ಸಾರಾಂಶ
ಕನ್ನಡಪ್ರಭ ವಾರ್ತೆ ವಾಡಿ
ಶ್ರೀರಾಮಚಂದ್ರನ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ಹುಟ್ಟಿದನೆಂಬುದಕ್ಕೆ ಸಾಕ್ಷಿ ಕೇಳಿದ ಕಾಂಗ್ರೆಸ್ ಪಕ್ಷವು ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿ ಸನಾತನ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಕಿಡಿಕಾರಿದರು.ಹಲಕರ್ಟಿಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಇಂಗಳಗಿ ಮಹಾ ಶಕ್ತಿ ಕೇಂದ್ರ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ರಾಮನ ಹುಟ್ಟನ್ನು ಪ್ರಶ್ನಿಸಿದ ಕಾಂಗ್ರೆಸ್ ಶ್ರೀರಾಮ ಮಂದಿರ ನಿರ್ಮಾಣವಾಗದಂತೆ ತಡೆಯಲು ಸುಪ್ರೀಂಕೋರ್ಟಿನಲ್ಲಿ ಅಫಿದಾವಿತ್ ಸಲ್ಲಿಸಿ 20 ವರ್ಷಗಳ ಕಾಲ ಮಂದಿರ ನಿರ್ಮಾಣವಾಗದಂತೆ ಹೋರಾಟ ನಡೆಸಿತು ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಗೌರವಯುತವಾಗಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಪತ್ರ ನೀಡಿದರೂ ಅದರ ನಾಯಕರು ಗೈರುಹಾಜರಾದರಲ್ಲದೆ ಕಪ್ಪು ಬಟ್ಟೆ ಸುತ್ತಿ ಪ್ರತಿಭಟನೆಯನ್ನು ನಡೆಸಿ ಹಿಂದೂ ವಿರೋಧಿ ಮಾನಸಿಕತೆಯನ್ನು ಪ್ರದರ್ಶಿಸಿದರು. ತುಷ್ಟಿಕರಣ ನೀತಿಯಿಂದ ಒಂದು ಸಮುದಾಯದ ಓಲೈಕೆಗಾಗಿ ನೀಚ ರಾಜಕಾರಣ ಮಾಡಿ ಭಾರತದ ಸನಾತನ ಹಿಂದೂ ಧರ್ಮೀಯರ ಮನಸ್ಸಿಗೆ ಘಾಸಿ ಮಾಡಿದ ಕಾಂಗ್ರೆಸ್ಸಿಗೆ ಈ ಬಾರಿ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುವುದು ನಿಶ್ಚಿತವಾಗಿದೆ ಎಂದರು.ಎರಡು ಮೂರು ವರ್ಷಗಳ ಕಾಲ ಸುಪ್ರೀಂಕೋರ್ಟಿನಲ್ಲಿ ನ್ಯಾಯಕ್ಕಾಗಿ ಕಾನೂನು ಹೋರಾಟ ಮಾಡಿ ಅದರಂತೆ ಐತಿಹಾಸಿಕ ತೀರ್ಪು ಪಡೆದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಮಸೀದಿ ನಿರ್ಮಾಣಕ್ಕೆ ಜಮೀನು ನೀಡಿ ನರೇಂದ್ರ ಮೋದಿಯವರು ನಿಜವಾದ ಜಾತ್ಯಾತೀತ ನಿಲುವನ್ನು ವ್ಯಕ್ತಪಡಿಸಿದ ಒಬ್ಬ ರಾಷ್ಟ್ರ ಸಂತ ಎಂದು ಶ್ಲಾಘಿಸಿದರು. ಎಲ್ಲರ ಭಾವನೆ ಗೌರವಿಸುವ ಪಕ್ಷ ಬಿಜೆಪಿಯಾಗಿದ್ದು ಅದಕ್ಕಾಗಿ ಜಗತ್ತಿನಲ್ಲಿ ಭಾರತಕ್ಕೆ ಎತ್ತರದ ಸ್ಥಾನವಿದೆ ಮತ್ತು ಮೋದಿಯವರನ್ನು ವಿಶ್ವ ನಾಯಕನಾಗಿ ಎಲ್ಲರೂ ಗೌರವಿಸುತ್ತಿದ್ದಾರೆ. 500 ವರ್ಷಗಳ ಕರಾಳ ಇತಿಹಾಸ ತೊಡೆದು ಹಾಕಿ ಭಾರತದಲ್ಲಿ ರಾಮರಾಜ್ಯ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಮೋದಿಯವರು ದಿಟ್ಟ ಹೆಜ್ಜೆ ಇಡುತ್ತಿದ್ದಾರೆ ಎಂದು ಡಾ. ಜಾಧವ್ ಹೇಳಿದರು.
ಕಾಂಗ್ರೆಸ್ ಪಕ್ಷ ಹಾಗೂ ಸ್ವಯಂಘೋಷಿತ ದಲಿತ ನಾಯಕರೆಂದು ಫೋಸ್ ಕೊಡುವವರು ಮತ ಬೇಟೆಗೆ ಬಂದಾಗ ಪ್ರಜ್ಞಾವಂತ ಮತದಾರರು ಹಾಗೂ ದಲಿತ ಬಂಧುಗಳು ಪ್ರಶ್ನೆ ಎತ್ತಿ ಅವರಿಗೆ ಮಂಗಳಾರತಿ ಮಾಡಿ ಕಳುಹಿಸಬೇಕು. ರಾಜ್ಯದಲ್ಲಿ ಮೋದಿ ಅಲೆಯಿಂದಾಗಿ ಕಾಂಗ್ರೆಸ್ ಈ ಬಾರಿ ಧೂಳಿಪಟವಾಗಲಿದೆ. ಮೋದಿಯವರ ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತ. ಮೇ ಏಳರಂದು ಎಲ್ಲರೂ ಮತಗಟ್ಟೆಗೆ ತೆರಳಿ ಶೇಕಡಾ ನೂರರಷ್ಟು ಮತದಾನ ಮಾಡಿ ಸದನಾಥನ ಹಿಂದೂ ಧರ್ಮದ ರಕ್ಷಣೆ ಮುಂದಿನ ಜನಾಂಗದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಿ ಎರಡನೇ ಬಾರಿಗೆ ಕಲಬುರ್ಗಿಯಿಂದ ಕಮಲವನ್ನು ಅರಳಿಸಬೇಕು ಎಂದು ಜಾಧವ್ ಹೇಳಿದರು.ಮಾಜಿ ಸಚಿವರಾದ ಬಾಬುರಾವ್ ಚೌಹಾಣ್, ಲಿಂಗಾರೆಡ್ಡಿ ಬಾಸರೆಡ್ಡಿ, ಮಲ್ಲಣ್ಣ ಸಾಹುಕಾರ್, ಶರಣಪ್ಪ ತಳವಾರ್, ಚಂದ್ರಶೇಖರ ಅವಂಟಿ ವಿಠಲ ನಾಯಕ್, ಸೋಮು ಚೌಹಾನ್, ನಾಗಣ್ಣ ಲಾಡ್ಲಾಪುರ, ಬಸು ಸಾಹುಕಾರ್, ಈರಣ್ಣ ಸಾಹುಕಾರ್, ರಾಜು ಗೌಡ ಪೊಲೀಸ್ ಪಾಟೀಲ್, ಗಂಗಮ್ಮ ಪೂಜಾರಿ, ಗೋಪಾಲ್ ನಾಯಕ್, ಸಿದ್ದಲಿಂಗ ಸ್ವಾಮಿ, ಚಂದ್ರಶೇಖರ, ಶಾಂತಗೌಡ ಪಾಟೀಲ್, ನಾಗಯ್ಯ ಸ್ವಾಮಿ, ಅಸ್ಲಾಂ ಪಟೇಲ್, ಅಪ್ಪು ಸಾಹುಕಾರ್, ಅಶೋಕ್ ಇದ್ದರು.