ಸಾರಾಂಶ
- ಯರವ ನಾಗತಿಹಳ್ಳಿ ಕ್ಯಾಂಪ್‌ನ ಬಾಲಾಜಿ ಸಂಯುಕ್ತ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮೈಸೂರು ಪ್ರವಾಸ
- - - - 2 ವರ್ಷಗಳ ಹಿಂದೆ ಮಕ್ಕಳಿಗೆ ಕೊಟ್ಟಿದ್ದ ಮಾತು ಉಳಿಸಿಕೊಂಡ ಶಿಕ್ಷಕ ಪವಾಡಿ ಮೇಘರಾಜ- ಉತ್ತಮ ಫಲಿತಾಂಶ ಬಂದರೆ ಪ್ರವಾಸ ಕರೆದೊಯ್ಯುವ ಭರವಸೆ ನೀಡಿದ್ದ ವಿಜ್ಞಾನ ಶಿಕ್ಷಕ
- 2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪಾಸಾಗಿದ್ದ ಮಕ್ಕಳು, ಪ್ರಸ್ತುತ ಬೇರೆ ಕಾಲೇಜುಗಳಲ್ಲಿ ಶಿಕ್ಷಣ- ನೆಚ್ಚಿನ ಶಿಕ್ಷಕನಿಲ್ಲದೇ ಮಾಡಿದ್ದ ಪ್ರವಾಸಕ್ಕೆ ಕಡುಬೇಸರ, ಮತ್ತೊಮ್ಮೆ ಟೂರ್ ಹೊಡೆದ ಮಕ್ಕಳು
- - - ಕನ್ನಡಪ್ರಭ ವಾರ್ತೆ ದಾವಣಗೆರೆಉತ್ತಮ ಫಲಿತಾಂಶ ತಂದರೆ ಪ್ರವಾಸ ಕರೆದೊಯ್ಯುವುದಾಗಿ ಶಾಲೆಯಲ್ಲಿ ಶಿಕ್ಷಕರು ಹೇಳಿದ್ದರು. ಈ ಮಾತಿನಂತೆ, ಒಳ್ಳೆಯ ಫಲಿತಾಂಶ ತಂದಿದ್ದಕ್ಕೆ ಪ್ರವಾಸ ಮಾಡಿದರೂ ಅದು ಸರಿಯಾಗಿಲ್ಲವೆಂದು ವಿದ್ಯಾರ್ಥಿಗಳು ಹೇಳಿದ್ದರು. ಆದರೆ, 2 ವರ್ಷಗಳ ನಂತರ ವಿದ್ಯಾರ್ಥಿಗಳಿಗೆ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಹಳೇ ಮೈಸೂರು ಭಾಗದ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳ ದರ್ಶನ ಮಾಡಿಸಿ, ಗುರುವಿನ ಮಹತ್ವ, ಶೈಕ್ಷಣಿಕ ಕಾಳಜಿ ಎಷ್ಟೆಂಬುದು ಸಾಬೀತುಪಡಿಸಿದ್ದಾರೆ.
ದಾವಣಗೆರೆ ತಾಲೂಕಿನ ಯರವ ನಾಗತಿಹಳ್ಳಿ ಕ್ಯಾಂಪ್ (ವೈ.ಎನ್. ಕ್ಯಾಂಪ್)ನ ಬಾಲಾಜಿ ಸಂಯುಕ್ತ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರವಾಸ ಲಾಭ ಪಡೆದವರು. ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಪವಾಡಿ ಮೇಘರಾಜ ಪ್ರವಾಸ ಭಾಗ್ಯ ಕರುಣಿಸಿದ ಗುರುವಾಗಿದ್ದಾರೆ.2022-23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಓದಿದ್ದ, ಈಗ ದಾವಣಗೆರೆ ಸೇರಿದಂತೆ ವಿವಿಧೆಡೆ ದ್ವಿತೀಯ ಪಿಯುಸಿ ಓದುತ್ತಿರುವ ಹಳೆಯ ವಿದ್ಯಾರ್ಥಿಗಳಿಗೆ ಶಿಕ್ಷಕ ಪವಾಡಿ ಮೇಘರಾಜ ಪ್ರವಾಸ ಕಾರ್ಯಕ್ರಮ ಮೂಲಕ ಮಕ್ಕಳ ಹಳೆಯ ಕೊರಗನ್ನು ನಿವಾರಿಸಿ, ಎಲ್ಲರ ಗಮನ ಸೆಳೆದಿದ್ದಾರೆ.
2 ವರ್ಷಗಳ ಹಿಂದೆ ಬಾಲಾಜಿ ಸಂಯುಕ್ತ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳಿಗೆ ಉತ್ತಮ ಫಲಿತಾಂಶದ ಗುರಿ ಸಾಧಿಸಿದರೆ, ಮಕ್ಕಳಿಗೆ ಪ್ರವಾಸ ಏರ್ಪಡಿಸುವುದಾಗಿ ಹೇಳಲಾಗಿತ್ತು. ಅದರಂತೆ ಪ್ರವಾಸ ಸಹ ಮಾಡಿಸಲಾಗಿತ್ತು. ಆದರೆ, ವಿಜ್ಞಾನ ಶಿಕ್ಷಕ ಪವಾಡಿ ಮೇಘರಾಜ ಪ್ರವಾಸದಲ್ಲಿ ಪಾಲ್ಗೊಂಡಿರಲಿಲ್ಲ. ಇದರಿಂದಾಗಿ ಪವಾಡಿ ಸರ್ ಇಲ್ಲದ ಪ್ರವಾಸದಿಂದ ತಮಗೆ ಖುಷಿಯಾಗಿಲ್ಲವೆಂದು ಶಾಲೆಯ 30 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಾಲೆ ಸಿಬ್ಬಂದಿ ಅಣ್ಣಪ್ಪ ಅವರ ಬಳಿ ಬೇಸರ ವ್ಯಕ್ತಪಡಿಸಿದ್ದರು.ವಿದ್ಯಾರ್ಥಿಗಳಂತೂ ಶಿಕ್ಷಕ ಮೇಘರಾಜ ಸಿಕ್ಕಾಗಲೆಲ್ಲಾ ಅದೇ ಮಾತು ಹೇಳುತ್ತಿದ್ದರು. ಇದರಿಂದಾಗಿ ಮಕ್ಕಳ ಬೇಸರ ನಿವಾರಿಸಲು ಮಾತು ಕೊಟ್ಟಂತೆ ಶಿಕ್ಷಕ ಪವಾಡಿ ಮೇಘರಾಜ ಅವರು ಇತ್ತೀಚೆಗೆ ತಮ್ಮ ಕುಟುಂಬ, ಕೆಲಮಕ್ಕಳ ಪಾಲಕರ ಪೈಕಿ ಕೆಲವರಿಗೆ ಪ್ರವಾಸದ ವ್ಯವಸ್ಥೆ ಮಾಡಿದ್ದರು. ಬಾಲಾಜಿ ಪ್ರೌಢಶಾಲೆಯ ಹಳೆಯ 20 ಬಾಲಕರು, 10 ಬಾಲಕಿಯರು ಹಾಗೂ 8-10 ಪಾಲಕರು ಸೇರಿದಂತೆ ಎಲ್ಲರಿಗೂ ಬಸ್ಸಿನಲ್ಲಿ ಪ್ರವಾಸ ಮಾಡಿಸಿ, ಎಲ್ಲರ ವಿಶ್ವಾಸ-ಪ್ರೀತಿಗೆ ಪಾತ್ರರಾದರು. ಬಸ್ಸಿನಲ್ಲಿ ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ ಮಕ್ಕಳು ಈಗ ಫುಲ್ ಖುಷ್ ಆಗಿದ್ದಾರೆ.
ಸಾಮಾನ್ಯ ಶಿಕ್ಷಕರಿಗೆ ಬರುವ ಸಂಬಳದಲ್ಲಿಯೇ ಜೀವನ ನಿರ್ವಹಣೆಗೆ ಕಷ್ಟವಾದ ದಿನಗಳಿವು. ಅಂತಹದ್ದರಲ್ಲಿ ಸಹಸ್ರಾರು ರು.ಗಳನ್ನು ಹೊಂದಿಸಿಕೊಂಡು, ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಪ್ರವಾಸ ಮಾಡಿಸಿದ ಶಿಕ್ಷಕ ಪವಾಡಿ ಮೇಘರಾಜರ ಬದ್ಧತೆ ಬಗ್ಗೆ ಪಾಲಕರು, ಮಕ್ಕಳು ಪ್ರಶಂಸೆ ವ್ಯಕ್ತಪಡಿಸಿದರು.- - -
ಬಾಕ್ಸ್ * ₹85 ಸಾವಿರ ವೆಚ್ಚ, ಎಲ್ಲೆಲ್ಲಿಗೆ ಟೂರ್? ಶಿಕ್ಷಕ ಮೇಘರಾಜ ಅವರು ₹85 ಸಾವಿರ ಅಗತ್ಯ ಹಣ ಹೊಂದಿಸಿಕೊಂಡ ಬಳಿಕ ಮಕ್ಕಳಿಗೆ ಪ್ರವಾಸ ಏರ್ಪಡಿಸಿದರು. ವೈ.ಎನ್.ಕ್ಯಾಂಪ್‌ನಿಂದ ಹೊರಟ ಪ್ರವಾಸ ಬಸ್, ನಿಮಿಷಾಂಬ ದೇವಸ್ಥಾನ ತಲುಪಿದಾಗ ಮಕ್ಕಳು ದರ್ಶನ ಮಾಡಿದರು. ಅಲ್ಲಿಂದ ಶ್ರೀರಂಗಪಟ್ಟಣ, ಮೈಸೂರು ಅರಮನೆ, ಪ್ರಾಣಿ ಸಂಗ್ರಹಾಲಯ, ಶ್ರೀ ಚಾಮುಂಡಿ ಬೆಟ್ಟ, ನಂಜನಗೂಡು, ಮೇಲುಕೋಟೆ, ಸುತ್ತೂರು ಮಠ, ಶ್ರೀ ಚಲುವ ನಾರಾಯಣ ಸ್ವಾಮಿ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಆದಿಚುಂಚನಗಿರಿ ಮಠ ಸೇರಿದಂತೆ ವಿವಿಧ ತಾಣಗಳಿಗೆ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ದು, ಯಶಸ್ವಿ ಪ್ರವಾಸ ಮಾಡಿಸಿದ್ದಾರೆ. ಶಾಲೆ ಶಿಕ್ಷಕ ಪವಾಡಿ ಮೇಘರಾಜ, ತಮ್ಮ ಕುಟುಂಬ ಸದಸ್ಯರು, ಕೆಲ ಪಾಲಕರು, ಸಿಬ್ಬಂದಿ ಅಣ್ಣಪ್ಪ ಸಮೇತ 30 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರವಾಸದಲ್ಲಿ ಪಾಲ್ಗೊಂಡರು.- - -
ಕೋಟ್ ಉತ್ತಮ ಫಲಿತಾಂಶ ತಂದರೆ ಪ್ರವಾಸ ಏರ್ಪಡಿಸುವುದಾಗಿ ಮಕ್ಕಳಿಗೆ 2 ವರ್ಷಗಳ ಹಿಂದೆ ಮಾತು ಕೊಟ್ಟಿದ್ದೆ. ಅದರಂತೆ ₹85 ಸಾವಿರ ಖರ್ಚಿನಲ್ಲಿ ಪ್ರವಾಸ ಏರ್ಪಡಿಸಿದೆ. ಇದರಿಂದ ಮಕ್ಕಳು, ಪಾಲಕರ ಸಿಕ್ಕ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ? ನಮ್ಮ ಮಕ್ಕಳ ಖುಷಿ ಮುಂದೆ ಹಣ ಖರ್ಚಿನ ಬಗ್ಗೆ ಯೋಚಿಸಬಾರದು. ವೈ.ಎನ್.ಹಳ್ಳಿ ಕ್ಯಾಂಪ್‌ನಿಂದ ಎರಡು ದಿನಗಳ ಪ್ರವಾಸ ಹೋಗಿ ಬರುವವರೆಗೂ ಮಕ್ಕಳ ಖುಷಿ, ಸಂಭ್ರಮ ಮೂಡಿದ್ದು ನೋಡಬೇಕಿತ್ತು. ಪ್ರವಾಸ ಮುಗಿಸಿ ಬಂದಿದ್ದರೂ ಆ ಖುಷಿ ನೆನೆದು ಮಾತನಾಡುತ್ತಾರೆ. ಆ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂಬುದೇ ನನ್ನ ಹಾರೈಕೆ- ಪವಾಡಿ ಮೇಘರಾಜ, ವಿಜ್ಞಾನ ಶಿಕ್ಷಕ, ಬಾಲಾಜಿ ಸಂಯುಕ್ತ ಪ್ರೌಢಶಾಲೆ
- - - -23ಕೆಡಿವಿಜಿ1:ದಾವಣಗೆರೆ ತಾಲೂಕಿನ ಯರವ ನಾಗತಿಹಳ್ಳಿ ಕ್ಯಾಂಪ್‌ನ ಬಾಲಾಜಿ ಸಂಯುಕ್ತ ಪ್ರೌಢಶಾಲೆ 10ನೇ ತರಗತಿ ಓದಿದ್ದ ಮಕ್ಕಳು ವಿಜ್ಞಾನ ಶಿಕ್ಷಕ ಪವಾಡಿ ಮೇಘರಾಜ ನೇತೃತ್ವದಲ್ಲಿ ಮೈಸೂರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.