ಸಾರಾಂಶ
ಹಿರೇಕೆರೂರು: ವಿದ್ಯಾರ್ಥಿಗಳಿಗೆ ಜ್ಞಾನ ನೀಡಿ,ಸದೃಢ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 137ನೇ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪ್ರತಿಯೊಬ್ಬರ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಬದುಕಿಗೆ ದಾರಿದೀಪವಾಗಿ, ಮಾರ್ಗದರ್ಶಕರಾದ ಗುರುಗಳಿಗೆ ಗೌರವ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವಳಿ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಎಲ್ಲ ಶಾಲೆಗಳಲ್ಲಿ ಸ್ಮಾರ್ಟ ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುವುದು ಹಾಗೂ ₹ 1.5 ಕೋಟಿ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಮಾಡಲಾಗುವುದು ಮತ್ತು ನಮ್ಮ ಕ್ಷೇತ್ರಕ್ಕೆ 4 ಕೆಪಿಎಸ್ ಶಾಲೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ವಿನಂತಿ ಮಾಡಲಾಗಿದೆ 4 ಶಾಲೆಗಳು ಮಂಜೂರಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ಡಾ.ಪ್ರಭುಲಿಂಗಪ್ಪ ಹಲಗೇರಿ, ಶಿಕ್ಷಕರು ಸತತ ಅಧ್ಯಯನ ಮತ್ತು ಕಲಿಸುವ ಉತ್ಸಾಹ ಹೆಚ್ಚಿಸಿಕೊಳ್ಳಬೇಕು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರಂತ ಮಹಾನ್ ವ್ಯಕ್ತಿಯ ಆದರ್ಶ ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೆ ಕಲಿಕೆಯೊಂದಿಗೆ ಸಂಸ್ಕಾರ, ಮೌಲ್ಯಗಳು ಮತ್ತು ಜೀವನ ಕೌಶಲ್ಯ ಕಲಿಸಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ಸದೃಢ ದೇಶ ಕಟ್ಟುವಲ್ಲಿ ಶಿಕ್ಷಕರ ಜವಾಬ್ದಾರಿ ಅತೀ ಮಹತ್ವದ್ದಾಗಿದೆ. ಇಲಾಖೆಯಲ್ಲಿ ಬದಲಾದ ಎಲ್ಲ ವ್ಯವಸ್ಥೆಗಳಿಗೆ ಹೊಂದಿಕೊಂಡು ಎಲ್ಲ ಕಾರ್ಯಕ್ರಮ ಅನುಷ್ಠಾನಗೊಳಿಸುವ ಜತೆಗೆ ಮಕ್ಕಳ ಕಲಿಕೆಗೂ ಒತ್ತು ನೀಡಬೇಕು ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಪಿಎಂ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ, ಡಯಟ್ ಉಪನ್ಯಾಸಕ ರುದ್ರಗೌಡ ನೂಲಗೇರಿ, ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ಹುಚಗೊಂಡರ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಮೇಘರಾಜ ಮಾಳಗಿಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ ಪುಟ್ಟಪ್ಪಗೌಡ್ರ, ಪತ್ತಿನ ಸಂಘದ ಅಧ್ಯಕ್ಷ ಎಂ.ಬಿ. ಹಾದಿಮನಿ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿವಿಧ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು, ಶಿಕ್ಷಕರು ಇದ್ದರು.