ಸಾರ್ವಜನಿಕರು ಅಥವಾ ಕೂಲಿ ಕಾರ್ಮಿಕರು ನರೇಗಾ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿದರೆ ಅಥವಾ ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ 24 ಗಂಟೆಗಳ ಒಳಗೆ ಜಾಬ್ ಕಾರ್ಡ್ ವಿತರಿಸಬೇಕು. ಈ ಕುರಿತಾದ ದೂರುಗಳು ಸಾರ್ವಜನಿಕರಿಂದ ಬರಬಾರದು ಎಂದು ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳ್ಳಾರಿ: ಸಾರ್ವಜನಿಕರು ಅಥವಾ ಕೂಲಿ ಕಾರ್ಮಿಕರು ನರೇಗಾ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿದರೆ ಅಥವಾ ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ 24 ಗಂಟೆಗಳ ಒಳಗೆ ಜಾಬ್ ಕಾರ್ಡ್ ವಿತರಿಸಬೇಕು. ಈ ಕುರಿತಾದ ದೂರುಗಳು ಸಾರ್ವಜನಿಕರಿಂದ ಬರಬಾರದು ಎಂದು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯತ್ ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕೃಷಿ ಚಟುವಟಿಕೆ ಕ್ಷೀಣಿಸಿರುವುದರಿಂದ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವ ಸಾಧ್ಯತೆಯಿದೆ. ಗ್ರಾಮೀಣ ಭಾಗದಲ್ಲೇ ಪ್ರತಿಯೊಬ್ಬ ಅರ್ಹ ಕೂಲಿಕಾರನಿಗೆ ‘ವಿ ಬಿ - ಜಿ ರಾಮ್ ಜಿ’ ಯೋಜನೆಯಡಿ ಕೆಲಸ ನೀಡುವ ಮೂಲಕ ವಲಸೆಯನ್ನು ತಡೆಯಬೇಕು. ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ''''''''ವಿಕಸಿತ್ ಭಾರತ್ - ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ)'''''''' ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ನಿರಂತರ ನಿಗಾ ವಹಿಸಬೇಕು. ಬಡ ಕಾರ್ಮಿಕರಿಗೆ ಗ್ರಾಮ ಮಟ್ಟದಲ್ಲೇ ಕೂಲಿ ಉದ್ಯೋಗ ಒದಗಿಸಿ, ಅವರ ಬ್ಯಾಂಕ್ ಖಾತೆಗಳಿಗೆ ನಿಯಮಿತವಾಗಿ ಕೂಲಿ ಹಣ ಜಮೆಯಾಗುವಂತೆ ನೋಡಿಕೊಳ್ಳಬೇಕು. ಒಮ್ಮೆ ಕಾರ್ಮಿಕರ ಖಾತೆಗೆ ಹಣ ನೇರವಾಗಿ ಜಮೆಯಾದರೆ, ಯೋಜನೆಯ ಬಗ್ಗೆ ಅವರಲ್ಲಿ ನಂಬಿಕೆ ಮತ್ತು ಆಸಕ್ತಿ ಹೆಚ್ಚಾಗುತ್ತದೆ. ಹಾಗಾಗಿ, ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿ, ಯಾವುದೇ ರೀತಿಯ ಲೋಪದೋಷಗಳಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 1.84 ಲಕ್ಷ ಸಕ್ರಿಯ ಜಾಬ್ ಕಾರ್ಡ್‌ಗಳಿದ್ದು, 4.60 ಲಕ್ಷ ಕಾರ್ಮಿಕರಿದ್ದಾರೆ. ಇದರಲ್ಲಿ ಸುಮಾರು 1.30 ಲಕ್ಷ ಜಾಬ್ ಕಾರ್ಡ್‌ಗಳಿಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆದಷ್ಟು ಬೇಗ ಬಾಕಿ ಇರುವ ಪ್ರಕ್ರಿಯೆ ಮುಗಿಸುವಂತೆ ತಿಳಿಸಿದರಲ್ಲದೆ, ‘ವಿ ಬಿ - ಜಿ ರಾಮ್ ಜಿ’ ಯೋಜನೆಗೆ ಅನುದಾನದ ಕೊರತೆಯಿಲ್ಲ. ಈಗಾಗಲೇ ಜಿಲ್ಲಾ ಪಂಚಾಯಿತಿಗಳಿಗೆ ₹ ಸಾವಿರ ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ. ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ₹1,200 ಕೋಟಿ ಹಾಗೂ ಕೇಂದ್ರ ಸರ್ಕಾರ ₹1,700 ಕೋಟಿ ಅನುದಾನ ಒದಗಿಸಿದೆ. ಯೋಜನೆ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಕೇವಲ ದಾಖಲೆಗಳಲ್ಲಿ ಕೆಲಸ ತೋರಿಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮೇಯರ್ ಪಿ. ಗಾದೆಪ್ಪ, ಕ.ಪಂ.ರಾ. ಆಯುಕ್ತಾಲಯದ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್, ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿನೋದ್ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ತಾಪಂ ಇಒಗಳು, ಪಿಡಿಒಗಳು ಹಾಗೂ ಇತರರು ಉಪಸ್ಥಿತರಿದ್ದರು.