ಶಿಕ್ಷಕ ವರ್ಗ ಪುಟ್ಟಣ್ಣಗೆ ತಕ್ಕ ಪಾಠ ಕಲಿಸಿ

| Published : Feb 12 2024, 01:31 AM IST

ಸಾರಾಂಶ

ಹಾರೋಹಳ್ಳಿ: ಕಾಲಕ್ಕೆ ತಕ್ಕಂತೆ ಬದಲಾಗುವ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಅಧಿಕಾರ ದಾಹಕ್ಕಾಗಿ ಪವಿತ್ರವಾದ ಶಿಕ್ಷಕರ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದಾರೆ ಎಂದು ರೇಷ್ಮೆ ಕೈಗಾರಿಕಾ ಉದ್ಯಮ ನಿಗಮದ ಮಾಜಿ ಅಧ್ಯಕ್ಷ ಗೌತಮ್‌ಗೌಡ ಟೀಕಿಸಿದರು.

ಹಾರೋಹಳ್ಳಿ: ಕಾಲಕ್ಕೆ ತಕ್ಕಂತೆ ಬದಲಾಗುವ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು ಅಧಿಕಾರ ದಾಹಕ್ಕಾಗಿ ಪವಿತ್ರವಾದ ಶಿಕ್ಷಕರ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದಾರೆ ಎಂದು ರೇಷ್ಮೆ ಕೈಗಾರಿಕಾ ಉದ್ಯಮ ನಿಗಮದ ಮಾಜಿ ಅಧ್ಯಕ್ಷ ಗೌತಮ್‌ಗೌಡ ಟೀಕಿಸಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಕ್ಷೇತ್ರದ ಚುನಾವಣೆ ಶಿಕ್ಷಕರ ಹಿತಕ್ಕಾಗಿ ನಡೆಯುತ್ತಿಲ್ಲ. ಬದಲಾಗಿ ಪುಟ್ಟಣ್ಣ ಅವರ ಹಿತಕ್ಕಾಗಿ ನಡೆಯುತ್ತಿದೆ. ಅಧಿಕಾರದ ಲಾಲಸೆಗೆ ಒಳಗಾಗಿರುವ ಅವರು ಕಾಲಕ್ಕೆ ತಕ್ಕಂತೆ ಪಕ್ಷ ಬಿಟ್ಟು ಇನ್ನೊಂದು ಪಕ್ಷ ಸೇರುತ್ತಿದ್ದಾರೆ. ಅವರ ಅಧಿಕಾರ ದಾಹದಿಂದಾಗಿ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಶಿಕ್ಷಕರು ಸಮಾಜ ಮತ್ತು ದೇಶ ಕಟ್ಟುವಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸುತ್ತಾರೆ. ವಿದ್ಯಾರ್ಥಿಗಳಿಗೆ ಆಚಾರ, ವಿಚಾರ, ಸಂಸ್ಕೃತಿ ಹೇಳಿಕೊಟ್ಟ ಸಮಾಜವನ್ನು ಕಟ್ಟಲಿಕ್ಕೆ ಕಾರಣರಾಗುತ್ತಾರೆ. ಅವರ ಪ್ರತಿನಿಧಿಯಾದ ಪುಟ್ಟಣ್ಣನವರು ಎಲ್ಲಿ ಅಧಿಕಾರ ಸಿಗುವುದೋ ಆ ಪಕ್ಷಕ್ಕೆ ಬದಲಾವಣೆ ಆಗುತ್ತಾರೆ. ಶಿಕ್ಷಕ ಮತದಾರರು ಪಕ್ಷಾಂತರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ನಾಲ್ಕು ಬಾರಿ ಗೆದ್ದಂತಹ ಪುಟ್ಟಣ್ಣರವರು ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗೆ ಪರಿಹಾರ ಕಲ್ಪಿಸಿಲ್ಲ, ಈ ಬಾರಿ ನಮ್ಮ ಮೈತ್ರಿ ಪಕ್ಷದಿಂದ ಎ.ಪಿ. ರಂಗನಾಥ್ ಅಭ್ಯರ್ಥಿಯಾಗಿ ಮಾಡಲಾಗಿದೆ. ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಉಸ್ತುವಾರಿಯಲ್ಲಿ ಚುನಾವಣೆ ನಡೆಯುತ್ತಿದೆ. ಇನ್ನು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರದ ಜನತೆ ಪುಟ್ಟಣ್ಣನವರನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಈ ಬಾರಿ ಶಿಕ್ಷಕರು ಅವರಿಗೆ ಖಂಡಿತ ಪಾಠ ಕಲಿಸಲಿದ್ದಾರೆ ಎಂದು ಗೌತಮ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಚಂದ್ರು ಮಾತನಾಡಿ, ಕೋವಿಡ್ ಸಮಯದಲ್ಲಿ ಶಿಕ್ಷಕರು ಪಟ್ಟಂತಹ ಕಷ್ಟಗಳು ಹೇರತೀರದಾಗಿದೆ. ಅಂತಹ ಸಂದರ್ಭದಲ್ಲಿ ಪುಟ್ಟಣ್ಣನವರು ಯಾವುದೇ ರೀತಿಯ ಸಹಾಯವಾಗಲಿ ಅಥವಾ ಯೋಜನೆಗಳನ್ನಾಗಲಿ ರೂಪಿಸದೆ ಶಿಕ್ಷಕರಿಗೆ ದ್ರೋಹ ಎಸಗಿದ್ದಾರೆ. ಇದೆಲ್ಲವೂ ಶಿಕ್ಷಕರಿಗೆ ಗೊತ್ತಿದ್ದು, ಪುಟ್ಟಣ್ಣನವರನ್ನು ಈ ಕ್ಷೇತ್ರದಿಂದ ಹೊರಹಾಕಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದರು.

ತನ್ನ ಸ್ವಾರ್ಥಕ್ಕಾಗಿ ಬಿಜೆಪಿ ಪಕ್ಷದಿಂದ ಅವರು ನಿಂತು ಗೆದ್ದು ಅಧಿಕಾರವಿದ್ದರೂ ಇನ್ನು ಹೆಚ್ಚಿನ ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಮತ್ತೆ ಇಲ್ಲಿ ನಿಂತಿರುವುದು ಹಾಸ್ಯಾಸ್ಪದ. ತಾಲೂಕಿನ ಶಿಕ್ಷಕ ವರ್ಗ ಇದನೆಲ್ಲಾ ಕಂಡು ಬೇಸತ್ತಿದ್ದಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಎ.ಪಿ. ರಂಗ್‌ನಾಥರನ್ನು ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಮನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುರಳೀಧರ್, ಮುಖಂಡರಾದ ಮಹದೇವ್, ರಾಮು, ಪಡುವಣಗೆರೆ ಸಿದ್ದರಾಜು, ಚಂದ್ರು, ನಾಗರಾಜು, ಚಂದ್ರಶೇಖರ್, ಶೇಷಾದ್ರಿ, ಬಾಲಾಜಿಸಿಂಗ್, ಪಿಚ್ಚನಕೆರೆ ಜಗದೀಶ್, ಪ್ರದೀಪ್, ಕಾರ್ತಿಕ್, ವೆಂಕಟೇಶ್ ಉಪಸ್ಥಿತರಿದ್ದರು.

11ಕೆಆರ್ ಎಂಎನ್ 4.ಜೆಪಿಜಿ

ರೇಷ್ಮೆ ಕೈಗಾರಿಕಾ ಉದ್ಯಮ ನಿಗಮದ ಮಾಜಿ ಅಧ್ಯಕ್ಷ ಗೌತಮ್‌ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.