ಸಾರಾಂಶ
ಬ್ಯಾಡಗಿ: ಮಕ್ಕಳಿಗೆ ಬಾಲ್ಯದಿಂದಲೇ ಕಟ್ಟುನಿಟ್ಟಿನ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸದೇ ತಪ್ಪು ಮಾಡುತ್ತಿದ್ದೇವೆ. ಇದರ ಪರಿಣಾಮವಾಗಿ ಇಂದು ಪಾಶ್ಚಾತ್ಯ ಸಂಸ್ಕೃತಿಯ ದುಷ್ಪರಿಣಾಮಗಳು ನಮ್ಮ ಮಕ್ಕಳ ಮೇಲೆ ಬೀರುತ್ತಿವೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಖೇದ ವ್ಯಕ್ತಪಡಿಸಿದರು.
ಭಾನುವಾರ ಕೃಷ್ಣ ಜನ್ಮಾಷ್ಟಮಿ ನಿಮಿತ್ತ, ರೋಟರಿ ಕ್ಲಬ್ ಬ್ಯಾಡಗಿ, ಇನ್ನರ್‌ವೀಲ್ ಕ್ಲಬ್ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪಾಶ್ಚಿಮಾತ್ಯ ಸಂಸ್ಕೃತಿ ಸಂಪೂರ್ಣವಾಗಿ ಕೆಟ್ಟದ್ದಲ್ಲ, ಆದರೆ ನಮ್ಮ ಸಂಸ್ಕೃತಿಗೆ ವಿರುದ್ಧವಾದ ಆಚರಣೆ ಮತ್ತು ಪದ್ಧತಿಗಳು ಅದರಲ್ಲಿವೆ, ಭಾರತ ದೇಶವು ತನ್ನ ಪರಂಪರೆ ಮತ್ತು ಸಂಸ್ಕೃತಿಯಿಂದ ಶ್ರೀಮಂತವಾಗಿದೆ, ಆದರೆ ನಾವು ಅನೇಕರಲ್ಲಿ ಭಾರತೀಯ ಸಂಸ್ಕೃತಿಯ ಮರೆಯಾಗುತ್ತಿರುವುದನ್ನು ನೋಡುತ್ತಿದ್ದೇವೆ ಎಂದರು.ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿ ಪರಿಣಾಮ ನಮ್ಮ ಪದ್ಧತಿಗಳು, ಸಂಪ್ರದಾಯಗಳು, ಸಾಮಾಜಿಕ ಮತ್ತು ನೈತಿಕ ನಡವಳಿಕೆಗಳು ಸದಾಪರಸ್ಪರ ಸೌಹಾರ್ದಯುತವಾಗಿ ಬಾಳುವುದನ್ನು ಕಲಿಸಿದ ಭಾರತೀಯ ಸಂಸ್ಕೃತಿಗೆ ವ್ಯತಿರಿಕ್ತವಾಗಿವೆ. ಭಾರತದಂತ ಪುಣ್ಯಭೂಮಿಯಲ್ಲಿ ಜನಿಸುವುದೇ ಒಂದು ಭಾಗ್ಯ, ಇಲ್ಲಿನ ಆಚರಣೆ, ಸಂಪ್ರದಾಯ, ಆಚಾರ ವಿಚಾರಗಳು ಜಗತ್ತಿನ ಜನರನ್ನು ತನ್ನತ್ತ ಸೆಳೆಯುತ್ತಿದ್ದು, ಜಗತ್ತು ಮತ್ತೆ ಭಾರತದ ಸಂಸ್ಕೃತಿ ಕಡೆಗೆ ಮುಖ ಮಾಡುತ್ತಿದೆ. ಇದು ನಮ್ಮ ಪರಂಪರೆಗೆ ಇರುವ ಶಕ್ತಿಯಾಗಿದೆ ಎಂದರು.
ಬ್ರಹ್ಮಕುಮಾರಿ ಬಿ.ಕೆ. ಸುರೇಖಾ ಮಾತನಾಡಿ, ಭಗವದ್ಗೀತೆಯ ಮೂಲಕ ಶ್ರೀಕೃಷ್ಣ ಪರಮಾತ್ಮ ಜಗತ್ತಿಗೆ ಬದುಕಿನ ಸಾರವನ್ನು ತಿಳಿಸಿದ್ದಾನೆ. ಧರ್ಮ-ಅಧರ್ಮದ ನಡುವಿನ ಹೋರಾಟದ ನಡುವೆ ಧರ್ಮದ ಪರ ನಿಂತು ಜಗತ್ತಿಗೆ ಭಗವದ್ಗೀತೆಯಂತಹ ಮಹೋನ್ನತ ಗ್ರಂಥವನ್ನು ಶ್ರೀ ಕೃಷ್ಣ ಪರಮಾತ್ಮ ನೀಡಿದ್ದಾರೆ ಎಂದರು.ವೇಷ ಭೂಷಣ ಸ್ಪರ್ಧೆಯದಲ್ಲಿ ಸುಮಾರು 80ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಕಾರ‍್ಯಕ್ರಮ ಕಳೆಗಟ್ಟುವಂತೆ ಮಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಎಸ್.ಎಂ.ಬೂದಿಹಾಳಮಠ, ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಇನ್ನರವೀಲ್ ಸಂಸ್ಥೆ ಅಧ್ಯಕ್ಷೆ ಕವಿತಾ ಸೊಪ್ಪಿನಮಠ, ರೋಟರಿ ಕ್ಲಬ್ ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಖಜಾಂಚಿ ವೀರೇಶ ಬಾಗೋಜಿ, ಬಸವರಾಜ ಸುಂಕಾಪುರ, ಚಂದ್ರಶೇಖರ ಗಾಣಿಗೇರ, ಇನ್ನರ್ ವ್ಹೀಲ್ ಸದಸ್ಯರಾದ ಸುಮಾ ಸುಂಕಾಪುರ, ಲಕ್ಷ್ಮಿ ಉಪ್ಪಾರ, ಪ್ರತಿಭಾ ಮೇಲಗಿರಿ, ಪುಷ್ಪ ಇಂಡಿಮಠ, ಸಂಧ್ಯಾರಾಣಿ ದೇಶಪಾಂಡೆ, ಶೋಭಾ ನೋಟದ, ರೂಪಾ ಕಡೇಕೊಪ್ಪ, ಇನ್ನಿತರರು ಉಪಸ್ಥಿತರಿದ್ದರು.