ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಗ್ರಾಮಗಳಲ್ಲಿ ಸುಖ, ಶಾಂತಿ ನೆಮ್ಮದಿ ಜೀವನಕ್ಕೆ ದೇವಾಲಯಗಳು ಅಗತ್ಯ, ಇದರಿಂದ ಸಮುದಾಯಗಳ ನಡುವೆ ದ್ವೇಷ ಇರುವುದಿಲ್ಲ. ಅನೋನ್ಯ ಜೀವನಕ್ಕೂ ದೇವಾಲಯಗಳು ಸಾಕ್ಷಿಯಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ತಾಲೂಕಿನ ಖಾಜಿಕಲ್ಲಹಳ್ಳಿ ಗ್ರಾಮ ದೇವತೆ ಮಾರಮ್ಮ ದೇವಿ ಹಾಗೂ ನಾಗದೇವತೆಗಳ ಸ್ಥಿರ ಬಿಂಬ ಪ್ರತಿಷ್ಠಾಪನೆ ಹಾಗೂ ನೂತನ ವಿಮಾನ ಗೋಪುರ ಮಹಾ ಕುಂಬಾಭಿಷೇಕ ಮಹೋತ್ಸವದಲ್ಲಿ ಮಾತನಾಡಿದರು.ಉದ್ಯೋಗ, ಧಾರ್ಮಿಕ ಪ್ರವೃತ್ತಿ
ಒಂದು ಕಡೆ ಕೈಗಾರಿಕೆಗಳ ಸ್ಥಾಪನೆಯಾಗಿ ಉದ್ಯೋಗ ಸಿಗುವಂತಿದೆ ಮತ್ತೊಂದು ಕಡೆ ಧಾರ್ಮಿಕತೆಯ ಬೆಳೆಸುವ ಕಾರ್ಯಗಳು ಒಟ್ಟಿಗೆ ಹೋದಾಗ ಗ್ರಾಮವು ಸಮೃದ್ಧವಾಗುತ್ತದೆ. ಇಂತಹ ಬೆಳವಣಿಗೆಗಳು ಪ್ರತಿಯೊಂದು ಗ್ರಾಮಗಳಲ್ಲಿ ನಡೆಯಬೇಕಾಗಿದೆ, ಮನುಷ್ಯನ ಜೀವನಕ್ಕೆ ಉದ್ಯೋಗ ಧಾರ್ಮಿಕ ಆಚರಣೆಯ ಭಕ್ತಿ ಭಾವನೆಗೆ ದೇವರ ಗುಡಿಗಳು ಅವಶ್ಯಕತೆ ಇದೆ, ಭಾರತದಲ್ಲಿ ಸಾಮಾನ್ಯ ವ್ಯಕ್ತಿಯೂ ಸಹ ಧಾರ್ಮಿಕತೆ ಸಾರುವಂತಾಗಿದ್ದಾರೆ. ಆಧುನಿಕ ಯುಗದಲ್ಲಿ ಮನುಷ್ಯನ ಮನಸ್ಸು ಚಂಚಲವಾಗಿದ್ದು, ನಾವೆಲ್ಲರೂ ಸದಾ ಕಾಲ ದೇವರ ಕಡೆ ಮನಸ್ಸನ್ನು ಒಯ್ಯಬೇಕಿದೆ ಎಂದರು.ಮಕ್ಕಳಿಗೆ ಸಂಸ್ಕಾರ ಕಲಿಸಿಮನುಷ್ಯ ತಾನು ಬೆಳೆದು ಬಂದ ದಾರಿ ಮರೆಯಬಾರದು, ಯಾವುದೇ ರಂಗದಲ್ಲಿ ಇದ್ದರೂ ಕೂಡ ದೇವರ ಸ್ಮರಣೆ ಮಾಡಬೇಕು, ಆಗ ಮಾತ್ರ ನಮಗೆ ಸುಖ ನೆಮ್ಮದಿ ಶಾಂತಿ ಪ್ರಾಪ್ತಿಯಾಗಲಿದೆ, ಸಂಸಾರದ ಜಂಜಾಟದಲ್ಲಿ ಮುಂದೆ ಹೋಗಲು ಆಗುತ್ತಿಲ್ಲ, ದೇವರು, ದೇಹವೆಂಬ ಹಣತೆಗೆ ಎಣ್ಣೆ ಹಾಕಿ, ದೀಪ ಹಚ್ಚಿ ಭೂಮಿಗೆ ಕಳಿಸಿದ್ದಾನೆ, ನಾವು ಅದನ್ನು ಸರಿಯಾದ ಕಡೆ ಇರುವ ರೀತಿ ನೋಡಿಕೊಳ್ಳಬೇಕು, ಅದನ್ನು ಬಿಟ್ಟು ಬೇರೆ ಕಡೆ ನಾವು ಹೋಗುತ್ತಿದ್ದು ದೇವರನ್ನು ಮರೆಯುತ್ತಿದ್ದೇವೆ, ಇದು ಒಳ್ಳೆಯದಲ್ಲ ಪೂಜೆ ಮಾಡಿದ ರೀತಿಯಲ್ಲಿ ದೇಹವನ್ನು ಪ್ರತಿನಿತ್ಯ ಶುದ್ದವಾಗಿ ಇಟ್ಟು ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕಾಗಿದೆ ಎಂದು ಹೇಳಿದರು.ಬೆಂಗಳೂರು ಡಿಸಿಪಿ ಡಿ.ದೇವರಾಜ್ ಮಾತನಾಡಿ, ಗ್ರಾಮಗಳಲ್ಲಿ ಧಾರ್ಮಿಕ ಆಚರಣೆಗಳು ಹೆಚ್ಚಾಗಿ ನಡೆಯಬೇಕಾಗಿದೆ, ಪೂರ್ವಜರ ಆಚಾರ ವಿಚಾರಗಳನ್ನು ಮರೆಯದಂತೆ ಇಂದಿನ ಯುವ ಪೀಳಿಗೆ ಮುಂದುವರೆಸಿಕೊಂಡು ಹೋಗಬೇಕಾಗಿದೆ ಇದರಿಂದಾಗಿ ಹಳ್ಳಿಗಳಲ್ಲಿ ಶಾಂತಿ, ಸೌಹಾರ್ದ, ಏಕತೆಯ ಮೂಲಕ ದುಡಿಮೆಯಲ್ಲಿ ದೇವರನ್ನು ಕಾಣಬೇಕು, ದುಡಿದು, ಹಂಚಿ ತಿನ್ನುವುದರಿಂದ ಮನುಕುಲದ ಏಳಿಗೆಯಾಗಲಿದೆ. ಮೇಲುಕೀಳೆಂಬುದನ್ನು ಬಿಟ್ಟು ಎಲ್ಲರೂ ಸಮಾನರು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕಾಗಿದೆ ಎಂದರು.ಮಂದಿರದಿಂದ ಮಾನಸಿಕ ನೆಮ್ಮದಿ
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಮನುಷ್ಯನ ಇವತ್ತಿನ ಒತ್ತಡಗಳ ಜೀವನದಲ್ಲಿ ದೇವಸ್ಥಾನಗಳು ಅವಶ್ಯಕವಾಗಿ ಬೇಕಾಗಿದ್ದು, ಮಾನಸಿಕ ನೆಮ್ಮದಿ ಸಿಗುವ ತಾಣ ಎಂದರೆ ಅದು ದೇವಸ್ಥಾನವಾಗಿದೆ, ಹಣ ಅಧಿಕಾರ ಇದ್ದರೂ ಕೂಡ ನೆಮ್ಮದಿ ಇಲ್ಲದೆ ಇದ್ದರೆ ಜೀವನದಲ್ಲಿ ಸುಖಪಡಲು ಆಗುವುದಿಲ್ಲ, ರಾಜಕಾರಣವನ್ನು ಕೇವಲ ಚುನಾವಣೆಗೆ ಮಾತ್ರ ಸೀಮಿತಗೊಳಿಸಿ ಅಭಿವೃದ್ಧಿ ವಿಚಾರ ಬಂದಾಗ ರಾಜಕಾರಣ ಬದಿಗೊತ್ತಿ ಕೈಜೋಡಿಸಬೇಕಾಗಿದೆ, ಕ್ಷೇತ್ರದ ಅಭಿವೃದ್ಧಿಗೆ ಹಣದ ಕೊರತೆಯಿಲ್ಲ ಯಾವುದೇ ಒಳ್ಳೆಯ ಕೆಲಸಗಳಿಗೆ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಭಾಗವಹಿಸಬೇಕಾಗಿದೆ ಎಂದರು.ದೇವಾಲಯಕ್ಕೆ ಗ್ರಾಮಸ್ಥರ ನೆರವುದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು ಮಾತನಾಡಿ, ಇಂತಹ ದೇವರ ಕಾರ್ಯ ನಡೆಸಲು ಗ್ರಾಮದ ಪ್ರತಿಯೊಬ್ಬರೂ ಸಣ್ಣಮಟ್ಟದಿಂದ ಹಿಡಿದ ದೊಡ್ಡ ಮಟ್ಟದವರೆಗೆ ಸಹಾಯ ಮಾಡಿದ್ದಾರೆ, ಇದೇ ರೀತಿಯಲ್ಲಿ ಸೌಹಾರ್ದತೆಯಿಂದ ಮುಂದುವರೆಯುತ್ತೇವೆ ಎಂದು ತಿಳಿಸಿದರು.ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ನಾಗಲಾಪುರ ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ಪಟ್ಟದ ತೇಜೇಶಲಿಂಗ ಶಿವಾಜಾರ್ಯ ಸ್ವಾಮೀಜಿ, ಕಂದಾಯ ಸಚಿವ ಸಿ.ಬಿ.ಕೃಷ್ಣಬೈರೇಗೌಡ, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಮುಖಂಡರಾದ ಸೀಸಂದ್ರ ಗೋಪಾಲಗೌಡ, ನಂದಿನಿ ಪ್ರವೀಣ್, ಮೈಲಾಂಡಹಳ್ಳಿ ಮುರಳಿ, ಚಂಜಿಮಲೆ ರಮೇಶ್, ಕಲ್ಲಂಡೂರು ಲೋಕೇಶ್, ಪೆಮ್ಮಶೆಟ್ಟಿಹಳ್ಳಿ ಸುರೇಶ್, ಸೀತಿಹೊಸೂರು ಮುರಳಿಗೌಡ, ದೊಡ್ಡವಲ್ಲಬ್ಬಿ ಲಕ್ಷ್ಮಣಗೌಡ, ಶಿವಕುಮಾರ್ ದೀಕ್ಷಿತ್ ಇದ್ದರು.