ವಿದ್ಯಾರ್ಥಿಗಳಿಗೆ ದಂಡನೆಯಿಂದ ಪಾಠ ಕಲಿಸಿದರೆ ಪ್ರಯೋಜನ ಆಗಲಾರದು. ಬದಲಾಗಿ ಶಿಕ್ಷಕರು ತಾಳ್ಮೆಯ ನಡೆ, ನುಡಿ ಹಾಗೂ ಪ್ರೀತಿ- ವಿಶ್ವಾಸದಿಂದ ಮಕ್ಕಳಿಗೆ ಏನನ್ನಾದರೂ ಕಲಿಸಿದರೆ ಪ್ರಯೋಜನ ಆಗಬಲ್ಲದು ಎಂದು ದಾವಣಗೆರೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ರಾಮಪ್ಪ ಹೇಳಿದ್ದಾರೆ.

- ಸಾಧನಾ ಪಬ್ಲಿಕ್ ಸ್ಕೂಲ್‌ ಬೆಳ್ಳಿಹಬ್ಬ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ವಿದ್ಯಾರ್ಥಿಗಳಿಗೆ ದಂಡನೆಯಿಂದ ಪಾಠ ಕಲಿಸಿದರೆ ಪ್ರಯೋಜನ ಆಗಲಾರದು. ಬದಲಾಗಿ ಶಿಕ್ಷಕರು ತಾಳ್ಮೆಯ ನಡೆ, ನುಡಿ ಹಾಗೂ ಪ್ರೀತಿ- ವಿಶ್ವಾಸದಿಂದ ಮಕ್ಕಳಿಗೆ ಏನನ್ನಾದರೂ ಕಲಿಸಿದರೆ ಪ್ರಯೋಜನ ಆಗಬಲ್ಲದು ಎಂದು ದಾವಣಗೆರೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ರಾಮಪ್ಪ ಹೇಳಿದರು.

ಶನಿವಾರ ರಾತ್ರಿ ಪಟ್ಟಣದ ಸಾಧನಾ ಪಬ್ಲಿಕ್ ಸ್ಕೂಲ್‌ನ 25ನೇ ವರ್ಷದ ಬೆಳ್ಳಿಹಬ್ಬ, ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಶಿಕ್ಷಣ ಸಂಸ್ಥೆ 25 ವರ್ಷಗಳ ಕಾಲ ನಡೆದುಬಂದಿದ್ದರೆ ಅದು ಗುಣಾತ್ಮಕ ಶಿಕ್ಷಣ ಧ್ಯೇಯ ಮತ್ತು ಪೋಷಕರು ಆ ಸಂಸ್ಥೆ ಬಗ್ಗೆ ಹೊಂದಿರುವ ಪ್ರೀತಿ- ಗೌರವಗಳಿಂದ ಮಾತ್ರ ಸಾಧ್ಯವಾಗಿರುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆ ಸಂಸ್ಥೆಯಲ್ಲಿ ಕಾಲಕಾಲಕ್ಕೆ ನಡೆಯುವ ಸಭೆ, ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳೂ ಬಹುಮುಖ್ಯ ಕಾರಣಗಳಾಗುತ್ತವೆ. ಶಿಕ್ಷಣ ಇಲಾಖೆ ನೀಡಿದ ಬಹುತೇಕ ಎಲ್ಲ ಕಾರ್ಯಕ್ರಮಗಳನ್ನು ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ. ಇದು ಈ ಸಂಸ್ಥೆ ನಡೆದುಬಂದ ದಾರಿ ತೋರಿಸುತ್ತದೆ ಎಂದರು.

ಧನಾತ್ಮಕ ಚಿಂತನೆ ಮುಖ್ಯ:

ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿಗಳು, ವೈದ್ಯರೂ ಆದ ಡಾ.ಹನುಮಂತಪ್ಪ ಮಾತನಾಡಿ, ಧನಾತ್ಮಕ ಬೋಧನೆಯಿಂದ ಮಕ್ಕಳ ಮನಸ್ಸು ಸ್ಥಿಮಿತದಲ್ಲಿ ಇರುತ್ತದೆ. ಅಂತಹ ವಿದ್ಯಾರ್ಥಿಗಳು ಪ್ರೇರೇಪಿತರಾಗುತ್ತಾರೆ. ಗುರುಭಕ್ತಿ, ದೇಶಭಕ್ತಿ ಬೆಳೆಸುವಂತಹ ಒಳ್ಳೇಯ ನಾಗರೀಕನನ್ನು ಕೊಡಬೇಕಾಗಿರುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದು ಹೇಳಿದರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿಜಯ್ ಸೊಲ್ಲಾಪುರ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಇರುತ್ತದೆ ಎಂದರು.

25ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಏರ್ಪಡಿಸಿದ್ದ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆಯಲ್ಲಿ ಹಾಗೂ ಪೋಷಕರ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಎಲ್‌ಕೆಜಿ ವತಿಯಿಂದ 7ನೇ ತರಗತಿವರೆಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಟ್ರೋಫಿ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು. ಅನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಅಧ್ಯಕ್ಷತೆಯನ್ನು ಸಂಸ್ಥಾಪಕ ಕಾರ್ಯದರ್ಶಿ ಎನ್.ಕೆ. ಆಂಜನೇಯ ವಹಿಸಿದ್ದರು. ಮುಖ್ಯ ಶಿಕ್ಷಕಿ ಶೃತಿಕುಮಾರಿ, ಶಿಕ್ಷಕರಾದ ಎಸ್.ಆರ್. ಹೇಮಾ, ರೇಖಾ, ಸಂಗೀತಾ, ಆಶಾ, ಸುಮಯ್ಯ ಬೇಗಂ, ಚನ್ನೇಶ್, ಶಕುಂತಲಾ ಉಪಸ್ಥಿತರಿದ್ದರು.

- - -

-20ಎಚ್.ಎಲ್.ಐ2:

ಹೊನ್ನಾಳಿ ಸಾಧನಾ ಪಬ್ಲಿಕ್ ಸ್ಕೂಲ್‌ 25ನೇ ವರ್ಷದ ಬೆಳ್ಳಿಹಬ್ಬ, ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಡಿ.ರಾಮಪ್ಪ ಉದ್ಘಾಟಿಸಿದರು. ಡಾ.ಹನುಮಂತಪ್ಪ ಮತ್ತಿತರ ಗಣ್ಯರು ಇದ್ದರು.