ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಿ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡದೇ ಅವರಲ್ಲಿ ಜೀವನದ ಉತ್ಸಾಹ ಹಾಗೂ ಆತ್ಮವಿಶ್ವಾಸ ತುಂಬುವ ಮೂಲಕ ಉತ್ತಮ ಪ್ರಜೆಯನ್ನಾಗಿ ಮಾಡಬೇಕು.
ಧಾರವಾಡ:
ಬಹುತೇಕ ಪಾಲಕರು ಮಕ್ಕಳಿಗೆ ಬರೀ ಓದು, ಅಂಕ ಮತ್ತು ಉದ್ಯೋಗ ಗಳಿಕೆ ಹಾಗೂ ಹೊರದೇಶಕ್ಕೆ ಕಳುಹಿಸುವ ಹುಚ್ಚು ಮನಸ್ಸು ಹೊಂದಿದ್ದಾರೆ. ಇದನ್ನು ಬಿಟ್ಟು ಅವರಿಗೆ ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಸಬೇಕಿದೆ. ಉತ್ತಮ ಜೀವನದ ಪಾಠ ಹೇಳಿಕೊಡಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ ಮಕ್ಕಳ ಅಕಾಡೆಮಿಯ ರಜತ ಮಹೋತ್ಸವದಲ್ಲಿ ಮಕ್ಕಳ ಕುರಿತಾದ ಪುಸ್ತಕಗಳನ್ನು ಬಿಡುಗಡೆಗೊಳಿಸಿದ ಅವರು, ತಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಿ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡದೇ ಅವರಲ್ಲಿ ಜೀವನದ ಉತ್ಸಾಹ ಹಾಗೂ ಆತ್ಮವಿಶ್ವಾಸ ತುಂಬುವ ಮೂಲಕ ಉತ್ತಮ ಪ್ರಜೆಯನ್ನಾಗಿ ಮಾಡಬೇಕು ಎಂದ ಅವರು, ಆದಷ್ಟು ಪಾಲಕರು ಮಕ್ಕಳಿಂದ ಮೊಬೈಲ್ ದೂರ ಇರುವಂತೆ ನೋಡಿಕೊಳ್ಳಿ ಎಂಬ ಸಲಹೆ ನೀಡಿದರು.
ಡಾ. ರಾಜನ್ ದೇಶಪಾಂಡೆ 72ನೇ ವಯಸ್ಸಿನಲ್ಲೂ ಮಕ್ಕಳ ಕ್ಷೇತ್ರದಲ್ಲಿ ಕಾರ್ಯ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ವೈದ್ಯರಿಗೆ ತಮ್ಮ ವೃತ್ತಿ ನಿಭಾಯಿಸಲು ಇಡೀ ದಿನ ಸಾಲುವುದಿಲ್ಲ. ಇಂತಹ ಸಮಯದಲ್ಲಿ ಮಕ್ಕಳ ವೈದ್ಯರಾಗಿರುವ ಡಾ. ದೇಶಪಾಂಡೆ, ಮಕ್ಕಳು ಹಾಗೂ ಸಾಮಾಜಿಕ ಕೆಲಸದಲ್ಲಿ ನಿರತರಾಗಿರುವುದು ಶ್ಲಾಘನೀಯ ಎಂದರು.ಸಮಾರಂಭಕ್ಕೆ ಚಾಲನೆ ನೀಡಿದ ವಿಪ ಸಭಾಪತಿ ಬಸವರಾಜ ಹೊರಟ್ಟಿ, ಪ್ರತಿ ಪಾಲಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ತುಂಬ ಶ್ರಮಿಸುತ್ತಾರೆ. ಆದರೆ, ಬಹುತೇಕ ಮಕ್ಕಳನ್ನು ಪಾಲಕರನ್ನೇ ಮನೆಯಿಂದ ಹೊರ ಹಾಕುತ್ತಾರೆ. ಆದ್ದರಿಂದ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಬೇಕು. ಈ ಸಂಸ್ಕಾರ ಹಾಗೂ ಉತ್ತಮ ಆರೋಗ್ಯ ಪಡೆಯಲು ಡಾ. ರಾಜನ್ ದೇಶಪಾಂಡೆ ಮಕ್ಕಳ ಅಕಾಡೆಮಿ ಮೂಲಕ 25 ವರ್ಷಗಳ ಕಾಲ ಪ್ರಯತ್ನಿಸಿದ್ದು ಖುಷಿ ತಂದಿದೆ ಎಂದು ಹೇಳಿದರು.
ಮಕ್ಕಳ ಅಕಾಡೆಮಿ ಅಧ್ಯಕ್ಷ ಡಾ. ರಾಜನ್ ದೇಶಪಾಂಡೆ ಮಾತನಾಡಿದರು. ಪದ್ಮಶ್ರೀ ಪುರಸ್ಕೃತ ಪಂ. ವೆಂಕಟೇಶ ಕುಮಾರ, ಉಪಾಧ್ಯಕ್ಷ ಎಂ.ವೈ. ಸಾವಂತ, ಡಾ. ಆನಂದ ಪಾಂಡುರಂಗಿ ಸೇರಿದಂತೆ ಹಲವರು ಇದ್ದರು. ಇದೇ ಸಂದರ್ಭದಲ್ಲಿ ಅಕಾಡೆಮಿಯಿಂದ ದತ್ತು ಪಡೆದ ಮಡಕಿಕೊಪ್ಪದ ಗ್ರಾಮದ ಕುಟುಂಬವೊಂದಕ್ಕೆ ಮಾದರಿ ಮನೆಯನ್ನು ಗಣ್ಯರು ಹಸ್ತಾಂತರಿಸಿದರು.