ಕನ್ನಡಪ್ರಭ ವಾರ್ತೆ ಸಿದ್ದಾಪುರ

ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ರೀಟಾ ಡಿಸೋಜಾ ಜನಗಣತಿ ಮನೆಪಟ್ಟಿ ಕಾರ್ಯ ಮಾಡುತ್ತಿರುವಾಗ ಬಿದ್ದು ಕೈ ಮುರಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಶಿಕ್ಷಕಿಗೆ ತುರ್ತು ವೈದ್ಯಕೀಯ ಚಿಕಿತ್ಸೆಗೆ ಹಣ ಮಂಜೂರಿ ಮಾಡುವಂತೆ ತಾಲೂಕಿನ ಶಿಕ್ಷಕರ ವೇದಿಕೆ ಆಗ್ರಹಿಸಿದ್ದು, ಈ ಕುರಿತು ಶಾಸಕರಿಗೆ, ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ, ತಹಶೀಲ್ದಾರರಿಗೆ, ಪಪಂ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಏ.೨೪ರಂದು ಶಿಕ್ಷಕಿ ರೀಟಾ ಪಪಂ ವ್ಯಾಪ್ತಿಯಲ್ಲಿ ಗಣತಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ಎಡಗೈ ಮೂಳೆ ಮುರಿದಿದೆ. ಅವರಿಗೆ ತಾಲೂಕಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಾದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಾವುದೇ ಸುಧಾರಣೆ ಕಂಡು ಬರದ ಹಿನ್ನೆಲೆ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಸೇರಿಸಲಾಗಿದೆ. ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಖರ್ಚು ತಗುಲಿದೆ. ಕೈಮುರಿತದ ಗಾಯಕ್ಕೆ ಕೀವು ತುಂಬಿ ಗುಣವಾಗದ ಹಿನ್ನೆಲೆ ಶಸ್ತ್ರಚಿಕಿತ್ಸೆಗೆ ಸಮಯಾವಕಾಶ ಅಗತ್ಯವಿದೆ. ಚಿಕಿತ್ಸೆಗೆ ಇನ್ನೂ ₹೪ ಲಕ್ಷಕ್ಕೂ ಹೆಚ್ಚಿನ ಮೊತ್ತ ತಗುಲಬಹುದೆಂಬ ವಿಷಯವನ್ನು ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ. ಇದೀಗ ಇವರಿಗೆ ಕೈಮುರಿದಿದ್ದಲ್ಲದೇ ನ್ಯುಮೋನಿಯಾದಂತಹ ಕಾಯಿಲೆಯೂ ತಗುಲಿಕೊಂಡಿದೆ. ಇವರು ಸರ್ಕಾರಿ ಕರ್ತವ್ಯ ನಿರ್ವಹಿಸುವಾಗಲೇ ಅವಘಡ ಸಂಭವಿಸಿದ್ದರಿಂದ ಮಾನವೀಯ ನೆಲೆಗಟ್ಟಿನಲ್ಲಿ ಈ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿ ಶಸ್ತ್ರಚಿಕಿತ್ಸೆ ಹಾಗೂ ದೈನಂದಿನ ವೈದ್ಯಕೀಯ ವೆಚ್ಚಕ್ಕೆ ಹಣ ನೀಡುವಂತೆ ಮಾಡಬೇಕು ಎಂದು ಶಿಕ್ಷಕರ ವೇದಿಕೆ ತಾನು ನೀಡಿರುವ ಮನವಿಗಳಲ್ಲಿ ಉಲ್ಲೇಖಿಸಿದೆ. ಮನವಿಯನ್ನು ಶಿಕ್ಷಕರ ವೇದಿಕೆಯ ಪ್ರಮುಖರಾದ ಎಂ.ಕೆ. ನಾಯ್ಕ, ಜಿ.ಜಿ. ಹೆಗಡೆ, ಶ್ರೀಕಾಂತ ನಾಯ್ಕ, ಗಣೇಶ ಪೂಜಾರಿ, ಮಹೇಶ ಶೇಟ್, ಮಂಜುನಾಥ ನಾಯ್ಕ ಇತರರು ನೀಡಿದ್ದಾರೆ. ಶಿಕ್ಷಕಿ ರೀಟಾ ಡಿಸೋಜಾ ನಿವೃತ್ತಿಯ ಅಂಚಿನಲ್ಲಿದ್ದು ತಾಲೂಕಿನಲ್ಲಿ ಉತ್ತಮ ಶಿಕ್ಷಕಿಯೆಂದು ಹೆಸರು ಪಡೆದಿದ್ದಾರೆ. ಇವರಿಗೆ ಸಮಾಜಮುಖಿ ಸೇವಾ ಸಂಸ್ಥೆ ಕರ್ನಾಟಕ ಹಾಗೂ ಗೋವಾ ಕನ್ನಡಿಗರ ಸಂಘದಿಂದ ರಾಷ್ಟ್ರೀಯ ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕರ್ನಾಟಕ ರಾಜ್ಯ ಸರಕಾರಿ ಶಿಕ್ಷಕರ ಸಂಘಗಳ ಒಕ್ಕೂಟದಿಂದ ಸಾವಿತ್ರಿಬಾಯಿ ಫುಲೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಸಂದಿದೆ.