ಸಾರಾಂಶ
ಚಿಕ್ಕಮಗಳೂರಿನಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಯಾವುದೇ ವ್ಯಕ್ತಿ ಪರಿಪೂರ್ಣನಾಗುವುದು ಶಿಕ್ಷಣದ ಮೂಲಕ. ವಿದ್ಯಾರ್ಥಿಗಳಲ್ಲಿ ಸಮಾಜದ ನೈತಿಕ ಮೌಲ್ಯಗಳ ಅರಿವು ಮೂಡಿಸುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ 137ನೇ ಜನ್ಮ ದಿನೋತ್ಸವ ಮತ್ತು 63 ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ತಂದೆ ತಾಯಿ ನಂತರ ದೈವಿಕ ಸ್ಥಾನ ಗುರುವಿಗೆ ನೀಡಲಾಗಿದೆ. ಹರ ಮುನಿದರೆ ಗುರು ಕಾಯುವನು, ಗುರುವಿನ ಗುಲಾಮ ನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ನಾಣ್ಣುಡಿಯಂತೆ ಗುರುವನ್ನು ಪೂಜ್ಯ ಸ್ಥಾನದಲ್ಲಿರಿಸಿ ಗೌರವಿಸುವ ಸಂಸ್ಕೃತಿ ನಮ್ಮಲ್ಲಿದೆ ಎಂದು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ನಾಗರಿಕನಾಗುವುದು ಉತ್ತಮ ಶಿಕ್ಷಣ ಪಡೆದಾಗ ಮಾತ್ರ, ಶಿಕ್ಷಣದ ಉದ್ದೇಶ ಅರಿವು ಮೂಡಿಸುವುದು ವಿದ್ಯಾರ್ಥಿಗಳಲ್ಲಿ ಸಮಾಜದ ಒಳಿತು ಕೆಡಕುಗಳ ಅರಿವು ಮೂಡಿಸಿ ನೈತಿಕ ಮೌಲ್ಯಗಳ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಶ್ರೇಷ್ಠ ಹಾಗೂ ಸಶಕ್ತ ಪ್ರಜೆಗಳನ್ನು ನೀಡುವ ಶಿಕ್ಷಕರ ಕಾರ್ಯ ಸ್ಮರಣೀಯ ಎಂದರು.ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಸಮಾಜದ ವಿಚಾರಗಳ ಅರಿವು ಮೂಡಿಸುವುದರೊಂದಿಗೆ ಪ್ರತಿ ಮಗುವಿನ ಕಲೆ ಗುರುತಿಸಿ ಪ್ರೋತ್ಸಾಹಿಸಿ ಅವರನ್ನು ಸಮಾಜಕ್ಕೆ ಪರಿಚಯಿಸಿ ಅವರ ಬದುಕಿಗೆ ದಾರಿ ದೀಪವಾಗಿರುತ್ತಾರೆ. ಯಾವುದೇ ವ್ಯಕ್ತಿ ತನ್ನ ಗುರಿ ತಲುಪಬೇಕಾದರೆ ಗುರುವಿನ ಪಾತ್ರ ಮಹತ್ವದ್ದಾಗಿದೆ ಎಂದರು.ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಬಾಲ್ಯದಲ್ಲಿ ಉತ್ತಮ ಶಿಕ್ಷಣದ ಬೀಜ ಭಿತ್ತಿ ಪರಿಪೂರ್ಣ ವ್ಯಕ್ತಿಯಾಗಿ ರೂಪಿಸು ವಲ್ಲಿ ಶಿಕ್ಷಕರ ಪಾತ್ರ ಅಪಾರ. ಹಿಂದೆ ಗುರುಕುಲಗಳಲ್ಲಿ ಶಿಕ್ಷಣ ಶುಲ್ಕ ರಹಿತವಾಗಿತ್ತು. ಇಂದು ಶಿಕ್ಷಣ ವ್ಯಾಪಾರವಾಗಿದೆ. ಶಿಕ್ಷಣ ಸಮಗ್ರವಾಗಿ ವ್ಯಕ್ತಿ, ಕುಟುಂಬ, ಸಮಾಜ, ರಾಷ್ಟ್ರವನ್ನು ಜೋಡಿಸುವ ಸಾಧನವಾಗಬೇಕು. ಅಜ್ಞಾನದಲ್ಲಿರುವವರ ಅಂಧಕಾರ ಹೋಗಲಾಡಿಸಿ ಜ್ಞಾನದ ಬೆಳಕು ನೀಡುವ ವ್ಯವಸ್ಥೆಯಾಗಬೇಕು. ಉತ್ತಮ ಶಿಕ್ಷಕನು ಜ್ಞಾನದ ಗಣಿಯಾಗಿರುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಆದರ್ಶ ಗುರು, ಶ್ರೇಷ್ಠ ಶಿಕ್ಷಣ ತಜ್ಞ, ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣರವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಸ್ಮರಿಸುವ ಸಲುವಾಗಿ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ಹುಟ್ಟಿನಿಂದ ಮರಣದವರೆಗೂ ಪ್ರತಿಯೊಂದು ಹಂತದಲ್ಲಿಯೂ ಶಿಕ್ಷಕರ ಮಾರ್ಗದರ್ಶನ ಅವಶ್ಯಕವಾಗಿದೆ. ಒಬ್ಬ ವ್ಯಕ್ತಿಯ ಸಾಮರ್ಥ್ಯ ವನ್ನು ಸಮಾಜಕ್ಕೆ ಉತ್ತಮ ರೀತಿಯಲ್ಲಿ ಪರಿಚಯಿಸುವ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಶಿಕ್ಷಕರು ತಮ್ಮ ಜವಾಬ್ದಾರಿ ಯನ್ನಾರಿತು ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಎಂದರು.ಈ ಸಂದರ್ಭದಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್, ಕ್ಷೇತ್ರ ಸಮನ್ವಯಾಧಿಕಾರಿ ನಾಗರಾಜ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.5 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಇದ್ದರು.