ಸಾರಾಂಶ
ಕೊರಟಗೆರೆ: ರಾಜ್ಯದಲ್ಲಿ ಸರ್ಕಾರಿ ನೌಕರಿಗೆ ಇರುವಷ್ಟು ಬೇಡಿಕೆ ಸರ್ಕಾರಿ ಶಾಲೆಗಳಿಗಿಲ್ಲ. ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ಕಡಿಮೆ ನೀಡಿದರೂ ಮಕ್ಕಳಿಗೆ ಕಲಿಕೆಯಲ್ಲಿ ಎಂದಿಗೂ ಗುಣಮಟ್ಟ ಶಿಕ್ಷಣವನ್ನೇ ನೀಡಲಾಗುತ್ತಿದೆ. ಆದರೆ ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳ ಕಲಿಕೆಗೆ ಶ್ರಮವಹಿಸದಿರುವುದು ವಿಪರ್ಯಾಸದ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ 137ನೇ ಜಯಂತಿ ಅಂಗವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಕಡಿಮೆ. ಆದ್ದರಿಂದ ಖಾಸಗಿ ಶಾಲೆಗಳು ಗ್ರಾಮೀಣ ಭಾಗದ ಮಕ್ಕಳನ್ನು ಸೆಳೆಯಲು ವಾಹನ ವ್ಯವಸ್ಥೆ ಕಲ್ಪಿಸಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಫಲಿತಾಂಶದಲ್ಲೂ ಪ್ರಗತಿ ಸಾಧಿಸುತ್ತಿವೆ. ಪೋಷಕರು ಸಹ ಸರ್ಕಾರಿ ಶಾಲೆ ಶಿಕ್ಷಣ ತೊರೆದು ಖಾಸಗಿ ಶಾಲೆಗಳ ಕಡೆ ಹೆಚ್ಚಿನ ಒಲವು ತೋರುತ್ತಿರುವುದು ಬೇಸರದ ಸಂಗತಿ ಎಂದರು.
ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಶಿಕ್ಷಕರಿದ್ದಾರೆ. ಆದರೆ ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚಿನ ಶ್ರಮವಹಿಸಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವಂತವರು ಹೆಚ್ಚಿನದಾಗಿ ಬಡಕುಟುಂಬದಿಂದ ಬಂದಂತಹ ಮಕ್ಕಳಾಗಿರುತ್ತಾರೆ. ಬಡಕುಟುಂಬದ ಮಕ್ಕಳಿಗೆ ವಿದ್ಯೆ ಅಸ್ತ್ರವಾಗಿರುತ್ತದೆ. ಅವರ ಉಜ್ವಲ ಭವಿಷ್ಯ ರೂಪಿಸಿವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ತಹಸೀಲ್ದಾರ್ ಮಂಜುನಾಥ್, ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ಕೆ.ನಾಗಣ್ಣ, ಉಪನ್ಯಾಸಕ ನಂದೀಶ್.ಪಿ.ಕೆ, ಗಂಗಾಧರ್, ಗೋಟೂರು ಶಿವಪ್ಪ, ರಾಜಣ್ಣ, ಸಿದ್ದೇಶ್ವರ.ಕೆ.ಟಿ, ನಟರಾಜು, ಚೆನ್ನಿಗರಾಮಯ್ಯ, ಕೋಟೆಕಲ್ಲಯ್ಯ, ಸಂಜಯ್, ನರಸಿಂಹಮೂರ್ತಿ ಇದ್ದರು.