ಹಾವೇರಿ ನಗರದ ಹೊರವಲಯದಲ್ಲಿರುವ ಕನಕ ಲೋಕ ಶಿಕ್ಷಣ ಟ್ರಸ್ಟ್‌ನ ಬಿ.ಎಂ. ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಬುಧವಾರ 13ನೇ ವರ್ಷದ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಗೋಪೂಜೆ, ಮಕ್ಕಳಿಂದ ಪಾಲಕರ ಪಾದಪೂಜೆ ಕಾರ್ಯಕ್ರಮ ನಡೆಯಿತು.
ಹಾವೇರಿ: ಮಕ್ಕಳಿಗೆ ಮನೆಯಲ್ಲಿ ತಾಯಂದಿರು ಸಂಸ್ಕೃತಿ, ಸಂಸ್ಕಾರ ಕಲಿಸಿಕೊಡಬೇಕು. ಶಾಲೆಯಲ್ಲಿ ಶಿಕ್ಷಕರು ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದು ಬೆಂಗಳೂರಿನ ಸುವರ್ಣ ಮುಕ್ತಿ ಸಂಸ್ಕೃತಿ ಧಾಮದ ಸಂಸ್ಥಾಪಕ ಆಚಾರ್ಯ ಡಾ. ಎಂ. ನಾಗರಾಜ ಹೇಳಿದರು.
ನಗರದ ಹೊರವಲಯದಲ್ಲಿರುವ ಕನಕ ಲೋಕ ಶಿಕ್ಷಣ ಟ್ರಸ್ಟ್‌ನ ಬಿ.ಎಂ. ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಬುಧವಾರ ನಡೆದ 13ನೇ ವರ್ಷದ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗೋಪೂಜೆ, ಮಕ್ಕಳಿಂದ ಪಾಲಕರ ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಶಿಕ್ಷಕರಿಗೆ ಗೌರವ ಕೊಡುವ ಭಾವನೆಯನ್ನು ತಾಯಂದಿರು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು.ಮಕ್ಕಳಿಗೆ ತಾಯಿ ಅಧ್ಯಾತ್ಮದ ತಿಳಿವಳಿಕೆ ನೀಡಬೇಕು. ಗಾಂಧೀಜಿ, ವಿವೇಕಾನಂದರು, ಶಿವಾಜಿ ಮಹಾರಾಜರ ಬಗ್ಗೆ ಅವರ ತಾಯಿ ಹೇಗೆ ತಿಳಿವಳಿಕೆ ನೀಡಿದರೋ ಆ ರೀತಿಯಲ್ಲಿ ಮಕ್ಕಳಿಗೆ ಸರಸ್ವತಿಯ ಜ್ಞಾನವನ್ನು ತಾಯಂದಿರು ನೀಡಬೇಕು. ಭಾರತದ ಸಂಸ್ಕೃತಿ ಅದ್ಭುತವಾದದ್ದು. ಅಮೆರಿಕ, ಯುರೋಪ, ಜರ್ಮನಿಯವರು ಭಾರತದ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿದ್ದಾರೆ. ಕಣ ಕಣದಲ್ಲೂ ದೇವರು ಇದ್ದಾನೆ. ದೇವರ ಸ್ವರೂಪವೇ ತಾಯಿ ಎಂದು ಹೇಳಿದರು.
ನಿವೃತ್ತ ಐಪಿಎಸ್ ಅಧಿಕಾರಿ ಎಂ.ಆರ್. ಪೂಜಾರ ಮಾತನಾಡಿ, ಶಿಕ್ಷಣ, ಸಂಸ್ಕಾರ ಇರುವ ವ್ಯಕ್ತಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತಾನೆ. ಕಠಿಣ ಶ್ರಮ ಇರಬೇಕು. ಹಣೆಬರಹ ಚೆನ್ನಾಗಿಲ್ಲ ಎಂದು ಕೂರಬಾರದು. ಗುರಿಯತ್ತ ನಿರಂತರ ಪ್ರಯತ್ನ ಮಾಡಿದರೆ ಸಾಧನೆ ಮಾಡುತ್ತಾರೆ. ಕಲಿಕೆ ಎಂದರೆ ನಿರಂತರ ಕಲಿಕೆಗೆ ಉಸಿರಾಟ ಇರುವವರೆಗೂ ಕಲಿಯಬೇಕು. ಆವಾಗಲೇ ಪರಿಣತರಾಗಿ ಮೇಲಕ್ಕೆ ಬರುತ್ತಾರೆ. ಒಂದು ಕೆಲಸ ಸಿಕ್ಕ ಮೇಲೆ ಕಲಿಯುವುದನ್ನು ಬಿಡಬಾರದು. ಕಲಿಕೆ ನಿರಂತರವಾಗಿ ಇರಬೇಕು. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಪೋಷಕರನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಮಕ್ಕಳಿಗೆ ಪೋಷಕರು ಆದರ್ಶ ಹಾಗೂ ಮಾರ್ಗದರ್ಶಕರಾಗಿರಬೇಕು ಎಂದರು.ಕನಕ ಲೋಕ ಶಿಕ್ಷಣ ಟ್ರಸ್ಟ್ ಚೇರ್‌ಮನ್ ಪ್ರೊ. ನಾಗರಾಜ ಎಂ. ಮಾತನಾಡಿ, ಮಾತೃ ದೇವೋಭವ, ಪಿತೃ ದೇವೋಭವ ಎಂಬ ಚಿಂತನೆಯಲ್ಲಿ ಪಾಲಕರ ಪಾದಪೂಜೆ ಮಾಡಿರುವುದು ಅರ್ಥಪೂರ್ಣವಾಗಿದೆ. ಮಕ್ಕಳಲ್ಲಿ ಒಳ್ಳೆಯ ಚಿಂತನೆ ಗುಣ ಬೆಳೆಸಬೇಕಿದೆ. ಸುಸಂಸ್ಕೃತ ನಾಗರಿಕ, ವಿದ್ಯಾವಂತ ಆಗಬೇಕಾದರೆ ಒಳ್ಳೆಯ ಚಿಂತನೆ ಮಾಡಬೇಕು. ಸಂಸ್ಕೃತಿ ಬೆಳೆಸಿಕೊಳ್ಳುವ ಭಾರತೀಯನಾಗಿ ಬೆಳೆಯಬೇಕು ಎಂದರು.
ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಾಧನೆಯ ಮೆಟ್ಟಿಲುಗಳ ಬಗ್ಗೆ ಮೆಲುಕು ಹಾಕಿದರು. ರಜನಿ ಕಲಕೋಟಿ, ಪ್ರಾಚಾರ್ಯ ಸಂತೋಷ ಕೃಷ್ಣಾಪುರ, ಪ್ರಕಾಶ ಕುಸಗಲ್, ಶಶಾಂಕ್ ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.