ಸಾರಾಂಶ
ಪಾಲಕ-ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು
ರೋಣ: ವಿದ್ಯಾರ್ಥಿಗಳು ಟಿವಿ.ಮೊಬೈಲ್‌ಗಳಿಗೆ ದಾಸರಾಗದೇ ಉತ್ತಮ ಹವ್ಯಾಸ ರೂಢಿಸಿಕೊಂಡು ಕಷ್ಟಪಟ್ಟು ಅಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ರೂಪಗೊಳ್ಳಲು ಸಾಧ್ಯ ಎಂದು ರೋಟರಿ ಗದಗ ಸೆಂಟ್ರಲ್ ಅಧ್ಯಕ್ಷ ಆರ್.ಬಿ. ದಾನಪ್ಪಗೌಡ್ರ ಹೇಳಿದರು.
ತಾಲೂಕಿನ ಮಾರನಬಸರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಗದಗ ಸೆಂಟ್ರಲ್ ಕ್ಲಬ್ ಹಾಗೂ ರೋಟರಿ ಬೆಂಗಳೂರು ಗುಲ್‌ಮೋಹರ್ ಸಂಸ್ಥೆಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಾಲಕ-ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಧರ್ಮದ ತಳಹದಿಯಲ್ಲಿ ಮಕ್ಕಳಿಗೆ ನೈತಿಕ ಮೌಲ್ಯ, ಒಳ್ಳೆ ಹವ್ಯಾಸ ರೂಢಿಸಬೇಕು. ಪಠ್ಯೇತರ ಚಟುವಟಿಕೆಗಳಿಂದ ಸದೃಢ ಆರೋಗ್ಯ ಕಾಯ್ದುಕೊಳ್ಳಬೇಕು, ಉತ್ತಮ ಶಿಕ್ಷಣದಿಂದ ವ್ಯಕ್ತಿ ಉನ್ನತ ಹುದ್ದೆ ತಲುಪಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಕಾಂತ ಮಾರನಬಸರಿ ಮಾತನಾಡಿ, ನಮ್ಮ ಶಾಲೆಯ ಮಕ್ಕಳು ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದು, ಇಲ್ಲಿನ ಶಿಕ್ಷಕ ಬಳಗ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳಿಗೆ ಒಳ್ಳೆ ಸಂಸ್ಕಾರ ನೀಡುತ್ತಿದ್ದಾರೆ ಎಂದರು.ಈ ವೇಳೆ ಗದುಗಿನ ಸೌಖ್ಯದಾ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆ ಜರುಗಿತು. ಅಕಲೇಶ ರಂಗಣ್ಣವರ ಮಹೇಶ ನೇತ್ರ ತಪಾಸಣೆ ಮಾಡಿದರು. ರೋಟರಿ ಗದಗ ಸೆಂಟ್ರಲ್ ಕ್ಲಬ್ ಹಾಗೂ ರೋಟರಿ ಬೆಂಗಳೂರು ಗುಲ್‌ಮೋಹರ್ ಸಂಸ್ಥೆಯಿಂದ ಅಗತ್ಯವಿದ್ದವರಿಗೆ ಉಚಿತ ಕನ್ನಡಕ ನೀಡಲಾಯಿತು.
ರೋಟರಿ ಬೆಂಗಳೂರು ಗುಲ್‌ಮೋಹರ್ ಸಂಸ್ಥೆಯ ಅಧ್ಯಕ್ಷ ಪ್ರದೀಪ ಕುಲಕರ್ಣಿ, ಡಾ. ಮುರಳಿಕೃಷ್ಣ, ಗಂಗಾಧರಮೂರ್ತಿ ತಿಪಟೂರ, ಸುರೇಶ ನಿಡಗುಂದಿ, ಕ್ಲಬ್ ಕಾರ್ಯದರ್ಶಿ ಸಿ.ಜಿ. ಹಿರೇಗೌಡ್ರ ಎಂ.ಬಿ. ರಮಣಿ ಉಪಸ್ಥಿತರಿದ್ದರು.ಕ್ಲಬ್ ಕಾರ್ಯದರ್ಶಿ ಸಿ.ಜಿ. ಹಿರೇಗೌಡ್ರ ವಂದಿಸಿದರು.