ಕಾರಟಗಿ: ಸಮಾಜದ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಯಲ್ಲಿ ಶಿಕ್ಷಕರು ಹಾಗೂ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ಜ್ಞಾನ ನೀಡಿ ಉತ್ತಮ ಪ್ರಜೆ ರೂಪಿಸಿದರೆ, ಪತ್ರಕರ್ತರು ಸತ್ಯವನ್ನು ಸಮಾಜದ ಮುಂದೆ ತಂದು ಜನಜಾಗೃತಿ ಮೂಡಿಸುತ್ತಾರೆ. ಆದ್ದರಿಂದ ಶಿಕ್ಷಕರು ಮತ್ತು ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ಗಂಗಾವತಿಯ ಪಿಕಾಡ್೯ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಹೇಳಿದರು.

ಇಲ್ಲಿನ ಬಾಲಕ ಮತ್ತು ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರಾಮಾಣಿಕತೆ, ನಿಷ್ಪಕ್ಷಪಾತತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಪತ್ರಕರ್ತರು ಕಾರ್ಯ ನಿರ್ವಹಿಸಬೇಕು. ಶಿಕ್ಷಕರು ಮತ್ತು ಪತ್ರಕರ್ತರು ತಮ್ಮ ವೃತ್ತಿಧರ್ಮ ನಿಷ್ಠೆಯಿಂದ ಪಾಲಿಸಿದಾಗ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ವಿ.ವಿ.ಗೊಂಡಬಾಳ ಮಾತನಾಡಿ, ಸಮಾಜದ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮತ್ತು ಮಾಧ್ಯಮದವರ ಪಾತ್ರದ ಕುರಿತು ಪ್ರಸ್ತಾಪಿಸಿದರು.

ಬಳಿಕ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಪತ್ರಿಕಾ ಸ್ವಾತಂತ್ರ್ಯ, ಜವಾಬ್ದಾರಿಯುತ ವರದಿಗಾರಿಕೆ ಮತ್ತು ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಪಾತ್ರದ ಕುರಿತು ಉಪನ್ಯಾಸ ನೀಡಿದರು.


ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ, ಕೆ. ಮಲ್ಲಿಕಾರ್ಜುನ ಮತ್ತು ವೀರೇಂದ್ರ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಪ್ರಾಶಾಶಿ ಸಂಘದ ಅಧ್ಯಕ್ಷರಾಗಿ ಅಮರೇಶ ಮೈಲಾಪುರ ಮತ್ತು ಪ್ರಧಾನ ಕಾರ್ಯದರ್ಶಿ ಶಂಕ್ರಮ್ಮ ಸಜ್ಜನ್ ಹಾಗೂ ನೂತನ ಪದಾಧಿಕಾರಿಗಳು ಅಧಿಕಾರ ಪದಗ್ರಹಣವೇರಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಮರೇಶ ಮೈಲಾಪುರ ಪ್ರಾಸ್ತಾವಿಕ ಮಾತನಾಡಿ, ಸರ್ಕಾರ ರಾಜ್ಯದಲ್ಲಿ ವಿವಿಧ ಯೋಜನೆಗಳ ಜಾರಿಗೆ ಶಿಕ್ಷಕರನ್ನು ಬಳಕೆ ಮಾಡುತ್ತಿದೆ. ನಮ್ಮನ್ನು ಮಕ್ಕಳಿಗೆ ಪಾಠ ಮಾಡಲು ಬಿಟ್ಟಬಿಡಿ ಅದೇ ದೊಡ್ಡ ಯೋಜನೆ ಜಾರಿಯಾದಂತೆ ಎಂದರು.

ಪುರಸಭೆ ಅಧ್ಯಕ್ಷ ಮಂಜುನಾಥ್ ಮೇಗೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಾನ್ನಿಧ್ಯವನ್ನು ತಲೇಖಾನ್ ವೀರಭದ್ರ ಶರಣರು ವಹಿಸಿದ್ದರು. ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್.ಶ್ರೀನಿವಾಸ್, ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ರಾಜ್ಯ ಪರಿಷತ್ ನಿರ್ದೇಶಕ ಮಂಜುನಾಥ್ ಹಿರೇಮಠ, ಪತ್ರಕರ್ತರ ಸಂಘದ ಅಧ್ಯಕ್ಷ ವೀರೇಂದ್ರ ಪಾಟೀಲ್, ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಶರಣಪ್ಪ ಸೋಮಲಾಪುರ, ಪಿಡಿಒ ಸಂಘದ ಮಾಜಿ ಜಿಲ್ಲಾಧ್ಯಕ್ಷ ರಾಮು ನಾಯಕ, ಪಿಡಿಒ ಸಂಘದ ಅಧ್ಯಕ್ಷ ವೆಂಕಟೇಶ ನಾಯಕ, ಹೇಮಂತಕುಮಾರ್, ದೇವೇಂದ್ರಪ್ಪ, ಕನಕಗಿರಿ ಕ್ಷೇತ್ರ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಬಿ. ಶರಣಯ್ಯಸ್ವಾಮಿ, ಚೆನ್ನಬಸಪ್ಪ ಸುಂಕದ್, ನಾಗರಾಜ ಅರಳಿ, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡ ಬಸವರಾಜ ಬೂದಿ, ಸದಸ್ಯರಾದ ಹಿರೇಬಸಪ್ಪ ಸಜ್ಜನ, ಸುಪ್ರಿಯಾ ಅರಳಿ, ಅಲಿ ಹುಸೇನ್, ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷ ಶರಣಪ್ಪ ಅಂಗಡಿ, ಆಂಜನೇಯ ಬೇವಿನಾಳ, ಶರಣಪ್ಪ ಹಕ್ಕಂಡಿ ಸೇರಿದಂತೆ ಇನ್ನಿತರರು ಇದ್ದರು.

ಶಿಕ್ಷಕರಾದ ಪ್ರಮೀಳಾ ಮತ್ತು ಶ್ಯಾಮಸುಂದರ ಇಂಜಿನಿ ಕಾರ್ಯಕ್ರಮ ನಿರ್ವಹಿಸಿದರು.