೆಲೆ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಕ್ರಸ್ಟ್ ಗೇಟುಗಳ ನಿರ್ಮಾಣ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಲು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ.
ಜಲಾಶಯದ ನಿರ್ವಹಣೆ ಮತ್ತು ಆಡಳಿತಾತ್ಮಕ ಜವಾಬ್ದಾರಿ ಸಂಪೂರ್ಣವಾಗಿ ರಾಜ್ಯ ಸರ್ಕಾರದ್ದಾಗಿದೆ. ಬೇಸಿಗೆಯಲ್ಲಿ ಸಿಕ್ಕ 3 ತಿಂಗಳ ಅವಧಿಯಲ್ಲಿ, ಎಲ್ಲಾ 33 ಗೇಟುಗಳ ದುರಸ್ತಿ ಕಾಮಗಾರಿಯನ್ನು ಒಂದೇ ಗುತ್ತಿಗೆದಾರನಿಗೆ ನೀಡುವ ಬದಲು, 11 ಗುತ್ತಿಗೆದಾರರಿಗೆ ತಲಾ 3 ಗೇಟುಗಳಂತೆ "ತುಂಡು ಗುತ್ತಿಗೆ " ನೀಡಿದ್ದರೆ, ಪ್ರತಿಯೊಬ್ಬರಿಗೂ ಒಂದು ಗೇಟು ಸರಿಪಡಿಸಲು ಒಂದು ತಿಂಗಳ ಕಾಲಾವಕಾಶ ಸಿಗುತ್ತಿತ್ತು. ಈ ಮೂಲಕ ಮೂರೇ ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಬಹುದಿತ್ತು. ಟೆಂಡರ್‌ನಲ್ಲಿ ಭಾಗವಹಿಸಲು ಕಂಪನಿಗಳು ಮುಂದೆ ಬರಲಿಲ್ಲ ಎಂಬ ಕೊಪ್ಪಳ ಜಿಲ್ಲಾ ಸಚಿವರ ಹೇಳಿಕೆ, ರಾಜ್ಯ ಸರ್ಕಾರದ ಮೇಲೆ ಯಾರಿಗೂ ವಿಶ್ವಾಸವಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಗುರುಲಿಂಗನಗೌಡರು ಟೀಕಿಸಿದ್ದಾರೆ.