ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಶಿಕ್ಷಕರು ಸದೃಢ ಮತ್ತು ಸಮೃದ್ಧ ದೇಶ ಕಟ್ಟುವ ಶಿಲ್ಪಿಗಳಿದ್ದಂತೆ ಎಂದು ಸದಲಗಾದ ಉಪನ್ಯಾಸಕ ಡಾ.ವೀರೇಶ ಪಾಟೀಲ ಹೇಳಿದರು.ಪಟ್ಟಣದ ಗಚ್ಚಿನ ಮಠದ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ, ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಡೆ, ನುಡಿ ಶುದ್ಧವಾಗಿಟ್ಟುಕೊಂಡ ಸಮಾಜದಲ್ಲಿ ಸದಾ ಆದರ್ಶ ಆಗಿರಬೇಕು. ಮಕ್ಕಳಲ್ಲಿ ಸಕಾರಾತ್ಮಕ ಆಲೋಚನೆಗಳನ್ನು, ಒಳ್ಳೆಯ ಸಂಸ್ಕಾರಗಳನ್ನು ಕಳಿಸಿಕೊಡುವ ಶಿಕ್ಷಕರಿಗೆ ಸಮಾಜದಲ್ಲಿ ದೊಡ್ಡ ಗೌರವವಿದೆ ಎಂದರು.ನಮ್ಮ ಶಿಕ್ಷಕರು ಹಳೆ ಶೈಕ್ಷಣಿಕ ಪದ್ಧತಿಗೆ ಜೋತು ಬೀಳದೇ ಡಿಜಿಟಲ್ ಯುಗದಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ಅದನ್ನು ತಾವು ಕಲಿಯುವುದರ ಜೊತೆಗೆ ಇಂದಿನ ಸ್ಪರ್ಧಾತ್ಮಕ ಯುಗದ ಶೈಕ್ಷಣಿಕ ವ್ಯವಸ್ಥೆಯ ಜೊತೆಗೆ ಸಾಗುವುದು ಅನಿವಾರ್ಯವಾಗಿದೆ ಎಂದರು.ಶಾಸಕ ಲಕ್ಷ್ಮಣ ಸವದಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಸಮಾಜದ ದೀಪಸ್ತಂಭ ಇದ್ದಂತೆ. ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ಬೆಳಕಿನಿಂದ ತುಂಬುವ ಮಾರ್ಗದರ್ಶಕರು. ಶಿಕ್ಷಕರು ಕೇವಲ ಪಾಠಗಳನ್ನು ಕಲಿಸುವವರಲ್ಲ, ಬದಲಿಗೆ ಒಳ್ಳೆಯ ಮಾನವೀಯ ಗುಣಗಳನ್ನು ಬೆಳೆಸುವವರು. ಅವರ ಮಾರ್ಗದರ್ಶನವಿಲ್ಲದೇ ಜ್ಞಾನ ಸಂಪೂರ್ಣವಾಗದು, ಶಿಕ್ಷಣದ ಜೊತೆಗೆ ಸಂಸ್ಕಾರಗಳನ್ನು ಮಕ್ಕಳಲ್ಲಿ ಬೆಳೆಸುವುದು ಶಿಕ್ಷಕರ ಜವಾಬ್ದಾರಿಯಾಗಿದೆಂದು ತಮ್ಮ ಶಾಲಾ ದಿನಗಳ ಅನುಭವ ಹಾಗೂ ಶಿಕ್ಷಕರ ಮಹತ್ವವನ್ನು ತಿಳಿಸಿದರು. ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಇಂದಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ಸ್ವಾವಲಂಬಿ, ಸ್ವಾಭಿಮಾನ ಬದುಕಿನ ಪಾಠ ಹೇಳಿಕೊಡುವುದು ಅಗತ್ಯವಾಗಿದೆ. ನಿರುದ್ಯೋಗ ತಾಂಡವಾಗುತ್ತಿರುವ ಇಂದಿನ ದಿನಗಳಲ್ಲಿ ಮುಂದಿನ ಪೀಳಿಗೆಗೆ ಕೃಷಿಯಲ್ಲಿ ಹೊಸ ಸುಧಾರಣೆ ಹಾಗೂ ಹೊಸ ಹೊಸ ಉದ್ಯಮಿಗಳನ್ನು ಆರಂಭಿಸುವ, ಸ್ವಾಭಿಮಾನ ಬದುಕು ಕಲಿಸಿಕೊಡುವ ಶಿಕ್ಷಣ ಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಅಥಣಿ ಶೈಕ್ಷಣಿಕ ವಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ 50ಕ್ಕೂ ಹೆಚ್ಚು ಶಿಕ್ಷಕರನ್ನು ಸತ್ಕರಿಸಲಾಯಿತು.ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ತಹಸೀಲ್ದಾರ್ ಸಿದ್ರಾಯ ಭೋಸಗಿ, ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪೂರ, ಕ್ಷೇತ್ರ ಸಮನ್ವಯ ಅಧಿಕಾರಿ ಜಿ.ಎ.ಖೋತ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಹಿರೇಮಠ, ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಸೂರ್ಯವಂಶಿ, ಬಿಸಿ ಊಟ ಸಹಾಯಕ ನಿರ್ದೇಶಕ ಎನ್.ಎಂ.ನಾಮದಾರ, ಎಸ್.ಎಂ.ರಾಠೋಡ ಪಿ.ಜಿ.ಮಾಳಿ, ಎಂ.ಬಿ.ಅಸ್ಕಿ, ಎ.ಬಿ.ಕುಟ್ಕೋಳಿ, ವಿಶ್ವಕುಮಾರ ಮಾಳಿ, ಬಿ.ಎಲ್.ಪೂಜಾರಿ, ಎಂ.ಎನ್.ಹಿರೇಮಠ, ಎಂ.ಎಚ್.ಸವನೂರ, ಜಿ.ಎ.ಕೋಷ್ಟಿ, ಶೋಭಾ ಕುಲಕರ್ಣಿ, ಅರ್ಚನಾ ಅಥಣಿ, ರೇಣುಕಾ ಬಡಕಂಬಿ, ಕೆ.ಟಿ.ಮಾಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಪಿ.ಮಾಳಿ ನಿರೂಪಿಸಿದರು. ಪರಿಮಳಾ ದಳವಾಯಿ ವಂದಿಸಿದರು.
ಶಿಕ್ಷಕರ ಬಹುದಿನಗಳ ಬೇಡಿಕೆಯಾಗಿರುವ ಗುರುಭವನ ನಿರ್ಮಾಣಕ್ಕೆ ಸರ್ಕಾರದಿಂದ ₹50 ಲಕ್ಷ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು. ಇದಲ್ಲದೆ ಅನೇಕ ದಿನಗಳಿಂದ ಅಥಣಿ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಕೊರತೆ ಇತ್ತು, ಸರ್ಕಾರ 9 ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಪ್ರೌಢಶಾಲೆಗೆ ಮಂಜೂರಾತಿ ನೀಡಿದ್ದು, ತಾಲೂಕಿನ ಜನತೆಗೆ ಪರವಾಗಿ ಸರಕಾರಕ್ಕೆ ಅಭಿನಂದಿಸುತ್ತೇನೆ.
-ಲಕ್ಷ್ಮಣ ಸವದಿ, ಶಾಸಕ.