ಕನ್ನಡಪ್ರಭ ವಾರ್ತೆ ವಿಜಯಪುರ ಪಾಲಕರು ಮಕ್ಕಳಿಗೆ ಶ್ರಮದ ಮಹತ್ವ ಮತ್ತು ಹಣದ ಮೌಲ್ಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಪರಿಚಯಿಸಬೇಕು. ಆಗ ಮಕ್ಕಳು ಶಿಕ್ಷಣದ ಮಹತ್ವ ಅರಿಯುತ್ತಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪಾಲಕರು ಮಕ್ಕಳಿಗೆ ಶ್ರಮದ ಮಹತ್ವ ಮತ್ತು ಹಣದ ಮೌಲ್ಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಪರಿಚಯಿಸಬೇಕು. ಆಗ ಮಕ್ಕಳು ಶಿಕ್ಷಣದ ಮಹತ್ವ ಅರಿಯುತ್ತಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ನಗರದ ವೇದ ಅಕಾಡೆಮಿಯ ವೇದ ಭವನದಲ್ಲಿ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವೇದ ಕೋಚಿಂಗ್ ಅಕಾಡೆಮಿಯ 156 ವಿದ್ಯಾರ್ಥಿಗಳನ್ನು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ನ್ಯಾಷನಲ್‌ ಟೆಸ್ಟಿಂಗ್ ಏಜೆನ್ಸಿ ನಡೆಸುವ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ದ್ವಿತೀಯ(ಬಾಲಕಿಯರ ಕೆಟಗರಿ) ನಾಲ್ಕನೇ ಮತ್ತು ಆರನೇ ರ್‍ಯಾಂಕ್ ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಆರ್.ವ್ಹಿ.ಕಾಲೇಜಿನ ಪ್ರಾಧ್ಯಾಪಕ ಡಾ.ಆನಂದ ಜತ್ತಿ ಮಾತನಾಡಿ, ಮಕ್ಕಳ ಆರೋಗ್ಯ ಕಲಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವೇದ ಅಕಾಡೆಮಿಯಲ್ಲಿನ ಉತ್ತಮ ಆಹಾರ ಪದ್ದತಿ, ಹಾಸ್ಟೇಲ್‌, ಉತ್ತಮ ಪರಿಸರ ಹಾಗೂ ಶಿಕ್ಷಕರಿಂದ ನನ್ನ ಮಗ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್‌.ಚೌಕಿಮಠ ಮಾತನಾಡಿ, ವೇದ ಸಂಸ್ಥೆಯು ಎಲ್.ಕೆ.ಜಿ ಇಂದ ಪಿಜಿವರೆಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶ್ರಮವಹಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಶಿಕ್ಷಣದ ಹಬ್‌ ಆಗಿ ಛಾಪು ಮುಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸ್ಥೆಯ ಉಪಾಧ್ಯಕ್ಷ ದಯಾನಂದ ಕೆಲೂರ ಮಾತನಾಡಿ, 111 ವಿದ್ಯಾರ್ಥಿಗಳು-ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ 200ಕ್ಕಿಂತ ಹೆಚ್ಚು ಅಂಕ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಈ ಸಾಧನೆಯ ಶ್ರೇಯಸ್ಸು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸಲ್ಲುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷ ಡಾ.ಶಿವಾನಂದ ಕೆಲೂರ ಮಾತನಾಡಿ, ಸಂಸ್ಥೆಯ ಜೀವಾಳವೇ ಶಿಕ್ಷಕರು, ಸಾಧನೆಗೆ ಅವರೇ ಕಾರಣಿಕರ್ತರು ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಅಭಿನಂದನಾಪೂರ್ವಕವಾಗಿ ₹ 1 ಲಕ್ಷ ಹಣ ನೀಡಿ ಗೌರವಿಸಲಾಯಿತು. ಸೈನಿಕ ಶಾಲೆಗೆ ರಾಜ್ಯಕ್ಕೆ ಪ್ರಥಮ ಹಾಗೂ ದೇಶಕ್ಕೆ 111ನೇ ಸ್ಥಾನ ಪಡೆದ ಅನಘ ಜತ್ತಿಗೆ ₹ 21 ಸಾವಿರ ನಗದು, ಬಾಲಕಿಯರ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ದೇಶಕ್ಕೆ 376 ಸ್ಥಾನ ಪಡೆದ ಅಪೂರ್ವ ಭಂಡಿಗೆ ₹ 11 ಸಾವಿರ ಹಾಗೂ ರಾಜ್ಯಕ್ಕೆ 6ನೇ ಹಾಗೂ ದೇಶಕ್ಕೆ 353 ಸ್ಥಾನ ಪಡೆದ ಪ್ರತೀಕ ಬಂಡಗಾರಗೆ ₹ 11 ಸಾವಿರ ಬಹುಮಾನ ನೀಡಿ ಗೌರವಿಸಿದರು. ರಾಜ್ಯಕ್ಕೆ 9ನೇ ಸ್ಥಾನ ಪಡೆದ ಬಶೀರ ಅಹ್ಮದ ಜೀರಗಾಳ, ರಾಜ್ಯಕ್ಕೆ 9ನೇ ಸ್ಥಾನ ಪಡೆದ ಪ್ರಣವ ಝಳಕಿ, ರಾಜ್ಯಕ್ಕೆ 10ನೇ ಸ್ಥಾನ ಪಡೆದ ಅಮೀರ ಅಹ್ಮದ ಉಳಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯಗುರುಗಳಾದ ಸುನೀಲ ಬಿ.ಎಮ್, ಮಹಾದೇವಪ್ರಸಾದ ಕುಲಕರ್ಣಿ, ಮುಖ್ಯ ಗುರುಮಾತೆ ರಶ್ಮಿ ಕವಟಗಿಮಠ, ಸಾಜೀದ ದರ್ಗಾ, ಅರ್ಜುನ ಹಡಗಲಿ, ಜ್ಯೋತಿ ಕೊಪ್ಪದ, ಸುನಿತಾ ಕೊಲೂರ, ರಾಜಶೇಖರ ಮಂಗಾನವರ ಉಪಸ್ಥಿತರಿದ್ದರು.