ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್, ಸಮವಸ್ತ್ರ ವಿತರಿಸಿದ ಶಿಕ್ಷಕ ಉಪ್ಪಾರ

| Published : Aug 02 2024, 12:46 AM IST

ಸಾರಾಂಶ

ತಾಲೂಕಿನ ಮಂಗಳೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಿಕ್ಷಕ ಹನುಮಂತಪ್ಪ ಉಪ್ಪಾರ ತಮ್ಮ ಸ್ವಂತ ಖರ್ಚಿನಲ್ಲಿ ಬ್ಯಾಗ್ ಹಾಗೂ ಸಮವಸ್ತ್ರ ವಿತರಿಸಿದರು.

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಮಂಗಳೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಿಕ್ಷಕ ಹನುಮಂತಪ್ಪ ಉಪ್ಪಾರ ತಮ್ಮ ಸ್ವಂತ ಖರ್ಚಿನಲ್ಲಿ ಬ್ಯಾಗ್ ಹಾಗೂ ಸಮವಸ್ತ್ರ ವಿತರಿಸಿದರು.ಈ ವೇಳೆ ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸುರೇಶ ಮಡಿವಾಳರ ಮಾತನಾಡಿ, ಶಿಕ್ಷಕ ಹನುಮಂತಪ್ಪ ಉಪ್ಪಾರ ಮಕ್ಕಳ ಕಲಿಕೆಗೆ ಸಹಾಯಕವಾಗಲೆಂದು ಶಿಕ್ಷಕರು ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ. ಸರ್ಕಾರಿ ಶಾಲೆಯ ಬಲವರ್ಧನೆಗೆ, ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಳಕ್ಕೆ ಇಂತಹ ಉತ್ತೇಜಕಗಳು ಪ್ರೇರಣೆಯಾಗುತ್ತವೆ. ದುಡ್ಡು ಇದ್ದವರು ದೊಡ್ಡವರಲ್ಲ, ದಾನ-ಧರ್ಮ ಮಾಡುವ ಉದಾರ ಮನಸ್ಸುಳ್ಳವರು ದೊಡ್ಡವರು. ನಿಜಕ್ಕೂ ಇವರ ಸೇವೆ ಮಾದರಿಯ ಮತ್ತು ಶ್ಲಾಘನೀಯವಾದದ್ದು ಎಂದರು.

ಶಿಕ್ಷಕ ಹನುಮಂತಪ್ಪ ಉಪ್ಪಾರ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರಿ ಶಾಲೆಯಲ್ಲಿ ನುರಿತ ಮತ್ತು ಅನುಭವಿ ಶಿಕ್ಷಕರಿಂದ ಉಚಿತ ಮತ್ತು ಖಚಿತ ಶಿಕ್ಷಣ ದೊರೆಯುತ್ತದೆ. ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹಚ್ಚುವ ಮನಸ್ಸು ಮಾಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನನ್ನ ಅಳಿಲು ಸೇವೆ ಮಾಡಿರುವೆ. ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ನಾಡಿನ ಸತ್ಪ್ರಜೆಗಳಾಗಿ ಬಾಳಬೇಕು ಎಂದರು.

ಸಿದ್ದಲಿಂಗ ನಗರದ ಶಿಕ್ಷಕ ಹನುಮಂತಪ್ಪ ಉಪ್ಪಾರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಉರ್ದು ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್, ಒಂದು ಜೊತೆ ಸಿದ್ಧ ಸಮವಸ್ತ್ರ, ನೋಟ್ ಬುಕ್ ಹಾಗೂ ಒಂದು ವರ್ಷಕ್ಕೆ ಬೇಕಾಗುವ ಲೇಖನ ಸಾಮಗ್ರಿಗಳನ್ನು ವಿತರಿಸಿದ್ದಾರೆ.

ಗ್ರಾಪಂ ಅಧ್ಯಕ್ಷ ಸಕ್ರಪ್ಪ ಚಿನ್ನೂರ, ಮಂಗಳೂರು ವಲಯದ ಸಿಆರ್‌ಪಿ ರವಿ ಮಳಗಿ, ಎಸ್‌ಡಿಎಂಸಿ ಅಧ್ಯಕ್ಷ ಮಂಗಳೇಶ ಯತ್ನಟ್ಟಿ, ಉರ್ದು ಶಾಲೆಯ ಮುಖ್ಯ ಶಿಕ್ಷಕ ಕೊಟ್ರಯ್ಯ ಕಟಗಿ ಇತರರಿದ್ದರು.