ಹೂವಿನಹಡಗಲಿ: ತಾಲೂಕಿನ ಮಹಾಜನದಹಳ್ಳಿಯ ತಿಗರಿ ಕರಿಯಪ್ಪನವರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಗ್ರಾಮಸ್ಥರು ಶಿಕ್ಷಕನನ್ನು ತರಾಟೆಗೈದು, ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ಶಾಲೆಯಲ್ಲಿ 8ನೇ ತರಗತಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಶಾಲೆಯ ಗಣಿತ ಶಿಕ್ಷಕ ಹನುಮಂತಪ್ಪ (54), ಸಮವಸ್ತ್ರ ಮಡಚುವ ನೆಪದಲ್ಲಿ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ‌ ನೀಡಿದ್ದಾರೆ. ಕೂಡಲೇ ವಿದ್ಯಾರ್ಥಿನಿ ಪಾಲಕರ ಬಳಿ ತೆರಳಿ ಶಿಕ್ಷಕನ ಅನುಚಿತ ವರ್ತನೆ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿಯ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಯ ಬಳಿ ಜಮಾಯಿಸಿ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಕೆಲ ಗ್ರಾಮಸ್ಥರು ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಶಿಕ್ಷಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಸದ್ಯ ಶಿಕ್ಷಕ ಹನುಮಂತಪ್ಪ ತಾಲೂಕಿನ‌ ಇಟ್ಟಿಗಿ ಗ್ರಾಮದಲ್ಲಿ ವಾಸಿಸುತ್ತಿದ್ದು, ನಿತ್ಯ ಶಾಲೆಗೆ ಇಲ್ಲಿಂದಲೇ ತೆರಳುತ್ತಿದ್ದರು. ಈ ಕುರಿತು ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕ್ರಮಕ್ಕೆ ಆಗ್ರಹ: ಈ ಘಟನೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಶಿಕ್ಷಕ ಹನುಮಂತಪ್ಪ ಮೂಲತಃ ಬಳ್ಳಾರಿ ತಾಲೂಕಿನ ಸಂಜೀವರಾಯಕೋಟೆ ಗ್ರಾಮದವರು. ಬಳ್ಳಾರಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ‌ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.