ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಬಹಳ ಮಹತ್ವವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಕೇವಲ ಹೆಚ್ಚು ಅಂಕಗಳಿಸುವ ಶಿಕ್ಷಣ, ಒತ್ತಡದ ಬದುಕಿನಲ್ಲಿ ಸಾಧನೆ ಬಯಸುತ್ತಿದ್ದೇವೆ. ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಬೇಕಾದ ಇಂದಿನ ಅಗತ್ಯವಾಗಿದೆ ಎಂದು ಖ್ಯಾತ ಚಿತ್ರನಟ ರವಿಚಂದ್ರನ್ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಬಹಳ ಮಹತ್ವವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಕೇವಲ ಹೆಚ್ಚು ಅಂಕಗಳಿಸುವ ಶಿಕ್ಷಣ, ಒತ್ತಡದ ಬದುಕಿನಲ್ಲಿ ಸಾಧನೆ ಬಯಸುತ್ತಿದ್ದೇವೆ. ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಬೇಕಾದ ಇಂದಿನ ಅಗತ್ಯವಾಗಿದೆ ಎಂದು ಖ್ಯಾತ ಚಿತ್ರನಟ ರವಿಚಂದ್ರನ್ ಹೇಳಿದರು. ಪಟ್ಟಣದ ಹೊರವಲಯದಲ್ಲಿ ಎಸ್ಎಂ ನಾರಗೊಂಡ ಶಿಕ್ಷಣ ಸಂಸ್ಥೆಯ ಕಟ್ಟಡ ಲೋಕಾರ್ಪಣೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಥಣಿಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಎಸ್.ಎಂ.ನಾರಗೊಂಡ ಇಂಟರ್‌ನ್ಯಾಶನಲ್‌ ಸ್ಕೂಲ್‌ ಮಕ್ಕಳಿಗೆ ಸಂಸ್ಕಾರದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರ ಭವಿಷ್ಯ ಉಜ್ವಲಗೊಳಿಸುವಂತಾಗಲಿ ಎಂದು ಶುಭ ಹಾರೈಸಿದರು.ಮಕ್ಕಳನ್ನು ಅವರ ಬಯಕೆಯ ಹಾಗೂ ಆಸಕ್ತಿದಾಯಕ ಕ್ಷೇತ್ರದಲ್ಲಿ ಕಲಿಯಲು ಬಿಡಬೇಕು. ಶಿಕ್ಷಣ ಕಲಿಕೆಯಲ್ಲಿ ಬಲವಂತ ಮಾಡಬಾರದು. ಒತ್ತಡದಿಂದ ಮನುಷ್ಯ ಏನನ್ನೂ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಬರೀ ಹೆಚ್ಚು ಅಂಕ ಗಳಿಸುವುದೇ ಸಾಧನೆಯಲ್ಲ. ಮಕ್ಕಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವ ಶಿಕ್ಷಣ ನಮಗೆ ಬೇಕಾಗಿದೆ. ಮಕ್ಕಳ ಸಾಧನೆಗೆ ಪಾಲಕರು, ಶಿಕ್ಷಕರು ಪ್ರೋತ್ಸಾಹ ನೀಡಬೇಕು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಶಿಕ್ಷಣದಿಂದ ಮಾತ್ರ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ನನಗೆ ಚಿಕ್ಕಂದಿನಿಂದಲೇ ಸಿನೆಮಾ ಕ್ಷೇತ್ರ ಸೆಳೆಯಿತು. ಕೌಟುಂಬಿಕ ಚಿತ್ರಗಳನ್ನು, ಸದಬಿರುಚಿಯ ಚಿತ್ರಗಳನ್ನು ಮಾಡುವ ಮೂಲಕ ಕನ್ನಡ ಜನತೆಯ ಮನದಲ್ಲಿ ಸ್ಥಾನ ಗಳಿಸಲು ಸಾಧ್ಯವಾಯಿತು. ಸಿನೆಮಾ ಕ್ಷೇತ್ರ ನನ್ನ ಕೈ ಹಿಡಿಯಿತು. ಕರ್ನಾಟಕದ ಜನರ ಪ್ರೀತಿ ಅಭಿಮಾನದಿಂದ ನಾನು ಜನಪ್ರಿಯ ನಟನಾಗಿ ಬೆಳೆದಿದ್ದೇನೆ. ಆದ್ದರಿಂದ ಕರುನಾಡ ಜನತೆಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪ್ರಾರಂಭಿಕ ಹಂತದಲ್ಲಿ ಪ್ರೇಮಲೋಕ ಚಿತ್ರವು ನನಗೆ ಬಹಳಷ್ಟು ಹೆಸರು ಹಾಗೂ ಜನಪ್ರಿಯತೆಯನ್ನು ತಂದುಕೊಟ್ಟಿತು. ಆದಿ ಮಾದರಿಯಲ್ಲಿ ಇಂದಿನ ಹೊಸ ತಂತ್ರಜ್ಞಾನ ಬಳಸಿಕೊಂಡು ವಿನೂತನ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದೇನೆ. ನಿಮ್ಮ ಪ್ರೀತಿ ಅಭಿಮಾನ ಪ್ರೋತ್ಸಾಹ ಯಾವತ್ತು ಇರಲಿ ಎಂದರು. ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವ ಸಂಕಲ್ಪ ಹೊಂದಿರುವ ವಿವೇಕ ನಾರಗೊಂಡ ಈ ಶಿಕ್ಷಣ ಸಂಸ್ಥೆಯನ್ನ ಹುಟ್ಟು ಹಾಕಿದ್ದಾರೆ. ಈಗಾಗಲೇ ಸಮೀಪದ ಹಾರೂಗೇರಿ ಗ್ರಾಮದಲ್ಲಿ ಅವರ ಶಾಲೆಯು ಉತ್ತಮವಾಗಿ ಮುನ್ನಡೆಯುತ್ತಿದ್ದು, ಅಲ್ಲಿನ ಮಕ್ಕಳ ಉತ್ತಮ ಫಲಿತಾಂಶದ ಮೂಲಕ ಶಾಲೆಯ ಹೆಸರನ್ನು ನಾಡಿನಲ್ಲಿ ಬೆಳೆಸಿದ್ದಾರೆ. ಈಗ ಅಥಣಿಯಲ್ಲಿ ಕೂಡ ಅವರು ನೂತನವಾಗಿ ಶಾಲೆಯನ್ನು ಪ್ರಾರಂಭಿಸುತ್ತಿದ್ದು ನಮಗೆ ಸಂತಸ ತಂದಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ನುರಿತ ಹಾಗೂ ಅನುಭವಿ ಶಿಕ್ಷಕರನ್ನ ನೇಮಿಸಿಕೊಳ್ಳುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಲ್ಲ ಸಾಧಕರನ್ನು ರೂಪಿಸಬೇಕು. ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ, ದೇಶಾಭಿಮಾನವನ್ನು ಮಕ್ಕಳಲ್ಲಿ ಬಿತ್ತಬೇಕು ಎಂದು ಕಿವಿಮಾತು ಹೇಳಿದರು.ಸಮಾರಂಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿವೇಕ ನಾರಗೊಂಡ ಮಾತನಾಡಿ, ನಾನು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಈ ಸಂಸ್ಥೆಯನ್ನ ಕಟ್ಟಿದ್ದೇವೆ. ನಮ್ಮ ತಾಲೂಕಿನ ಮಕ್ಕಳು ಬೇರೆ ಬೇರೆ ಜಿಲ್ಲೆ ಮತ್ತು ತಾಲೂಕುಗಳಿಗೆ ಹೋಗಿ ಶಿಕ್ಷಣ ಪಡೆದು ಸಾಧನೆ ಮಾಡುತ್ತಿದ್ದಾರೆ. ಅಂತಹ ಶಿಕ್ಷಣವನ್ನು ನಮ್ಮ ಸಂಸ್ಥೆಯಲ್ಲಿ ನೀಡುವುದರಿಂದ ನಮ್ಮ ಗ್ರಾಮೀಣ ಪ್ರತಿಭೆಳಿಗೆ ಮತ್ತು ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಕಲಿತ ಮಕ್ಕಳ ಭವಿಷ್ಯ ಉಜ್ಬಲಗೊಂಡರೇ ಅದರ ಸಾರ್ಥಕತೆ ನಮ್ಮ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ. ಆದ್ದರಿಂದ ಅಥಣಿ ತಾಲೂಕಿನ ಹಾಗೂ ಸುತ್ತ-ಮುತ್ತಲಿನ ಜನತೆ ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸುವುದರ ಜೊತೆಗೆ ಸಂಸ್ಥೆಯ ಪ್ರಗತಿಗೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಶೇಗುಣಸಿಯ ಡಾ.ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶ್ರೀಶೈಲ ನಾರಗೊಂಡ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಯುವ ಮುಖಂಡ ಚಿದಾನಂದ ಸವದಿ, ಡಾ.ಮಹಾಂತೇಶ ಜಾಲಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಪ್ರಾಚಾರ್ಯ ಇ.ಜಿ.ದಿಕ್ಷೀತ, ಪ್ರಶಾಂತ ಎಲ್.ಎಚ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಜನಮನ ಸೆಳೆದ ರಸಮಂಜರಿ

ಎಸ್.ಎಂ.ನಾರಗೊಂಡ ಶಿಕ್ಷಣ ಸಂಸ್ಥೆಯ ಕಟ್ಟಡ ಲೋಕಾರ್ಪಣೆ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ಗಾಯಕರಾದ ಸುನೀಲ ಗಜಗೊಂಡ, ದರ್ಶನ ಮೆಳವಂಕಿ, ಸುರಕ್ಷಾದಾಸ, ಪ್ರಜ್ಞಾ ಮರಾಠೆ, ಐಶ್ವರ್ಯ ಗಂಗೂ ಅವರ ಕಂಠಸಿರಿಯಿಂದ ಮೂಡಿ ಬಂದ ಸಂಗೀತ ಕಾರ್ಯಕ್ರಮ ಸಬೀಕರನ್ನು ರಂಜಿಸಿತು.