ಕಾರ್ಯನಿರತ ಪತ್ರಕರ್ತರು ಯಾವುದೇ ಒತ್ತಡಗಳಿಗೆ ಮಣಿಯದೇ ಜನಪರ ಹಾಗೂ ನಿಷ್ಪಕ್ಷಪಾತ ಪತ್ರಿಕೋದ್ಯಮವನ್ನು ಮುಂದುವರಿಸಬೇಕು.
ಬಳ್ಳಾರಿ: ಕಾರ್ಯನಿರತ ಪತ್ರಕರ್ತರು ಯಾವುದೇ ಒತ್ತಡಗಳಿಗೆ ಮಣಿಯದೇ ಜನಪರ ಹಾಗೂ ನಿಷ್ಪಕ್ಷಪಾತ ಪತ್ರಿಕೋದ್ಯಮವನ್ನು ಮುಂದುವರಿಸಬೇಕು. ಸಂಘಟನೆ ಬಲವಾಗಿದ್ದರೆ ಮಾತ್ರ ಪತ್ರಕರ್ತರ ಹಕ್ಕುಗಳು, ಭದ್ರತೆ ಮತ್ತು ಗೌರವವನ್ನು ಕಾಯ್ದುಕೊಳ್ಳಲು ಸಾಧ್ಯವಿದ್ದು ನೂತನವಾಗಿ ಪದಗ್ರಹಣ ಮಾಡಿದ ಪದಾಧಿಕಾರಿಗಳು ಸಂಘಟನೆಯನ್ನು ಇನ್ನಷ್ಟು ಚುರುಕಾಗಿ ನಡೆಸಿ, ಜಿಲ್ಲೆಯ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.
ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳ, ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಇತ್ತೀಚೆಗೆ ಮಾಧ್ಯಮ ಹೆಸರಿನಲ್ಲಿ ಸುಳ್ಳು, ಜೊಳ್ಳು, ಪೊಳ್ಳು ಪತ್ರಕರ್ತರು ಸೃಷ್ಟಿಯಾಗುತ್ತಿದ್ದಾರೆ. ಅವರಿಂದಾಗಿಯೇ ಮಾಧ್ಯಮದ ಹೆಸರಿಗೆ ಬಸಿ ಬಳಿಯುವ ಕೃತ್ಯವಾಗುತ್ತಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳವರು ಸಹ ತಾವು ಪತ್ರಕರ್ತರು ಎಂದು ಹೇಳಿಕೊಂಡು ಪತ್ರಕರ್ತ ಸಮುದಾಯಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿದ್ದು, ಅಂತಹವರ ವಿರುದ್ಧ ಸೂಕ್ತ ಕ್ರಮಗಳಾಗಬೇಕು. ಸಾರ್ವಜನಿಕರೇ ಅಂಥವರನ್ನು ದೂರ ಇಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮಾತನಾಡಿ, ಪತ್ರಕರ್ತರ ಹಿತ ಕಾಯಲು ನಾನು ಬದ್ಧನಾಗಿದ್ದೇನೆ. ಅವರಿಗೆ ಬೇಕಾದ ಎಲ್ಲ ಸಹಕಾರಕ್ಕೆ ಸಿದ್ಧನಿದ್ದೇನೆ. ಪತ್ರಿಕಾಭವನ ಅಭಿವೃದ್ಧಿಗೆ ಬೇಕಾದ ನೆರವು ನೀಡುವೆ ಎಂದು ತಿಳಿಸಿದರು.ಇದೇ ವೇಳೆ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ₹2 ಲಕ್ಷ ನೀಡಿದರು. ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ನಾನು ಸಹ ₹2 ಲಕ್ಷ ನೀಡುವೆ. ಪತ್ರಕರ್ತರ ಕಲ್ಯಾಣಕ್ಕೆ ಬೇಕಾದ ಎಲ್ಲ ಸಹಕಾರಕ್ಕೆ ಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಪತ್ರಿಕೋದ್ಯಮದ ಆಶಯಗಳನ್ನು ರಕ್ಷಣೆ ಮಾಡಲು ನೈಜ ಪತ್ರಕರ್ತರು ಜವಾಬ್ದಾರಿ ವಹಿಸಬೇಕು ಎಂದು ಸಲಹೆ ನೀಡಿದರು.ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮೇಯರ್ ಪಿ.ಗಾದೆಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಎಸ್ಪಿ ಡಾ.ಶೋಭಾರಾಣಿ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಸಿಇಒ ಮೊಹಮ್ಮದ್ ಹಾರೀಸ್ ಸುಮೇರ್, ಕಾನಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಸಂಘದ ರಾಜ್ಯ ಕಾರ್ಯದರ್ಶಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸೋಮಶೇಖರ ಕೆರೆಗೋಡು, ಕಾನಿಪ ರಾಜ್ಯ ಸಮಿತಿ ಸದಸ್ಯ ಬಸವರಾಜ ಹರನಹಳ್ಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮಾಧ್ಯಮ ಕ್ಷೇತ್ರದಿಂದ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಎನ್.ಗಂಗಾಧರ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಸ್.ನಾಗರಾಜ್ ಹಾಗೂ ಸಿದ್ದು ಪೂಜಾರ್ ಅವರನ್ನು ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸನ್ಮಾನಿಸಿದರು. ಹಿರಿಯಪತ್ರಕರ್ತ ಮಂಜುನಾಥ ಕೆ.ಎಂ., ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ ಕುಲಕರ್ಣಿ, ವೆಂಕಟೇಶ ದೇಸಾಯಿ, ಹುಲುಗಪ್ಪ ಅವರು ಕಾರ್ಯಕ್ರಮ ನಿರ್ವಹಿಸಿದರು. ಶೃತಿ ಹಂದ್ಯಾಳು ಪ್ರಾರ್ಥನೆಗೀತೆ ಹಾಡಿದರು. ಪಾಲಿಕೆಯ ಸದಸ್ಯರು, ವಿವಿಧ ಪಕ್ಷಗಳು ಹಾಗೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಭಾಗಿಯಾಗಿದ್ದರು.