ವಿದ್ಯಾರ್ಥಿ ಮೇಲೆ ಶಿಕ್ಷಕಿ ಹಲ್ಲೆ, ಶಾಲೆಗೆ ಬೀಗ ಜಡಿದು ಪ್ರತಿಭಟನೆ

| Published : Jul 04 2024, 01:03 AM IST

ಸಾರಾಂಶ

ಅಂಗನವಾಡಿಗಿಂತಲೂ ಕಡಿಮೆ ವಿದ್ಯಾರ್ಥಿಗಳು ಇಲ್ಲಿ ಪ್ರತಿ ತರಗತಿಯಲ್ಲಿದ್ದಾರೆ

ಗಜೇಂದ್ರಗಡ: ಪಟ್ಟಣದ ಕಾಲಕಾಲೇಶ್ವರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೨ನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕಿಯೋರ್ವಳು ಹಲ್ಲೆ ನಡೆಸಿದ್ದಾಳೆ ಎಂದು ಗ್ರಾಮಸ್ಥರು ಮತ್ತು ಪಾಲಕರು ಪ್ರತಿಭಟಿಸಿ ಶಾಲೆಗೆ ಕೆಲ ಕಾಲ ಬೀಗ ಹಾಕಿದ ಘಟನೆ ಬುಧವಾರ ನಡೆದಿದೆ.

2ನೇ ತರಗತಿ ವಿದ್ಯಾರ್ಥಿ ವಿಜಯ ಪರಸಪ್ಪ ಕನ್ಯಾಳ (8) ಮೇಲೆ ಶಿಕ್ಷಕಿ ಆರ್‌.ವಿ. ಬದಾಮಿ ಮಂಗಳವಾರ ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಿ ಪಾಲಕರು ಶಾಲೆಯ ಪ್ರಧಾನ ಗುರುಗಳಿಗೆ ಮಾಹಿತಿ ನೀಡಿದರಲ್ಲದೇ, ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಶಿಕ್ಷಕಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದರು.

ಈ ಶಾಲೆಯಲ್ಲಿ ಶೈಕ್ಷಣಿಕ ವಾತಾವರಣ ತೀವ್ರ ಹದಗೆಟ್ಟಿದೆ. ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಅಂಗನವಾಡಿಗಿಂತಲೂ ಕಡಿಮೆ ವಿದ್ಯಾರ್ಥಿಗಳು ಇಲ್ಲಿ ಪ್ರತಿ ತರಗತಿಯಲ್ಲಿದ್ದಾರೆ. ಶಿಕ್ಷಣದ ಗುಣಮಟ್ಟವೂ ಕುಸಿಯುತ್ತಿದೆ. ಈ ಕುರಿತು ಶಾಲೆಯ ಮುಖ್ಯ ಗುರು ಹಾಗೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಪಾಲಕರು, ಊರಿನ ಜನರು ಆರೋಪಿಸಿದರು.

ಶಿಕ್ಷಕಿ ಬದಾಮಿ ಅವರ ಇಂತಹ ವರ್ತನೆ ಇದೇ ಮೊದಲಲ್ಲ. ಈ ಬಗ್ಗೆ ಮುಖ್ಯ ಗುರು ಜಿ.ಎಚ್‌. ಕಠಾರೆ ಅವರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಶಾಲೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಹೊರತು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಬೀಗ ಹಾಕಿ ಪ್ರತಿಭಟಿಸಿದರು.

ಘಟನಾ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಆರ್‌ಪಿ ಶ್ರೀಧರ ಯಂಕಂಚಿ, ಪ್ರಕರಣದ ಗಂಭೀರತೆಯನ್ನು ಅರಿತು ಶಿಕ್ಷಕಿಯನ್ನು ಬೇರೆಡೆ ಕಳುಹಿಸಿ, ಅವರ ಸ್ಥಾನಕ್ಕೆ ಭೈರಾಪುರ ಶಾಲೆಯ ಶಿಕ್ಷಕರನ್ನು ನೇಮಿಸುವುದಾಗಿ ತಿಳಿಸಿದರು. ಘಟನೆಯ ಸಮಗ್ರ ವರದಿಯನ್ನು ಮೇಲಧಿಕಾರಿಗಳಿಗೆ ನೀಡುವುದಾಗಿ ಭರವಸೆ ನೀಡಿದರು.

ಬಳಿಕ ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಪಾಲಕರ ಜೊತೆ ಚರ್ಚಿಸಿ ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳೂ ಸಹ ಆಗಮಿಸಿ ಮಾಹಿತಿ ಪಡೆದಿದ್ದಾರೆ.

ಶಿಕ್ಷಕಿಯ ಹಲ್ಲೆಯಿಂದ ಘಾಸಿಗೊಂಡ ಮಗುವಿಗೆ ರಾತ್ರಿ ಜ್ವರ ಬಂದಿದೆ. ಆಗ ಏನಾಗಿದೆ ಎಂದು ಕೇಳಿದಾಗ, ಟೀಚರ್‌ ಬಡಿದಿದ್ದಾರೆ ಎಂದು ಮಗು ಹೇಳಿದೆ. ಮಗುವಿನ ಗಾಯವಾಗಿದೆ. ನಾವು ಶಿಕ್ಷಕರ ಮೇಲೆ ನಂಬಿಕೆಯಿಂದ ಅವರನ್ನು ಶಾಲೆಗೆ ಬಿಟ್ಟು ಹೊಲ, ಮನೆ ಕೆಲಸಕ್ಕೆ ಹೋಗುತ್ತೇವೆ. ಚಿಕ್ಕ ಮಕ್ಕಳನ್ನು ಈ ರೀತಿ ಶಿಕ್ಷಿಸುವುದರಿಂದ ಏನು ಪ್ರಯೋಜನ ಎಂದು ಪಾಲಕರು ಅಧಿಕಾರಿಗಳ ಬಳಿ ಗೋಳಾಡಿದರು.