ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಮಕ್ಕಳಿಗೆ ಉತ್ತಮ ಸಂಸ್ಕಾರ ಬೆಳೆಸಿ ನಾಗರೀಕ ಸಮಾಜದಲ್ಲಿ ಪ್ರಜ್ಞಾವಂತ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಪೋಷಕರದ್ದಾಗಿದೆ ಎಂದು ತುಮಕೂರಿನ ಮನಶಾಸ್ತ್ರ ಮತ್ತು ಒತ್ತಡ ನಿರ್ವಹಣಾ ತಜ್ಞರಾದ ಡಾ. ಪದ್ಮಾಕ್ಷಿ ಲೋಕೇಶ್ ತಿಳಿಸಿದರು.ನಗರದ ಠಾಗೂರ್ ಇಂಗ್ಲಿಷ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ದೃಷ್ಟಿಕೋನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಮಕ್ಕಳು ನಿಮ್ಮ ಕನ್ನಡಿಯಾಗಿದ್ದು ಮನೆಯಲ್ಲಿ ತಂದೆ ತಾಯಿಗಳು ಯಾವ ರೀತಿ ನಡೆದುಕೊಳ್ಳುತ್ತಾರೂ ಅದೇ ರೀತಿ ಮಕ್ಕಳು ವರ್ತಿಸುತ್ತಾರೆ. ಕಷ್ಟ ಸುಖಗಳ ನಡುವೆ ಮಕ್ಕಳನ್ನು ಬೆಳೆಸಬೇಕು. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಸಾಕು ನಮ್ಮ ಜವಾಬ್ದಾರಿ ಮುಗಿಯಿತು ಉಳಿದ ಕೆಲಸ ಶಿಕ್ಷಕರದ್ದು ಎಂದು ಸುಮ್ಮನಾಗುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಸಾಧಿಸಬೇಕೆಂಬ ಛಲ, ಧೈರ್ಯ ಇಲ್ಲದಂತಾಗಲಿದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಟಿ.ವಿ, ಮೊಬೈಲ್‌ಗಳಿಂದ ಮಕ್ಕಳನ್ನು ಆದಷ್ಟು ದೂರವಿಟ್ಟು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕು. ತಾಯಂದಿರು ಟಿ.ವಿ.ಮಾಧ್ಯಮ ಮತ್ತು ಮೊಬೈಲ್‌ಗೆ ಸೀಮಿತರಾಗದೆ ಮಕ್ಕಳಿಗೆ ಜ್ಞಾನ, ನಡೆ-ನುಡಿ, ಗುರು-ಹಿರಿಯರಿಗೆ ಗೌರವ, ಶಿಸ್ತನ್ನು ಕಲಿಸಬೇಕು. ಇತ್ತೀಚಿನ ದಿನಗಳಲ್ಲಿ ಪೋಷಕರು ಅಂಕಗಳಿಗೆಗೆ ಹೆಚ್ಚು ಒತ್ತು ಕೊಡುತ್ತಿದ್ದು ಇದರಿಂದ ಮಕ್ಕಳ ಬೌದ್ದಿಕ ಹಾಗೂ ಮಾನಸಿಕವಾಗಿ ಒತ್ತಡ ಹೆಚ್ಚಾಗಲಿದೆ. ಆದ್ದರಿಂದ ಮನೆಯೇ ಮೊದಲ ಪಾಠ ಶಾಲೆಯಾಗಿದ್ದು ಮಕ್ಕಳ ಬೇಕು ಬೇಡಗಳನ್ನು ಅರ್ಥಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿ ಎಂದರು. ಸಂಸ್ಥೆಯ ಅಧ್ಯಕ್ಷರಾದ ಡಾ. ಆರ್. ಅನಿಲ್ ಮತ್ತು ಕಾರ್ಯದರ್ಶಿ ಶಶಿಕಲಾ ಮಾತನಾಡಿ, ಮಕ್ಕಳಿಗೆ ಶಾಲೆಯ ಪಾಠದ ಜೊತೆಗೆ ಮನೆಯಲ್ಲಿ ಸಂಸ್ಕಾರ, ಸಂಸ್ಕೃತಿಯ ಪಾಠ ಅತಿಮುಖ್ಯ. ಮಕ್ಕಳ ಮೇಲೆ ಸಾಮಾಜಿಕ ಜಾಲತಾಣಗಳು ಬೇರೆಯೇ ಪರಿಣಾಮ ಬೀರುತ್ತಿದ್ದು ಅವರನ್ನು ಸರಿದಾರಿಗೆ ತರುವಲ್ಲಿ ಶಿಕ್ಷಕರಷ್ಟೇ ಪೋಷಕರಿಗೂ ಜವಾಬ್ದಾರಿ ಇದೆ. ನಮ್ಮ ಶಾಲೆಯಲ್ಲಿ ನೈತಿಕ ಮತ್ತು ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಪೋಷಕರಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮ ಮಕ್ಕಳ ಚಲನವಲಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ. ಶಾಲೆಗೆ ಪೋಷಕರು ತಿಂಗಳಿಗೊಮ್ಮೆಯಾದರೂ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮಹರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಫಾರೂಕ್, ಸಹ ಶಿಕ್ಷಕ ಸತೀಶ್, ಶಿಕ್ಷಣ ಶಿಕ್ಷಕ ಭಾನುಪ್ರಕಾಶ್ ಸೇರಿದಂತೆ ಶಿಕ್ಷಕರು, ಸಹಶಕ್ಷಕರು ಸಿಬ್ಬಂದಿ ವರ್ಗದವರು, ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳೇ ಕಾರ್ಯಕ್ರಮ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.