ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

| Published : Jul 17 2024, 12:52 AM IST

ಸಾರಾಂಶ

ಶಿಕ್ಷಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮರಿತಮ್ಮನಹಳ್ಳಿಯಲ್ಲಿ ಮಂಗಳವಾರ ನಡೆದಿದ್ದು, ಸಂಬಂಧಿಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಮಹಾಜರ್ ನಡೆಸಿದರು. ಬಳಿಕ ಅಂಗಡಿಗೆ ಅಳವಡಿಸಿದ್ದ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ರಾತ್ರಿ 12.58ರಲ್ಲಿ ಟಾಟಾ ಏಸ್ ವಾಹನ ಹೋಗಿರುವುದು ಕಂಡುಬಂದಿದೆ. ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ವಿಷಯ ತಿಳಿದು ಆಗಮಿಸಿದ ನೂರಾರು ಮಂದಿ ಗ್ರಾಮಸ್ಥರು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಶಿಕ್ಷಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮರಿತಮ್ಮನಹಳ್ಳಿಯಲ್ಲಿ ಮಂಗಳವಾರ ನಡೆದಿದ್ದು, ಸಂಬಂಧಿಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರಾಗಿದ್ದ ಲೋಕೇಶ್ (45) ಅವರು ಹೊಳೆನರಸೀಪುರ ತಾಲೂಕು ತೆವಡಹಳ್ಳಿ ನಿವಾಸಿಯಾಗಿದ್ದು, ಮರಿತಮ್ಮನಹಳ್ಳಿಯ ರಘು ಎಂಬುವರ ಜಮೀನಿನಲ್ಲಿದ್ದ ತೇಗದ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಅವರು ಕಳೆದ 10 ದಿನಗಳಿಂದ ಯಲಗತವಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಇವರು ಎಂದಿನಂತೆ ಸೋಮವಾರ ಶಾಲೆಗೆ ಆಗಮಿಸಿ ಕರ್ತವ್ಯ ನಿರ್ವಹಿಸಿ ತೆರಳಿದ್ದು, ಸೋಮವಾರ ರಾತ್ರಿ ಮರಿತಮ್ಮನಹಳ್ಳಿಯ ರಘು ಎಂಬುವರ ಜಮೀನಿನಲ್ಲಿ ತೇಗದ ಮರಕ್ಕೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಮಹಿಳೆಯೊಬ್ಬರು ಹೊರಬಂದು ನೋಡಿದಾಗ ಮರದಲ್ಲಿ ವ್ಯಕ್ತಿಯೊಬ್ಬರು ನೇತಾಡುತ್ತಿರುವುದನ್ನು ಕಂಡು ಕೂಗಿಕೊಂಡಿದ್ದಾರೆ. ಕೂಡಲೇ ಅಕ್ಕಪಕ್ಕದ ನಿವಾಸಿಗಳು ಬಂದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.

ಸ್ಥಳೀಯ ನಿವಾಸಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಮಹಾಜರ್ ನಡೆಸಿದರು. ಬಳಿಕ ಅಂಗಡಿಗೆ ಅಳವಡಿಸಿದ್ದ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ರಾತ್ರಿ 12.58ರಲ್ಲಿ ಟಾಟಾ ಏಸ್ ವಾಹನ ಹೋಗಿರುವುದು ಕಂಡುಬಂದಿದೆ. ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ವಿಷಯ ತಿಳಿದು ಆಗಮಿಸಿದ ನೂರಾರು ಮಂದಿ ಗ್ರಾಮಸ್ಥರು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನು ಶಿಕ್ಷಕ ಲೋಕೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮರಿತಮ್ಮನಹಳ್ಳಿಯಾದರೆ, ಯಲಗತವಳ್ಳಿ ಗ್ರಾಮದ ಜಮೀನೊಂದರ ಬಳಿ ಬೈಕ್ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.