ಸಾರಾಂಶ
ಬಣಕಲ್ ಪ್ರೌಢಶಾಲೆಯಲ್ಲಿ 1989-90 ಬ್ಯಾಚಿನ ಎಸ್ ಎಸ್ ಎಲ್ ಸಿ ಹಳೇ ವಿದ್ಯಾರ್ಥಿಗಳಿಂದ ಸನ್ಮಾನ
ಕನ್ನಡಪ್ರಭ ವಾರ್ತೆ, ಕೊಟ್ಟಿಗೆಹಾರಶಿಕ್ಷಕರ ಸೇವೆ ಪವಿತ್ರ ಕಾರ್ಯವಾಗಿದೆ. ಶಿಕ್ಷಕ ವೃತ್ತಿ ಜೀವನಕ್ಕೆ ಎಂದೂ ನಿವೃತ್ತಿ ಇಲ್ಲ ಎಂದು ಬಣಕಲ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ವಾಸುದೇವ್ ಭಟ್ ಹೇಳಿದರು.
ಬಣಕಲ್ ಪ್ರೌಢಶಾಲೆಯಲ್ಲಿ 1989-90 ಬ್ಯಾಚಿನ ಎಸ್ ಎಸ್ ಎಲ್ ಸಿ ಹಳೇ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸುಮಾರು ಹದಿನೆರಡು ಸಾವಿರ ಮಕ್ಕಳಿಗೆ ವಿದ್ಯೆ ಕಲಿಸಿದ್ದು ಅವರು ವಿವಿಧ ವೃತ್ತಿ, ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನನಗೆ ಸರ್ಕಾರದಿಂದ ಶಿಕ್ಷಕ ವೃತ್ತಿಗೆ ನಿವೃತ್ತಿ ಸಿಗಬಹುದು. ಆದರೆ, ಶಿಕ್ಷಕ ವೃತ್ತಿ ಜೀವನಕ್ಕೆ ಎಂದೂ ನಿವೃತ್ತಿಯಿಲ್ಲ ಎಂದರು.ಯಾವುದೇ ವಿದ್ಯಾರ್ಥಿ ಶಿಕ್ಷಣ ನೀಡುವಂತೆ ಕೇಳಿ ಬಳಿ ಬಂದರೆ ಅವರಿಗೆ ಕಲಿತ ವಿದ್ಯೆಯನ್ನು ದಾನ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಪ್ರಯತ್ನಿಸುತ್ತೇನೆ. 35 ವರ್ಷಗಳ ಹಿಂದಿನ ವಿದ್ಯಾರ್ಥಿಗಳು ನೆನಪಿಟ್ಟುಕೊಂಡು ನನ್ನನ್ನು ಸನ್ಮಾನಿಸಿದ್ದಕ್ಕೆ ನಾನು ಋಣಿಯಾಗಿದ್ದೇನೆ. ಕಲಿತ ಶಾಲೆ ಶಿಕ್ಷಕರನ್ನು ಮರೆಯದಿರುವುದು ಉತ್ತಮ ವಿದ್ಯಾರ್ಥಿಗಳ ಲಕ್ಷಣ ವಾಗಿದೆ. ಈ ಸಂಸ್ಥೆಯಲ್ಲಿ ಕಲಿಕೆಗೆ ಪ್ರೋತ್ಸಾಹ, ಉತ್ತಮ ಸಾಮಾಗ್ರಿ, ಉತ್ತಮ ಶಿಕ್ಷಣ ಕೊಡುವ ಶಿಕ್ಷಕರಿದ್ದಾರೆ. ಮುಂದೆಯೂ ಈ ಶಾಲೆಗೆ ಸಲಹೆ ಸಹಕಾರ ನೀಡಿ ಎಂದರು.
ಬೆಳ್ತಂಗಡಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಬಿ.ಬಸವಲಿಂಗಪ್ಪ ಮಾತನಾಡಿ, ಈ ಶಾಲೆಯಲ್ಲಿ ಕಲಿತು ಶಿಕ್ಷಕರಾಗಿ ಸೇವೆ ನೀಡುತ್ತಿದ್ದೇನೆ ಎಂದರೆ ಅದು ಬಣಕಲ್ ಪ್ರೌಢಶಾಲೆ ಶಿಕ್ಷಕರ ಶಿಕ್ಷಣದ ಕಾರ್ಯವೈಖರಿಯಾಗಿದೆ. ಶಿಕ್ಷಣದೊಂದಿಗೆ ಉತ್ತಮ ನಡೆ ಸಂಸ್ಕಾರವನ್ನು ಕಲಿಸಿಕೊಟ್ಟಿದ್ದಾರೆ. ಈ ಶಾಲೆ ಹಲವು ಮಕ್ಕಳು ವಿದೇಶಗಳಲ್ಲೂ ದುಡಿಯುತ್ತಿದ್ದು, ಬಣಕಲ್ ಪ್ರೌಢಶಾಲೆ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಶಾಲೆ ಹಲವು ಶಿಕ್ಷಕರು ಮೃತರಾಗಿದ್ದರೂ ಅವರ ಸೇವೆಯ ನೆನಪು ಸದಾ ಸ್ಮರಿಸುತ್ತೇವೆ ಎಂದು ಹೇಳಿದರು.ಮುಖ್ಯ ಶಿಕ್ಷಕ ಪಿ.ವಾಸುದೇವ್ ಭಟ್ ಹಾಗೂ ಪತ್ನಿ ವಿಜಯಲಕ್ಷ್ಮಿ ದಂಪತಿಯನ್ನು ಹಳೇ ವಿದ್ಯಾರ್ಥಿಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಸೈಯದ್ ನವೀದ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ವಂದಿಸಿದರು. ಹಳೇ ವಿದ್ಯಾರ್ಥಿಗಳಾದ ಸುವರ್ಣಲತ, ವಸಂತ ಪೂಜಾರಿ, ವಿಜಯಕುಮಾರ್, ಕೆ.ಎಲ್.ರಘು, ಬಿ.ಎಸ್.ಕಲ್ಲೇಶ್, ಕೆ.ಈ. ಉಮೇಶ್, ಸಂತೋಷ್, ಸೈಯದ್ ನವೀದ್, ಟಿ.ಬಿ.ಬಸವ ಲಿಂಗಪ್ಪ, ಆಲ್ವಿನ್ ಥಾಮಸ್, ಎಸ್.ಎನ್.ರವಿ, ರಿಯಾಜ್ಜುದ್ದೀನ್, ಅನಿಲ್ ಮೊಂತೆರೊ, ಪ್ರಥಮ ದರ್ಜೆ ಸಹಾಯಕಿ ಭವ್ಯ ಇದ್ದರು.1 ಕೆಸಿಕೆಎಂ 4ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಾದ ಪಿ.ವಾಸುದೇವ್ ಭಟ್ ಹಾಗೂ ಪತ್ನಿ ವಿಜಯಲಕ್ಷ್ಮಿ ದಂಪತಿಯನ್ನು ಸನ್ಮಾನಿಸಿದರು.